ಇಡೀ ಊರಿಗೆ ನೀರು ಪೂರೈಸುತ್ತಿದ್ದ ಟ್ಯಾಂಕ್ ನಲ್ಲಿತ್ತು ಮೃತದೇಹ!
ಇಂದೋರ್,ಜ.6: ಮಧ್ಯಪ್ರದೇಶದ ಇಂದೋರ್ ನಗರದ ಭಾಗೀರಥಪುರ ಪ್ರದೇಶದಲ್ಲಿ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣಗೊಂಡ ಪರಿಣಾಮ ಗಂಭೀರ ಆರೋಗ್ಯ ಬಿಕ್ಕಟ್ಟು ಉಂಟಾಗಿದೆ. ಕಲುಷಿತ ನೀರು ಸೇವನೆಯಿಂದ ಅತಿಸಾರ ವ್ಯಾಪಕವಾಗಿ ಹರಡಿದ್ದು, 142 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 11 ಮಂದಿಯ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಆರು ಸಾವುಗಳನ್ನು ಜಿಲ್ಲಾಡಳಿತ ಅಧಿಕೃತವಾಗಿ ದೃಢಪಡಿಸಿದೆ.
ಈ ಘಟನೆ ಇಂದೋರ್‌ಗೆ ಹೊಸದಲ್ಲ ಎಂಬುದು ಆತಂಕಕಾರಿ ಅಂಶ. ಸುಮಾರು 30 ವರ್ಷಗಳ ಹಿಂದೆ ನಗರದಲ್ಲಿ ಇದೇ ರೀತಿಯ ಭೀಕರ ದುರಂತ ಸಂಭವಿಸಿತ್ತು. ಸುಭಾಷ್ ಚೌಕ್‌ನ ನೀರಿನ ಟ್ಯಾಂಕ್‌ನಲ್ಲಿ ಕೊಳೆತ ಮಾನವ ಶವ ಪತ್ತೆಯಾಗಿದ್ದು, ಪಶ್ಚಿಮ ಇಂದೋರ್‌ನ ಸಾವಿರಾರು ಮನೆಗಳಿಗೆ ವಾರಗಳ ಕಾಲ ಅದೇ ಟ್ಯಾಂಕ್‌ನ ನೀರು ಪೂರೈಸಲಾಗಿತ್ತು. ಜನರು ನಿರಂತರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೂ, ನೀರಿನ ಮೂಲದಲ್ಲೇ ಶವವಿರುವ ಸಂಗತಿ ಯಾರಿಗೂ ತಿಳಿದಿರಲಿಲ್ಲ. ನಂತರ ನಲ್ಲಿಗಳಲ್ಲಿ ದುರ್ವಾಸನೆ ಕಾಣಿಸಿಕೊಂಡಾಗ ಟ್ಯಾಂಕ್ ತೆರೆಯಲಾಗಿದ್ದು, ಅಲ್ಲಿ ಮಾನವ ಅಸ್ಥಿಪಂಜರ ಪತ್ತೆಯಾಗಿತ್ತು. ಈ ಘಟನೆ ನಗರವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು.
ಇಂದಿನ ಪರಿಸ್ಥಿತಿಯೂ ಅದಕ್ಕಿಂತ ಕಡಿಮೆಯಿಲ್ಲ. ಭಾಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರಿನಿಂದ ಅತಿಸಾರ ವ್ಯಾಪಕವಾಗಿ ಹರಡಿದ್ದು, ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದೆ. ಅಧಿಕಾರಿಗಳ ಪ್ರಕಾರ, ಸಮೀಕ್ಷೆಯ ವೇಳೆ 2,354 ಮನೆಗಳ 9,416 ಜನರನ್ನು ತಪಾಸಣೆ ಮಾಡಲಾಗಿದ್ದು, 20 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸಾಂಕ್ರಾಮಿಕ ರೋಗ ಹರಡಿದ ಬಳಿಕ ಒಟ್ಟು 398 ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ 256 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.
ಸೋಂಕಿನ ಮೂಲ ಪತ್ತೆಹಚ್ಚುವ ನಿಟ್ಟಿನಲ್ಲಿ ತಜ್ಞರ ತಂಡ ಇಂದೋರ್‌ಗೆ ಆಗಮಿಸಿದ್ದು, ನೀರು ಪೂರೈಕೆ ವ್ಯವಸ್ಥೆ ಹಾಗೂ ಚರಂಡಿ ನೀರಿನ ಮಿಶ್ರಣದ ಕಾರಣಗಳ ಕುರಿತು ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ. ಮಾಧವ ಪ್ರಸಾದ್ ಹಸಾನಿ ಅವರ ಪ್ರಕಾರ, ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಸಲುವಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಆದರೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಆರು ತಿಂಗಳ ಮಗು ಸೇರಿದಂತೆ ಒಟ್ಟು 16 ಮಂದಿ ಅತಿಸಾರದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಆಡಳಿತ ಪರಿಶೀಲನೆ ನಡೆಸುತ್ತಿದೆ. 30 ವರ್ಷಗಳ ಹಿಂದಿನ ಭೀಕರ ದುರಂತ ಮರುಕಳಿಸುವಂತೆ ಕಂಡುಬರುತ್ತಿರುವ ಈ ಘಟನೆ, ಇಂದೋರ್‌ನ ಕುಡಿಯುವ ನೀರಿನ ವ್ಯವಸ್ಥೆಯ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.