ಅವಧಿಗೂ ಮುಂಚಿತವಾಗಿಯೇ ಮರ ಸಾಗಾಟಕ್ಕೆ ನಿರ್ಬಂಧ: ಮಳೆಯಿಂದಾಗಿ ಲೋಡ್ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ ಮರ ವ್ಯಾಪಾರಿಗಳು!

ಅವಧಿಗೂ ಮುಂಚಿತವಾಗಿಯೇ ಮರ  ಸಾಗಾಟಕ್ಕೆ ನಿರ್ಬಂಧ: ಮಳೆಯಿಂದಾಗಿ ಲೋಡ್ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ ಮರ ವ್ಯಾಪಾರಿಗಳು!
ಸಿಲ್ವರ್ ಮರ ಲೋಡ್ ಮಾಡುತ್ತಿರುವ ದೃಶ್ಯ...
ಅವಧಿಗೂ ಮುಂಚಿತವಾಗಿಯೇ ಮರ  ಸಾಗಾಟಕ್ಕೆ ನಿರ್ಬಂಧ: ಮಳೆಯಿಂದಾಗಿ ಲೋಡ್ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ ಮರ ವ್ಯಾಪಾರಿಗಳು!

(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ:ಜೂನ್ 06 ರಿಂದ ಜುಲೈ 05 ರವರೆಗೆ ಎಲ್ಲಾ ರೀತಿಯ ಮರದ ದಿಮ್ಮಿ ಸಾಗಾಟದ ವಾಹನಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪ್ರಸಕ್ತ ವರ್ಷ ಮಳೆಗಾಲಕ್ಕೂ ಮುನ್ನವೇ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅಬ್ಬರಿಸಿರುವುದರಿಂದ ಜಿಲ್ಲೆಯಲ್ಲಿ ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.ಜುಲೈ-ಆಗಸ್ಟ್ ತಿಂಗಳಲ್ಲಿ ನಿರ್ಬಂಧ ಹೇರಲಾಗುತ್ತಿದ್ದ ಮರಗಳ ದಿಮ್ಮಿಗಳ ಸಾಗಾಟಕ್ಕೆ ಎರಡು ತಿಂಗಳ ಮುಂಚಿತವಾಗಿಯೇ ನಿರ್ಬಂಧ ವಿಧಿಸಿರುವುದರಿಂದ ಮರದ ವ್ಯಾಪಾರಿಗಳು ಹಾಗೂ ಕೆಲಸಗಾರರು ಸಂಕಷ್ಟ ಸಿಲುಕಿಕೊಂಡಿದ್ದಾರೆ.

ಅನಿರೀಕ್ಷಿತವಾಗಿ ಕಳೆದ ಒಂದು ವಾರಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಈಗಾಗಲೇ ತೋಟದಲ್ಲಿ ಕಡಿದು ಹಾಕಿರುವ ಸಿಲ್ವರ್ ಸೇರಿ ಇನ್ನಿತರ ಮರಗಳನ್ನು ಲೋಡ್ ಮಾಡಲು ಸಾಧ್ಯವಾಗದೇ ತೋಟದಲ್ಲೇ ಬಿಟ್ಟಿದ್ದಾರೆ.ಇದೀಗ ಮಳೆಯ ಕಡಿಮೆಯಾಗಿದ್ದರೂ ಕೂಡ ತೋಟದಿಂದ ಮರವನ್ನು ಲೋಡ್ ಮಾಡುವುದು ಕಷ್ಟಸಾಧ್ಯ.ಮಳೆ ಕಡಿಮೆಯಾದ ನಂತರ ಮಾತ್ರವೇ ತೋಟದ ಮಾಲೀಕರು ಮರ ಲೋಡ್ ಮಾಡಲು ಅವಕಾಶ ನೀಡುತ್ತಾರೆ ಎಂದು ಮರದ ವ್ಯಾಪಾರಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮೇ ಅಂತ್ಯ ಅಥವಾ ಜೂನ್ ತಿಂಗಳೊಳಗೆ ಬಹುತೇಕ ಟಿಂಬರ್ ವ್ಯಾಪಾರಿಗಳು ಮರವನ್ನು ಲೋಡ್ ಮಾಡಿ ಮುಗಿಸುತ್ತಾರೆ.ಆದರೆ ಇದೀಗ ಜೂನ್ 06 ರಿಂದ ಮರ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿಗೆ ಮರದ ವ್ಯಾಪಾರಿಗಳು ಸಿಲುಕಿಕೊಂಡಿದ್ದಾರೆ.

