ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕೆ ಆಗ್ರಹ:ಕೊಡಗು ಜಿಲ್ಲಾ ಬಿಜೆಪಿಯಿಂದ ಅರಣ್ಯ ಭವನಕ್ಕೆ ಮುತ್ತಿಗೆಗೆ ಯತ್ನ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿ ಮಾನವ ಸಂಘರ್ಷದಲ್ಲಿ ಮಾನವ ಪಾಣ ಹಾನಿ ಬೆಳೆನಷ್ಟ ಹಾಗೂ ಅರಣ್ಯ ಇಲಾಖೆಯ ಕಿರುಕುಳಕ್ಕೆ ಶಾಶ್ವತ ಪರಿಹಾರ ರೂಪಿಸಲು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ನಗರದ ಅರಣ್ಯಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕೊಡಗು ಜಿಲ್ಲೆಯಲ್ಲಿ ಕಳೆದ ಹತ್ತು ದಿವಸಗಳಲ್ಲಿ ಕಾಲೇಜು ವಿದ್ಯಾರ್ಥಿನಿ, ರೈತ ಕಾರ್ಮಿಕರು ಸೇರಿ ೪ ಜನರು ಕಾಡಾನೆ ತುಳಿತದಿಂದ ಪ್ರಾಣ ಕಳೆದುಕೊಂಡಿದ್ದು ಅನೇಕರು ಗಾಯಗೊಂಡಿದ್ದಾರೆ. ಇದರಿಂದ ಜಿಲ್ಲೆಯ ಜನತೆ ಹಗಲಿನ ಸಮಯದಲ್ಲಿ ಓಡಾಡಲು ಭಯಭೀತರಾಗಿದ್ದಾರೆ. ಮಾನವ ಪ್ರಾಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ, ಕಾಡಾನೆ ತುಳಿತಕ್ಕೆ ಒಳಗಾದ ಕುಂಟುಬಕ್ಕೆ ೨೦ಲಕ್ಷ ಪರಿಹಾರ ನೀಡಿ ಸರ್ಕಾರ ಕೈ ತೊಳೆದುಕೊಳ್ಳುವ ಕೆಲಸ ಮಾಡಬಾರದು. ಕನಿಷ್ಠ ಪಕ್ಷ ೧ ಕೋಟಿ ಪರಿಹಾರ ನೀಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಜಿಲ್ಲೆಯ ಅರಣ್ಯಕ್ಕೆ ಹೋಲಿಸಿದಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ಅಧಿಕವಾಗಿದ್ದು, ಭೌಗೋಳಿಕವಾಗಿ ಆಸಮತೋಲನ ಉಂಟಾಗಿದೆ. ಕಾಡು ಪ್ರಾಣಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಆರಣ್ಯದಲ್ಲಿ ಆಹಾರ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಅಧಿಕ ಸಂಖ್ಯೆಯಲ್ಲಿರುವ ಕಾಡು ಪ್ರಾಣಿಗಳನ್ನು ತಕ್ಷಣವೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು. ಜಿಲ್ಲೆಯಲ್ಲಿ ಆನೆ, ಹುಲಿ, ಚಿರತೆ, ಕಾಡು ಕೋಣ, ಮಂಗಗಳು ಸೇರಿ ಇತರ ಪ್ರಾಣಿಗಳಿಂದ ನಿರಂತರ ಕೃಷಿ ನಷ್ಟ ಉಂಟಾಗುತ್ತಿದ್ದು ಇದಕ್ಕೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕಾಡುಪ್ರಾಣಿಗಳು ಆರಣ್ಯದಿಂದ ಖಾಸಗಿ ಜಮೀನಿಗೆ ಬರದಂತೆ ಅರಣ್ಯದಂಚಿನಲ್ಲಿ ಶಾಶ್ವತ ರೈಲ್ವೆ ಬ್ಯಾರಿಕೇಡ್, ಆನೆ ಕಂದಕ, ಸೋಲಾರ್ ಬೇಲಿಗಳನ್ನು ನಿರ್ಮಿಸಿ ಪ್ರಾಣಿಗಳು ನಾಡಿಗೆ ಬರದಂತೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಮಾಡಿರುವ ಕಂದಕ, ಬ್ಯಾರಿಗೇಟ್‌ಗಳ ದುರಸ್ಥಿ ಮಾಡಬೇಕು ಕಳೆದ ೩ ವರ್ಷದಿಂದ ಈ ಕೆಲಸ ಆಗಿರುವುದಿಲ್ಲ ಎಂದು ಆರೋಪಿಸಿದ ಪ್ರತಿಭಟನಾ ನಿರತರು, ಆರಣ್ಯದಂಚಿನಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ಕುಡಿಯುವ ನೀರು ಪೂರೈಕೆಗೆ ಅರಣ್ಯ ಇಲಾಖೆಯವರು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ರೈತರು ಹತ್ತಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿರುವ ಸಿ ಮತ್ತು ಡಿ ಜಮೀನುಗಳಿಗೆ ಅರಣ್ಯ ಇಲಾಖೆಯವರು ದಾಳಿ ನಡೆಸಿ ಬೆಳೆಗಳನ್ನು ನಾಶಪಡಿಸುವುದನ್ನು ಕೂಡಲೇ ನಿಲ್ಲಿಸಬೇಕು. ಅವರನ್ನು ಆ ಸ್ಥಳದಿಂದ ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಮುಂದಾಗಬಾರದು. ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಬೆಳೆಗಳ ರಕ್ಷಣೆಗಾಗಿ ಅವರ ಜಮೀನಿನ ಸುತ್ತ ಸೋಲಾರ್ ಬೇಲಿ ಅಥವಾ ಕಂದಕ ನಿರ್ಮಿಸಲು ಸರ್ಕಾರ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ನಿರತರು ಜಿಲ್ಲೆಯ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರ ಕೂಡಲೇ ಕಮ ಕೈಗೊಳ್ಳಬೇಕು. ಅರಣ್ಯ ಸಚಿವರು ಜಿಲ್ಲೆಯ ಜನ ಪ್ರತಿನಿಧಿಗಳು ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಹಿತ ಉನ್ನತ ಮಟ್ಟದ ಸಭೆಯನ್ನು ಏರ್ಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಠಿ ಆಗಮಿಸುವಂತೆ ಪ್ರತಿಭಟನಾ ನಿರತರು ಆಗ್ರಹಿಸಿದರು. ಸುಮಾರು ೨ ಗಂಟೆಯಾದರು ಸ್ಥಳಕ್ಕೆ ಬಾರದ ಹಿನ್ನೆಲೆ ಅರಣ್ಯಭವನಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾ ನಿರತರು ಮುಂದಾದರು. ಈ ಸಂದರ್ಭ ಪೊಲೀಸರು ಪ್ರತಿಭಟನಾ ನಿರತರನ್ನು ನಿಯಂತ್ರಿಸುವಲ್ಲಿ ಸಫಲರಾದರು. ನಂತರ ಸುಮಾರು ೩೦ ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿ ೨೭೫ರನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಪ್ಪಚ್ಚು ರಂಜನ್, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಪ್ರದಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ.ಲೋಕೇಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಬೆಳೆಗಾರರು ಪಾಲ್ಗೊಂಡಿ
ದ್ದರು.