ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ:ಸಿದ್ದಾಪುರ ಪಟ್ಟಣದಲ್ಲಿ ಏಳು ತಿಂಗಳು ಕಳೆದರೂ ಪೂರ್ಣಗೊಳ್ಳದ ಕಾಮಗಾರಿ!: ಬೇಸಿಗೆಯಲ್ಲಿ ಧೂಳು,ಮಳೆಗಾಲದಲ್ಲಿ ಕೆಸರು
(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಕಳೆದ ನವೆಂಬರ್ ತಿಂಗಳಲ್ಲಿ ಪ್ರಾರಂಭಗೊಂಡ ರಸ್ತೆ ಕಾಮಗಾರಿ ಮಳೆಗಾಲ ಸಮೀಪಿಸುತ್ತಿದ್ದರು ಕೂಡ ಇದುವರೆಗೆ ಪೂರ್ಣಗೊಂಡಿಲ್ಲ.ಬೇಸಿಗೆಯಲ್ಲಿ ಅರ್ಧಕ್ಕೆ ನಿಲ್ಲಿಸಿದ ರಸ್ತೆ ಕಾಮಗಾರಿಯಿಂದಾಗಿ ಧೂಳಿನ ವಾತಾವರಣದಲ್ಲೇ ಓಡಾಡುತ್ತಿದ್ದ ಜನತೆಗೆ ಈಗ ಕೆಸರುಮಯ ಗುಂಡಿ ಬಿದ್ದ ರಸ್ತೆಯಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಳೆಗಾಲ ಮುಗಿಯುವರೆಗೂ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಕಷ್ಟಸಾಧ್ಯ.ಮಳೆಗಾಲದಲ್ಲಿ ಕೆಸರಿನಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಕೊಣನೂರಿನಿಂದ ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ತೆರಳುವ ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ಕೊಣನೂರು ಮಾಕುಟ್ಟ ರಾಜ್ಯ ಹೆದ್ದಾರಿಯ ಸಿದ್ದಾಪುರ ಪಟ್ಟಣದಿಂದ-ಇಂಜಿಲಗೆರ ವರೆಗೆ ಎರಡು ಕಿಲೋಮೀಟರ್ ಡಾಂಬರೀಕರಣ ಕಾಮಗಾರಿ ಮತ್ತು ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಕಳೆದ ನವೆಂಬರ್ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು.ಏಳು ತಿಂಗಳು ಕಳೆದರೂ ಕೂಡ ಇದುವರೆಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಸಿದ್ದಾಪುರದ ಪಾಲಿಬೆಟ್ಟ ರಸ್ತೆಯಿಂದ ಇಂಜಿಲಗೆರೆವರೆಗೆ ಅಂದಾಜು ಎರಡು ಕಿಲೋಮೀಟರ್ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.ಅದಲ್ಲದೇ ಪಾಲಿಬೆಟ್ಟ ರಸ್ತೆಯಿಂದ ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದವರೆಗೆ ಒಳ ಚರಂಡಿ ಕಾಮಗಾರಿಗೂ ಕೂಡ ಚಾಲನೆ ನೀಡಲಾಗಿತ್ತು.ಆದರೆ ರಸ್ತೆ ಕಾಮಗಾರಿ ಹಾಗೂ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ.ಬೇಸಿಗೆ ಕಾಲದಲ್ಲಿ ಈ ಭಾಗದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಯಿಂದಾಗಿ ಧೂಳಿನ ವಾತವರಣದಲ್ಲಿ ಮಾಸ್ಕ್ ಧರಿಸಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು.ಇದೀಗ ಮಳೆಗಾಲ ಸಮೀಪಿಸುತ್ತಿದ್ದು ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ರಸ್ತೆಯ ಒಂದು ಅಡಿ ಎತ್ತರದಲ್ಲಿ ಚರಂಡಿ ನಿರ್ಮಾಣ!!
ಪಾಲಿಬೆಟ್ಟ ರಸ್ತೆಯಿಂದ ಸಿದ್ದಾಪುರ ಪಟ್ಟಣದ ಅಯ್ಯಪ್ಪ ದೇವಸ್ಥಾನದವರೆಗೆ ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ.ಆದರೆ ಒಳಚರಂಡಿ ಕಾಮಗಾರಿಯೂ ಸಂಪೂರ್ಣ ಅವೈಜ್ಞಾನಿಕ ಮಾದರಿಯಲ್ಲಿ ನಿರ್ಮಾಣವಾಗಿದೆ.ರಸ್ತೆಯ ಒಂದು ಅಡಿ ಎತ್ತರದಲ್ಲಿ ಚರಂಡಿ ನಿರ್ಮಾಣ ಮಾಡಿರುವುದರಿಂದ ವರ್ತಕರು ತಮ್ಮ ವಾಹನಗಳನ್ನು ರಸ್ತೆಯ ಬದಿಯಲೇ ನಿಲ್ಲಿಸುವಂತಾಗಿದೆ.ಒಂದು ಬದಿಯಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳ್ಳದೆ ಮತ್ತೊಂದು ಬದಿಯಲ್ಲಿ ಕೂಡ ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಅರ್ಧಕ್ಕೆ ನಿಲ್ಲಿಸಲಾಗಿದೆ.ರಸ್ತೆಯ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೆ ಚರಂಡಿ ಕಾಮಗಾರಿ ಮಾಡಲಾಗಿದೆ.ಮತ್ತೊಂದೆಡೆ ವಿದ್ಯುತ್ ಕಂಬಗಳು ಇರುವ ಜಾಗದಲ್ಲಿ ಚರಂಡಿ ನಿರ್ಮಾಣದ ಮಾಡದೆ,ವಿದ್ಯುತ್ ಕಂಬಗಳು ಇಲ್ಲದ ಜಾಗದಲ್ಲಿ ಚರಂಡಿ ನಿರ್ಮಾಣ ಮಾಡಲಾಗಿದೆ.ಚರಂಡಿ ಕಾಮಗಾರಿಯಿಂದಾಗಿಯೇ ರಸ್ತೆಯೂ ಸಂಪೂರ್ಣ ಹದಗೆಟ್ಟಿದೆ.ಚರಂಡಿ ಕಾಮಗಾರಿಯಿಂದಾಗಿ ಅಲ್ಲಲ್ಲಿ ಮಣ್ಣು ಸಂಗ್ರಹವಾಗಿದ್ದು,ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯೂ ಸಂಪೂರ್ಣ ಕೆಸರುಮಯವಾಗಿದೆ.
ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದರು! ಮತ್ತೆ ಇತ್ತ ತಿರುಗಿನೋಡಿಯೇ ಇಲ್ಲ!
ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಕಾಮಗಾರಿಯೂ ಸಿದ್ದಾಪುರ ಪಟ್ಟಣದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಕಳೆದ ತಿಂಗಳು ಸಿದ್ದಾಪುರದ ವರ್ತಕರು ಸಿದ್ದಾಪುರದಲ್ಲಿ ಗುತ್ತಿಗಾದರರು ಹಾಗೂ ಇಂಜಿನಿಯರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.ವಿದ್ಯುತ್ ಇಲಾಖೆ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೆ ಇರುವುದರಿಂದ ಕಾಮಗಾರಿ ವಿಳಂಬಗೊಂಡಿದೆ.ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು.ಆದರೆ ಇದೀಗ ತಿಂಗಳು ಕಳೆದರೂ ಕೂಡ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಇತ್ತ ತಿರುಗಿ ನೋಡಿಯೇ ಇಲ್ಲ.ಕೊಣನೂರು-ಮಾಕುಟ್ಟ ರಾಜ್ಯದ ಹೆದ್ದಾರಿಯಲ್ಲೇ ಮೂರು ಶಾಲೆಗಳು,ಖಾಸಗಿ ಆಸ್ಪತ್ರೆಗಳು ಇವೆ.ಇದೀಗ ಶಾಲೆಗಳು ಈ ವಾರದಲ್ಲೇ ಆರಂಭವಾಗಲಿವೆ.ಮಳೆಗಾಲದಲ್ಲಿ ಗುಂಡಿ ಬಿದ್ದ ರಸ್ತೆಗಳ ಕೆಸರಿನಲ್ಲೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬಗೊಂಡಿದೆ. ಜಿಲ್ಲೆಗೆ ಮುಂದಿನ ವಾರ ಮುಂಗಾರು ಪ್ರವೇಶಿಸಲಿದೆ.ಮಳೆಗಾಲದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದು ಕಷ್ಟಸಾಧ್ಯ.ಈ ವಾರದಲ್ಲೇ ರಸ್ತೆಯ ಹೊಂಡಗಳನ್ನು ಮುಚ್ಚುವುರದರೊಂದಿಗೆ ತಾತ್ಕಾಲಿಕವಾಗಿ ಓಡಾಡಲು ಅವಕಾಶ ಮಾಡಿಕೊಡಬೇಕಾಗಿ ಇಲ್ಲಿನ ವರ್ತಕರು ಆಗ್ರಹಿಸಿದ್ದಾರೆ.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ವರ್ತಕರು ಹಾಗೂ ಸಾರ್ವಜನಿಕರು ಎಚ್ಚರಿಸಿದ್ದಾರೆ.
25 ಕೋಟಿ ರೂ ವೆಚ್ಚದಲ್ಲಿ ಮೂರು ಕಡೆಗಳಲ್ಲಿ ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಎಲ್ಲಾ ಕಡೆಗಳಿಗೂ ಮೆಟೀರಿಯಲ್ಸ್ ಪೂರೈಕೆ ತಡವಾಗುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ.ಗುತ್ತಿಗೆದಾರರಿಗೆ 11 ತಿಂಗಳ ಕಾಲವಕಾಶವಿದ್ದರೂ ಮಳೆಗಾಲದೊಳಗೆ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ಕೊಟ್ಟಿದ್ದರು.
ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ನೋಟೀಸ್ ನೀಡಲಾಗಿದೆ.ಮತ್ತೊಮ್ಮೆ ಗುತ್ತಿಗೆದಾರರಿಗೆ ನೋಟೀಸ್ ನೀಡಿ ಶೀಘ್ರ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗುವುದು.
ಲಿಂಗರಾಜ್,ಇಂಜಿನಿಯರ್ ಲೋಕೋಪಯೋಗಿ ಇಲಾಖೆ.