ತೋಟದಲ್ಲೇ ಬಿದ್ದಿರುವ ಮರಗಳು!

ಮೇ ತಿಂಗಳ ಅಂತ್ಯದೊಳಗೆ ಮರಗಳನ್ನು ಲೋಡ್ ಮಾಡುವ ಪ್ಲ್ಯಾನ್ ಮಾಡಿದ್ದ ಮರದ ವ್ಯಾಪಾರಿ ಗಳಿಗೆ ಪೂರ್ವ ಮುಂಗಾರು ಶಾಕ್ ಕೊಟ್ಟಿದೆ.ಮೇ ತಿಂಗಳ ಅಂತ್ಯದೊಳಗೆ ಮರ‌ ಕಡಿಯಲು ಮುಂಗಡ ಹಣ ಪಾವತಿಸಿದ್ದ ವ್ಯಾಪಾರಿಗಳಿಗೂ ಕೂಡ ಇದೀಗ ಸಂಕಷ್ಟ ಎದುರಾಗಿದೆ.ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮರ ಕಡಿಯಲು ಹಾಗೂ ಮರವನ್ನು ಲೋಡ್ ಮಾಡಲು ತೋಟದ ಮಾಲೀಕರು ಸಮ್ಮತ್ತಿ ಸೂಚಿಸುವುದಿಲ್ಲ.ತೋಟ ಹಾಳಾಗುತ್ತದೆ ಎಂಬ ಕಾರಣದಿಂದಾಗಿ ನಿರಾಕರಿಸುತ್ತಾರೆ.ಜಿಲ್ಲೆಯಲ್ಲಿ ಬಹುತೇಕ ಭಾಗಗಳಲ್ಲಿ ಸಾವಿರಾರು ಸಿಲ್ವರ್ ಮರಗಳನ್ನು ಕಡಿದು ತೋಟದಲ್ಲೇ ಮರದ ವ್ಯಾಪಾರಿಗಳು ಬಿಟ್ಟಿದ್ದಾರೆ.ಮಳೆಯಿಂದಾಗಿ ಲೋಡ್ ಮಾಡಲು ಸಾಧ್ಯವಾಗಲಿಲ್ಲ.ಜೂನ್ ತಿಂಗಳಲ್ಲಿ ಮರವನ್ನು ಕಡಿಯುತ್ತೇವೆ ಎಂದು ಅಡ್ವಾನ್ಸ್ ಹಣವನ್ನು ಪಾವತಿಸಿದವರು ಕೂಡ, ಮರವನ್ನು ಕಡಿಯಲು ಸಾಧ್ಯವಾಗದೆ ಸ್ಥಿತಿಗೆ ಸಿಲುಕಿದ್ದಾರೆ.ಅವಧಿಗೂ ಮೊದಲೇ ಮರದ ದಿಮ್ಮಿಗಳ ಸಾಕಾಟಕ್ಕೆ ನಿರ್ಬಂಧಿಸಿರುವುದರಿಂದ ಮರದ ವ್ಯಾಪಾರಿಗಳು ಹಾಗೂ ಮರದ ಕೆಲಸವನ್ನೇ ನಂಬಿ ಬದುಕುತ್ತಿರುವ ಕಾರ್ಮಿಕರು ಕೂಡ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ತರಾತುರಿಯಲ್ಲಿ ಮರ ಲೋಡಿಂಗ್!

