ಐಟಿ ದಾಳಿ ವೇಳೆಯೇ ಶೂಟ್​ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್​ ಆತ್ಮಹತ್ಯೆ

ಐಟಿ ದಾಳಿ ವೇಳೆಯೇ ಶೂಟ್​ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್​ ಆತ್ಮಹತ್ಯೆ

ಬೆಂಗಳೂರು, ಜ30: ರಿಯಲ್​ ಎಸ್ಟೇಟ್​ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ (C.J. Roy) ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ನಗರದ ಹೊಸೂರು ರಸ್ತೆಯ ಲ್ಯಾಂಗ್​ಫೋರ್ಡ್ ಟೌನ್​ನಲ್ಲಿರುವ ಕಚೇರಿಯಲ್ಲಿ ನಡೆದಿದೆ.

 ಸ್ಥಳಕ್ಕೆ ಅಶೋಕ್​​ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆನೇಕಲ್​​ನ ನಾರಾಯಣ ಆಸ್ಪತ್ರೆಗೆ ಸಿಜೆ ರಾಯ್ ಶವ ರವಾನಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನು? ಸಿ.ಜೆ.ರಾಯ್​​ ಅವರು ಕಾನ್ಫಿಡೆಂಟ್ ಗ್ರೂಪ್​ ಎಂಬ ರಿಯಲ್​ ಎಸ್ಟೇಟ್​ ಕಂಪನಿಯನ್ನು ಹುಟ್ಟುಹಾಕಿದ್ದರು. ಪದೇ ಪದೆ ಐಟಿ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಇಂದು ಕೂಡ IT ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್​​ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೊಸೂರು ರಸ್ತೆಯ ಲ್ಯಾಂಗ್​ಫೋರ್ಡ್ ಟೌನ್​ನಲ್ಲಿರುವ ಕಚೇರಿ ಮೇಲೆ IT ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ಕೂಡ ದಾಳಿ ಮಾಡಿದ್ದರು. ಮಧ್ಯಾಹ್ನ ಕಚೇರಿಗೆ ಬಂದಿದ್ದ ಉದ್ಯಮಿ ಸಿ.ಜೆ.ರಾಯ್, ಒಂದು ಗಂಟೆ ಐಟಿ ವಿಚಾರಣೆ ಎದುರಿಸಿದ್ದಾರೆ. ಅಧಿಕಾರಿಗಳಿಗೆ ಕೆಲ ದಾಖಲೆ ಸಹ ಕೊಟ್ಟಿದ್ದಾರೆ.

ಮತ್ತಷ್ಟು ದಾಖಲೆ ತರಲು ರೂಂ​ಗೆ ಹೋಗಿದ್ದು, ಈ ವೇಳೆ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡಿದ್ದಾರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಿ.ಜೆ.ರಾಯ್ ಕೊನೆಯುಸಿರೆಳೆದಿದ್ದಾರೆ. ಖುದ್ದು ಡಿಸಿಪಿ ಅಕ್ಷಯ್​​ ಅವರು ತನಿಖೆ ನಡೆಸಿದ್ದು, ಈಗಾಗಲೇ ಫೈರ್ ಮಾಡಿಕೊಂಡ ಪಿಸ್ತೂಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಕಚೇರಿ ಕೊಠಡಿಯಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ್ದಾರೆ.

ಜೊತೆಗೆ ಯಾವುದಾದರೂ ಡೆತ್ ನೋಟ್ ಇದೆಯಾ ಅಥವಾ ಮೊಬೈಲ್​ನಲ್ಲಿ ಏನಾದ್ರೂ ಇದೆಯಾ ಅಥವಾ ಯಾರಿಗಾದ್ರೂ ಮೆಸೇಜ್ ಮಾಡಿದ್ದರಾ ಎಂದು ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆಗೆ ಹಿನ್ನೆಲೆ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಿಂದ ಐಟಿ ಅಧಿಕಾರಿಗಳು ವಾಪಸ್​​ ಆಗಿದ್ದಾರೆ. ಇಂದು ಬೆಳಗ್ಗೆ ದಾಳಿ ಮಾಡಿದ್ದ ಆದಾಯ ತೆರಿಗೆ ಅಧಿಕಾರಿಗಳು 2 ಕಾರುಗಳಲ್ಲಿ 10 ಜನರು ವಾಪಸ್ ಆಗಿದ್ದಾರೆ.