ಕೊಡಗು: ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಸಿಸೇರಿಯನ್ ಹೆರಿಗೆ! ಖಾಸಗಿ ಆಸ್ಪತ್ರೆಗಳಲ್ಲಿ ಕಳೆದ ಒಂದು ವರ್ಷದಲ್ಲಿ ಶೇ. 49.26ರಷ್ಟು ಸಿಸೇರಿಯನ್ ಹೆರಿಗೆ ಪ್ರಮಾಣ!

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ(Coorgdaily): ಕೊಡಗು ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ.ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ.ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ 2025ರ ಮಾರ್ಚ್ ತಿಂಗಳ ಅಂತ್ಯದವರೆಗೆ ಒಟ್ಟು 806 ಹೆರಿಗೆ ಆಗಿದ್ದು,ಇದರಲ್ಲಿ 397 ಹೆರಿಗೆಯನ್ನು ಸಿಸೇರಿಯನ್ ಮೂಲಕ ಮಾಡಲಾಗಿದೆ.409 ನಾರ್ಮಲ್ ಡೆಲಿವರಿ ಆಗಿದೆ.
ಕೊಡಗು ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಪ್ರಮಾಣದ ಶೇಕಡಾ 49.26ರಷ್ಟು ಇದ್ದು,ಹೆರಿಗೆಗಾಗಿ ದಾಖಲಾಗುವ ಪ್ರಕರಣದಲ್ಲಿ ಅರ್ಧಕ್ಕೆ ಅರ್ಧದಷ್ಟು ಪ್ರಕರಣಗಳನ್ನು ಸಿಜೇರಿಯನ್ ಮೂಲಕವೇ ಹೆರಿಗೆ ಮಾಡಲಾಗುತ್ತಿರುವ ಸಂಗತಿ ಬಯಲಾಗಿದೆ.2024ರ ಏಪ್ರಿಲ್ ನಿಂದ 2025ರ ಮಾರ್ಚ್ ತಿಂಗಳವರೆಗೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 49.26 ರಷ್ಟು ಹೆರಿಗೆ ಪ್ರಕರಣಗಳನ್ನು ಹೆರಿಗೆ ಮೂಲಕವೇ ಮಾಡಲಾಗಿದ್ದು,ಹಲವು ಅನುಮಾನಗಳಿಗೆ ಕಾರಣವಾಗಿದೆ.ಮತ್ತೊಂದೆಡೆ ಕೆಲವೊಂದು ಗಂಭೀರ ಹೆರಿಗೆ ಪ್ರಕರಣವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನಿಭಾಯಿಸಲು ಕಷ್ಟಸಾಧ್ಯ ಎಂಬ ಕಾರಣಕ್ಕಾಗಿಯೇ ಖಾಸಗಿ ಆಸ್ಪತ್ರೆ ಮೊರೆ ಹೋಗಿ ಸಿಸೇರಿಯನ್ ಮಾಡಲಾಗುತ್ತಿದೆ ಎಂಬ ವಾದ ಕೂಡ ಇದೆ.
ಸಿಸೇರಿಯನ್ ಹೆರಿಗೆ ಹೆಚ್ಚಳಕ್ಕೆ ಕಾರಣವೇನು!
ಸಣ್ಣ ಜಿಲ್ಲೆಗೆ ಕೊಡಗು ಜಿಲ್ಲೆಯಲ್ಲಿ ಸಿಸೇರಿಯನ್ ಹೆರಿಗೆ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಇಲ್ಲದಿದ್ದರು ಕೂಡ ಜಿಲ್ಲೆಯ ಸಣ್ಣಪುಟ್ಟ ಖಾಸಗಿ ಆಸ್ಪತ್ರೆಗಳು ಸಿಜೇರಿಯನ್ ಹೆರಿಗೆಗೆ ಪ್ರಮುಖ ಆದ್ಯತೆ ಕೊಡುತ್ತಿದ್ದಾರೆ.ತಮ್ಮ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಗರ್ಭಿಣಿಯರಿಗೆ ಆರಂಭದಲ್ಲೇ ಭಯದ ವಾತಾವರಣವನ್ನು ಹುಟ್ಟಿಸಿ ,ನಾರ್ಮಲ್ ಡೆಲಿವರಿ ಸಾಧ್ಯವಿಲ್ಲ, ಸಿಜೇರಿಯನ್ ಮೂಲಕವೇ ಹೆರಿಗೆ ಮಾಡಬೇಕೆಂದು ಹೇಳಿ ಹಣದಾಸೆಗಾಗಿ ಸಿಜೇರಿಯನ್ ಹೆರಿಗೆಯನ್ನು ಮಾಡುತ್ತಿದ್ದಾರೆ.ಯಾವುದೇ ವೆಚ್ಚವಿಲ್ಲದೆ ಸಿಜೇರಿಯನ್ ಹಾಗೂ ನಾರ್ಮಲ್ ಡೆಲಿವರಿ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತದೆ.ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ನಾರ್ಮಲ್ ಡೆಲಿವರಿಗೆ ಕನಿಷ್ಠ 25 ರಿಂದ 40 ಸಾವಿರ ಹಾಗೂ ಸಿಜೇರಿಯನ್ ಹೆರಿಗೆಗೆ ಕನಿಷ್ಠ 1 ಲಕ್ಷರೂ ಪಾವತಿಸಬೇಕಾಗಿದೆ ಎಂದು ಇತ್ತೀಚಿಗೆ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆದ ಬಾಣಂತಿಯೊಬ್ಬರ ಗಂಡ ಮಾಹಿತಿ ಹಂಚಿಕೊಂಡಿದ್ದಾರೆ.ಸಿಜೇರಿಯನ್ ಹೆರಿಗೆ ಹೆಚ್ಚಳಕ್ಕೆ ನಾನಾ ಕಾರಣಗಳಿವೆ.ಹೆರಿಗೆ ನೋವು ಸಹಿಸಿಕೊಳ್ಳಲು ಗರ್ಭಿಣಿಯರಿಗೆ ಆಗುತ್ತಿಲ್ಲ.ಅದಲ್ಲದೇ ಬೇಗ ಹೆರಿಗೆ ಆಗಲಿ ಎಂಬ ಕಾರಣದಿಂದಾಗಿ ಸಿಜೇರಿಯನ್ ಹೆರಿಗೆ ಮೊರೆ ಹೋಗುತ್ತಿದ್ದಾರೆ.ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಆಸ್ಪತ್ರೆಗಳು ಸಿಜೇರಿಯನ್ ಹೆರಿಗೆಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪಗಳು ಇದೆ.
ಮೊದಲ ಹೆರಿಗೆ ಸಿಜೇರಿಯನ್ ಆಗಿದ್ದರೆ ಎರಡನೇ ಹೆರಿಗೆ ಕೂಡ ಸಿಜೇರಿಯನ್ ಮಾಡಬೇಕೆಂಬ ಪದ್ಧತಿ ರೂಢಿಸಿಕೊಂಡಿದ್ದಾರೆ.ಅದಲ್ಲದೇ ಇತ್ತೀಚಿನ ವರ್ಷಗಳಲ್ಲಿ ತಡವಾಗಿ ಮದುವೆಯಾಗುವುದು,ಬೇಗ ಗರ್ಭಣಿಯಾಗದೇ ಇರುವುದು ದೇಹದಲ್ಲಿ ಹಾರ್ಮೋನ್ ಅಸಮತೋಲನೆಗೆ ಕಾರಣವಾಗುತ್ತದೆ, ಇಂತವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗದೆ ಸಿಜೇರಿಯನ್ ಹೆರಿಗೆಗೆ ಮೊರೆ ಹೋಗುತ್ತಿದ್ದಾರೆ.ಇದನ್ನೇ ಬಂಡವಾಳ ಮಾಡಿರುವ ಕೆಲವು ಖಾಸಗಿ ಆಸ್ಪತ್ರೆಗಳು ಸಿಜೇರಿಯನ್ ಹೆರಿಗೆಗೆ ಆದ್ಯತೆ ನೀಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಹಾರ ಕ್ರಮದಲ್ಲಿ ಯಥೇಚ್ಛವಾದ ಬದಲಾವಣೆ ಕಾಣುತ್ತಿರುವುದುರಿಂದ ಎಲ್ಲರ ಜೀವನ ಶೈಲಿ ಕೂಡ ಬದಲಾವಣೆ ಕಾಣುತ್ತಿದೆ.ಗರ್ಭದಲ್ಲಿ ಆರೋಗ್ಯವಂತ 3.ಕೆಜಿಗೂ ಹೆಚ್ಚು ತೂಕದ ಮಗು ಇದ್ದರೆ ನಾರ್ಮಲ್ ಹೆರಿಗೆ ಆಗುವ ಸಾಧ್ಯತೆ ಕಡಿಮೆ ಇದೆ.ಗರ್ಭ ಧರಿಸಿದಾಗ ತಾಯಿಗೆ ಸಕ್ಕರೆ ಕಾಯಿಲೆ ಬಂದರೆ ಇಂತಹ ಪ್ರಕರಣವನ್ನು ಸಿಜೇರಿಯನ್ ಹೆರಿಗೆ ಆದ್ಯತೆ ನೀಡುತ್ತಿದ್ದಾರೆ.ಮತ್ತೊಂದೆಡೆ ಇಂತಹ ವಿಶೇಷ ದಿನಗಳು,ಪವಿತ್ರ ದಿನಗಳಂದೇ ಮಗುವಿಗೆ ಜನ್ಮ ನೀಡಬೇಕೆಂಬ ಹುಚ್ಚು ಮೂಢನಂಬಿಕೆ ಇಂದಿಗೂ ಕೂಡ ನಮ್ಮ ಸಮಾಜದಲ್ಲಿ ಬೇರೂರಿದೆ.ಇದರಿಂದಾಗಿ ಸಿಜೇರಿಯನ್ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ.ಈ ಎಲ್ಲಾ ಕಾರಣಗಳಿಂದಾಗಿ ಖಾಸಗಿ ಆಸ್ಪತ್ರೆಗಳು ಬಳಸಿಕೊಂಡು ಹೆಚ್ಚು ಸಿಜೇರಿಯನ್ ಗೆ ಆದ್ಯತೆ ನೀಡುತ್ತಿದ್ದಾರೆ. ಹೈ ರಿಸ್ಕ್ ಹೆರಿಗೆ ಪ್ರಕರಣಗಳನ್ನು ಬಿಟ್ಟು ಉಳಿದ ನಾರ್ಮಲ್ ಡೆಲಿವರಿ ಕೂಡ ಖಾಸಗಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಹೆರಿಗೆಯಾಗಿ ಮಾರ್ಪಾಡು ಮಾಡುತ್ತಿರುವುದು ಹಲವು ಶಂಕೆಗೆ ಕಾರಣವಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಶೇಕಡಾ 29.00 ಸಿಜೇರಿಯನ್ ಹೆರಿಗೆ ಪ್ರಮಾಣ!