ಒಂದೆಡೆ ಜೂ 06ರಿಂದ ಮರದ ದಿಮ್ಮಿಗಳ ಸಾಕಾಟಕ್ಕೆ ನಿಷೇಧ ಎಂಬ ಜಿಲ್ಲಾಧಿಕಾರಿಗಳ ಆದೇಶ ಸೋಮವಾರ ಹೊರಬರುತ್ತಿದ್ದಂತೆ,ಮಂಗಳವಾರ ಬೆಳಗ್ಗಿನಿಂದಲೇ‌ ಸಿಲ್ವರ್ ಮರಗಳನ್ನು ಮಳೆಯಲ್ಲೇ ಲೋಡ್ ಮಾಡುತ್ತಿರುವ ದೃಶ್ಯ ಜಿಲ್ಲೆಯಲ್ಲಿ ಮಂಗಳವಾರದಿಂದಲೇ ಕಂಡು ಬರುತ್ತಿದೆ.ಬಹುತೇಕ ಸಿಲ್ವರ್ ಮರಗಳೇ ಆಗಿರುವುದು ಮತ್ತೊಂದು ವಿಶೇಷವಾಗಿದೆ.ಮಳೆಯನ್ನೂ ಲೆಕ್ಕಿಸದೆ ಈಗಾಗಲೇ ಕಡಿದು ರಸ್ತೆಯ ಬದಿಯಲ್ಲಿ ಹಾಕಿರುವ ಮರಗಳನ್ನು ಲೋಡಿಂಗ್ ಮಾಡುತ್ತಾರೆ.ಇನ್ನೂಳಿದ ಒಂದು ವಾರದೊಳಗೆ ಮರವನ್ನು ಲೋಡ್ ಮಾಡಿ ಮುಗಿಸದಿದ್ದರೆ ಮರದ ವ್ಯಾಪಾರಿಗಳು ನಷ್ಟಕ್ಕೆ ಸಿಲುಕುವುದು ಗ್ಯಾರಂಟಿ.ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೂ ಕೂಡ ಮರ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ಮುಂದುವರಿಸುತ್ತಾರೆ.ಇದರಿಂದಾಗಿ ಈಗಾಗಲೇ ಲೋಡ್ ಮಾಡಲು ಕಡಿದು ಹಾಕಿರುವ ಮರಗಳನ್ನು ಲೋಡಿಂಗ್ ಮಾಡಲು ಸಾಧ್ಯವಾಗದೆ ಮರಗಳನ್ನು ತೋಟ ಅಥವಾ ರಸ್ತೆಯ ಬದಿಯಲ್ಲಿ ಬಿಡಬೇಕಾಗುತ್ತದೆ.ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದ ರಸ್ತೆ ಬದಿಗಳಲ್ಲಿ ಸಿಲ್ವರ್ ಮರಗಳ ದಿಮ್ಮಿಗಳ ಬಿದ್ದಿರುವ ದೃಶ್ಯ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.

ನಾಮಕಾವಸ್ಥೆಯ ನಿರ್ಬಂಧ ಅಷ್ಟೇ?

ಜಿಲ್ಲಾಧಿಕಾರಿಗಳು ಜೂನ್ 06 ರಿಂದ ಜುಲೈ 05ರವರೆಗೆ ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.ಆದರೆ ಪ್ರತೀ ವರ್ಷವು ಕೂಡ ಜಿಲ್ಲಾಧಿಕಾರಿ ಆದೇಶ ಕೇವಲ ಪತ್ರಕ್ಕೆ ಮಾತ್ರ ಸೀಮಿತವಾಗಿರುತ್ತದೆ.ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ವಿದ್ದರು ಕೂಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಎಗ್ಗಿಲ್ಲದೇ ದೊಡ್ಡ ಪ್ರಭಾವಿ ಟಿಂಬರ್ ವ್ಯಾಪರಿಗಳು ಮರವನ್ನು ಲೋಡ್ ಮಾಡಿ ರಾತ್ರೋ ರಾತ್ರಿ ಮರದ ಲೋಡ್ ಸಾಗಿಸುತ್ತಾರೆ.ಅರಣ್ಯಾಧಿಕಾರಗಳು ಹಾಗೂ ಕೆಲ ಪೊಲೀಸ್ ಅಧಿಕಾರಿಗಳ ಸಹಕರಾದಿಂದಲೇ ಮರವನ್ನು ಎಗ್ಗಿಲ್ಲದೇ ದೊಡ್ಡ ದೊಡ್ಡ ಪ್ರಭಾವಿಗಳು ಮರವನ್ನು ಲೋಡಿಂಗ್ ಮಾಡಿ ಸಾಗಿಸುತ್ತಾರೆ.ಮತ್ತೊಂದೆಡೆ ಯಾವುದೇ ಪ್ರಭಾವವನ್ನು ‌ಬಳಸಲು ಸಾಧ್ಯವಿಲ್ಲದ ಸಣ್ಣಪುಟ್ಟ ಮರ ವ್ಯಾಪಾರಿಗಳು ಪ್ರತೀ ವರ್ಷ ಮೂರ್ನಾಲ್ಕು ತಿಂಗಳು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ.ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ಇದ್ದರೂ ಕೂಡ ಲೋಡ್ ವೊಂದಕ್ಕೆ ಇಂತಿಷ್ಟು ಹಣವನ್ನು ನೀಡಿ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ಸಾಗಿಸುವ ಕೆಲಸ ಸಲೀಸಾಗಿ ಜಿಲ್ಲೆಯಲ್ಲಿ ಸಾಗುತ್ತಲೇ ಇದೆ.ಇದರ ಹಿಂದೆ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಕೈವಾಡ ಇದೆ ಎಂಬ ಆರೋಪ ಕೇಳಿಬರುತ್ತಿದೆ.ಇದೀಗ ಮರದ ದಿಮ್ಮಿಗಳ ಸಾಗಾಟಕ್ಕೆ ಜುಲೈ ಅಂತ್ಯದವರೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಶಾಕಸರ ಬಳಿ ನಿಯೋಗ ತೆರಳುವ ಜಿಲ್ಲೆಯ ಟಿಂಬರ್ ಮಾಲೀಕರು ಹಾಗೂ ವ್ಯಾಪಾರಿಗಳ ಅಸೋಸಿಯೇಷನ್ ತೀರ್ಮಾನ ಕೈಗೊಂಡಿದ್ದಾರೆ.