ಕೊಡಗು ಜಿಲ್ಲೆಯ ಸರ್ಕಾರಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ,ತಾಲ್ಲೂಕು ಹಾಗೂ ಮೆಡಿಕಲ್ ಕಾಲೇಜು ಸೇರಿ ಸಿಜೇರಿಯನ್ ಹೆರಿಗೆ ಪ್ರಮಾಣ ಶೇಕಡಾ 29.00 ರಷ್ಟಿದೆ.2024ರ ಏಪ್ರಿಲ್ ತಿಂಗಳಿನಿಂದ 2025ರ ಮಾರ್ಚ್ ಅಂತ್ಯದವರೆಗೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 5534 ಹೆರಿಗೆ ಆಗಿದ್ದು ಇದರಲ್ಲಿ,3929 ನಾರ್ಮಲ್ ಡೆಲಿವರಿ ಹಾಗೂ 1605 ಸಿಜೇರಿಯನ್ ಹೆರಿಗೆ ಆಗಿದೆ.ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿ ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಈ ವರ್ಷ ಮಾರ್ಚ್ ಅಂತ್ಯದವರೆಗೆ ಕೊಡಗು ಜಿಲ್ಲೆಯಲ್ಲಿ ಒಟ್ಟು 6340 ಹೆರಿಗೆ ಆಗಿದ್ದು, ಇದರಲ್ಲಿ 4338 ನಾರ್ಮಲ್ ಡೆಲಿವರಿ ಹಾಗೂ 2002 ಸಿಜೇರಿಯನ್ ಡೆಲಿವರಿ ಆಗಿದೆ.ಜಿಲ್ಲೆಯಲ್ಲಿ ಸಿಜೇರಿಯನ್ ಹೆರಿಗೆ ಪ್ರಮಾಣ ಶೇಕಡಾ 31.58 ರಷ್ಟಿದೆ.ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಸತತವಾಗಿ ಸಿಜೇರಿಯನ್ ಹೆರಿಗೆಗಳು ಹೆಚ್ಚಳವಾಗುತ್ತಿದೆ.2020-21ರಲ್ಲಿ ಶೇ.34ರಷ್ಟಿದ್ದ ಸಿಜೇರಿಯನ್ ಹೆರಿಗೆ ಪ್ರಮಾಣ ಪ್ರಸಕ್ತ ವರ್ಷ ಶೇ 47ಕ್ಕೇರಿಕೆ ಕಂಡಿದೆ.ಖಾಸಗಿ ಆಸ್ಪತ್ರೆಯಲ್ಲಿ ಶೇಕಡಾ 62ರಷ್ಟು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇಕಡಾ 38 ರಷ್ಟು ಸಿಜೇರಿಯನ್ ಹೆರಿಗೆ ಪ್ರಮಾಣ ಇದೆ.
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಸಿಜೇರಿಯನ್ ಹೆರಿಗೆ ಪ್ರಮಾಣ ಕೊಡಗು ಜಿಲ್ಲೆಯಲ್ಲಿ ಕಡಿಮೆ ಇದೆ.ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಪ್ರಮಾಣ ಕಡಿಮೆ ಇದ್ದು,ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಳವಾಗುತ್ತಿದೆ.ಇದರ ಬಗ್ಗೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸಂಬಂಧಿಸಿದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ,ಸಿಜೇರಿಯನ್ ಹೆರಿಗೆ ಪ್ರಮಾಣವನ್ನು ಕಡಿಮೆಗೊಳಿಸಲು ಕಟ್ಟುನಿಟ್ಟಾದ ಆದೇಶವನ್ನು ಕೊಟ್ಟಿದ್ದೇವೆ.
ಕೆ.ಎಂ ಸತೀಶ್ ಕುಮಾರ್, ಡಿಎಚ್ಓ ಕೊಡಗು.
What's Your Reaction?