ಟಿಂಬರ್ ಕೆಲಸವನ್ನೇ ನಂಬಿ ಬದುಕುತ್ತಿರುವ ಸಾವಿರಾರು ಮಂದಿ ಜಿಲ್ಲೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಎರಡು ತಿಂಗಳ ಮುಂಚಿತವಾಗಿ ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿರುವುದರಿಂದ ಕೆಲಸಗಾರರು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.ಮರ ಕೆಲಸಗಾರರಿಗೆ 3-4 ತಿಂಗಳು ಕೆಲಸವೇ ಇರಲ್ಲ.ಇದೀಗ ಶಾಲೆ ಕೂಡ ಪುನರಾರಂಭಗೊಂಡಿದೆ.ಮರವನ್ನು ಕಡಿಯಲು ಎಸ್ಟೇಟ್ ಪೇಮೆಂಟ್ ಮಾಡಿದ್ದೇವೆ.ಮರ ಕಡಿದು ತೋಟದಲ್ಲಿ ಬಾಕಿ ಉಳಿದಿದೆ.ಒಂದು ವಾರಗಳ ಕಾಲ‌ ಮಾತ್ರ ಮರದ ದಿಮ್ಮಿಗಳ ಸಾಗಾಟಕ್ಕೆ ಅವಕಾಶ ನೀಡಿರುವುದರಿಂದ ಮರವನ್ನು ಲೋಡ್ ಮಾಡಲು ಸಾಧ್ಯವಿಲ್ಲ.ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಲೋಡ್ ಮಾಡುವುದು ಕಷ್ಟಕರ.ಹಾಗೂ ಹೆಚ್ಚು ಲೋಡ್ ಅನ್ನು ಲೋಡಿಂಗ್ ವಾಹನಗಳು ಹಾಕಿಕೊಳ್ಳುವುದಿಲ್ಲ.ಜಿಲ್ಲಾಡಳಿತ ತಮ್ಮ ಆದೇಶವನ್ನು ಪುನರ್ ಪರಿಶೀಲಿಸಬೇಕು.

ಪಿ.ವಿ ಅಂತೋಣಿ,ಟಿಂಬರ್ ಮರ್ಚೆಂಟ್ ಸಿದ್ದಾಪುರ.

------------------------------------------------

 ಜಿಲ್ಲೆಯ ರಸ್ತೆಗಳು, ಸಾರ್ವಜನಿಕ ಆಸ್ತಿ-ಪಾಸ್ತಿಗಳ ರಕ್ಷಣೆ ಹಾಗೂ ಪ್ರಯಾಣಿಕರ ಮತ್ತು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963 ರ ವಿಧಿ 31, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005ರ ಕಲಂ 33, ಮೋಟಾರು ವಾಹನಗಳ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989 ರ(ತಿದ್ದುಪಡಿ ನಿಯಮಾವಳಿ 1990) ನಿಯಮ 221-ಎ(5) ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಸ್ಥಳೀಯರ, ವಾಹನ ಸವಾರರ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಕೊಡಗು ಜಿಲ್ಲೆಯಾದ್ಯಂತ ಜೂನ್, 06 ರಿಂದ ಜುಲೈ, 05 ರವರೆಗೆ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸುವಂತೆ,ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಾಣಿಕೆ ವಾಹನಗಳು, ವಾಹನದ ನೋಂದಣಿ ತೂಕ 18,500 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣೆ ಮಾಡುವ ಸರಕು ಸಾಗಾಣಿಕೆ ವಾಹನಗಳು, ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ವಾಹನಗಳು, ಆರ್ಟಿಕ್ಯೂಲೇಟೆಡ್ ವಾಹನಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ದಂಡಾಧಿಕಾರಿಗೆ ಆದೇಶ ನೀಡಿದ್ದೇವೆ.

ವೆಂಕಟ್ ರಾಜಾ,ಜಿಲ್ಲಾಧಿಕಾರಿ ಕೊಡಗು.