ಕಮಾನ್ ಕೊಡಗು ಲೆಡ್ಸ್ ಫುಟ್ಬಾಲ್: ಇಂದಿನಿಂದ ಗೋಣಿಕೊಪ್ಪಲಿನಲ್ಲಿ ಕೊಡಗು ವರ್ಲ್ಡ್ ಕಪ್ ಕಾಲ್ಚೆಂಡು ಪಂದ್ಯಾವಳಿ

May 1, 2025 - 01:04
 0  79
ಕಮಾನ್ ಕೊಡಗು ಲೆಡ್ಸ್ ಫುಟ್ಬಾಲ್:  ಇಂದಿನಿಂದ ಗೋಣಿಕೊಪ್ಪಲಿನಲ್ಲಿ ಕೊಡಗು ವರ್ಲ್ಡ್ ಕಪ್ ಕಾಲ್ಚೆಂಡು ಪಂದ್ಯಾವಳಿ
ಕಮಾನ್ ಕೊಡಗು ಲೆಡ್ಸ್ ಫುಟ್ಬಾಲ್:  ಇಂದಿನಿಂದ ಗೋಣಿಕೊಪ್ಪಲಿನಲ್ಲಿ ಕೊಡಗು ವರ್ಲ್ಡ್ ಕಪ್ ಕಾಲ್ಚೆಂಡು ಪಂದ್ಯಾವಳಿ

(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಫುಟ್ಬಾಲ್ ಕ್ರೀಡಾಕೂಟಗಳು ಹೆಚ್ಚಾಗಿ ನಡೆಯುತ್ತಿದೆ.ಅದಲ್ಲದೇ ಗ್ರಾಮೀಣ ಭಾಗಗಳಲ್ಲಿ ಯುವಕರು ಫುಟ್ಬಾಲ್ ನತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿರಂತರವಾಗಿ ಫುಟ್ಬಾಲ್ ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತಿದ್ದು, ಇದೀಗ ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯವಾಳಿ ನಡೆಯಲಿದೆ. ಇದೇನಪ್ಪಾ! ಕೊಡಗಿನಲ್ಲಿ ವರ್ಲ್ಡ್‌ ಕಪ್ ಫುಟ್ಬಾಲ್ ನಡೆಯುತ್ತಿದೆಯೇ! ಎಂದು ಅಚ್ಚರಿಪಟ್ಟಿರಾ!

ಹೌದು ಇದು ಕೊಡಗಿನ ಕ್ರೀಡಾಪ್ರೇಮಿಗಳು ಅಚ್ಚರಿ ಪಡಬೇಕಾದ ಮತ್ತು ಕುತೂಹಲದಿಂದ ಕಾಯುತ್ತಿರುವ ಫುಟ್ಬಾಲ್ ಕ್ರೀಡಾಕೂಟವನ್ನು ಕೊಡಗಿನ ಪ್ರತಿಷ್ಠಿತ ಸಂಘಗಳಲ್ಲಿ ಒಂದಾಗಿರುವ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಲ್ ಇಂಡಿಯಾ ಸೂಪರ್ ಫೈವ್ಸ್ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಟೂರ್ನಮೆಂಟ್ ಮೇ 01 ರಿಂದ 04ರವರೆಗೆ ಹೊನಲು ಬೆಳಕಿನ ಮಾದರಿಯಲ್ಲಿ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಿದೆ. ಈಗಾಗಲೇ ಪಂದ್ಯಾವಳಿಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದ್ದು ಪ್ರೇಕ್ಷಕರಿಗೆ ಪಂದ್ಯಾಟವನ್ನು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಕೂಡ ಮಾಡಲಾಗಿದೆ.

ವಿದೇಶಿ ಆಟಗಾರರ ಕಲರವ:

Lಆಲ್ ಸ್ಟಾರ್ ಯೂತ್ ಕ್ಲಬ್ ಆಯೋಜಿಸಿರುವ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿದೇಶಿ ಆಟಗಾರರ ಕಲರವ ನಡೆಯಲಿದೆ.ಕೊಡಗಿನ ವಿವಿಧ ಕ್ಲಬ್‌ ಗಳು ತಮ್ಮ ಕ್ಲಬ್ ಗಳ ಹೆಸರಿನಲ್ಲಿ ವಿದೇಶಿ ಆಟಗಾರರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದೆ.ಅರಬ್ ದೇಶದ ಕತ್ತರ್ ನಿಂದ ಕೂಡ ಆಲ್ ಸ್ಟಾರ್ ವರ್ಲ್ಡ್ ಕಪ್ ಆಡಲು ಆಟಗಾರರು ಆಗಮಿಸುತ್ತಿರುವುದು ಕ್ರೀಡಾಕೂಟದ ಮತ್ತೊಂದು ವಿಶೇಷವಾಗಿದೆ. ಅದಲ್ಲದೇ ಆಫ್ರಿಕಾ ಖಂಡದ ವಿವಿಧ ದೇಶದ ಆಟಗಾರರು ಕೂಡ ತಮ್ಮ ಕಾಲ್ಚಳಕ ಪ್ರದರ್ಶಿಸಲಿದ್ದಾರೆ‌. 32 ತಂಡಗಳು ಕೊಡಗು ವರ್ಲ್ಡ್ ಕಪ್ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದು,ಮಂಗಳೂರು, ಮಲಪ್ಪುರಂ,ಚಿಕ್ಕಮಗಳೂರು, ಕ್ಯಾಲಿಕಟ್, ಬೆಂಗಳೂರು,ತಿರುಚ್ಚಿ, ಮುಂಬೈ,ತಮಿಳುನಾಡಿನ,ಪ್ರತಿಷ್ಠಿತ ತಂಡಗಳು ಭಾಗವಹಿಸಲಿದೆ. ಭಾರತದ ದೇಶದ ಪ್ರತಿಷ್ಠಿತ ಲೀಗ್ ಗಳಲ್ಲಿ ಒಂದಾಗಿರುವ ಐ-ಲೀಗ್ ನಲ್ಲಿ ಪ್ರಸ್ತುತ ಆಡುತ್ತಿರುವ ಆಟಗಾರರು ಕೂಡ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ಆಲ್ ಸ್ಟಾರ್ ಪಂದ್ಯಾವಳಿಯ ಮತ್ತೊಂದು ವಿಶೇಷ. ಅದಲ್ಲದೇ ಆಟಗಾರರಿಗೆ ಎಲ್ಲಾ ರೀತಿಯ ವಸತಿ ವ್ಯವಸ್ಥೆ ಕೂಡ ಮಾಡಲಾಗಿದೆ.

ಚಾಂಪಿಯನ್ ತಂಡಕ್ಕೆ ಎರಡು ಲಕ್ಷ ನಗದು ಬಹುಮಾನ:

ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಲ್ ಸ್ಟಾರ್ ಯೂತ್ ಕ್ಲಬ್ ಆಯೋಜಿಸಿರುವ ಕೊಡಗು ವರ್ಲ್ಡ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ತಂಡಕ್ಕೆ ಎರಡು ಲಕ್ಷ ರೂ ನಗದು ಬಹುಮಾನ ನೀಡಲಾಗುತ್ತಿದೆ. ಇದು ಕೊಡಗಿನ ಫುಟ್ಬಾಲ್ ಇತಿಹಾಸದಲ್ಲಿ ಇದುವರೆಗಿನ ಗರಿಷ್ಠ ಮೊತ್ತ. ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ಒಂದು ಲಕ್ಷ ರೂ ನಗದು ನೀಡಲಾಗುತ್ತಿದೆ. ಅದರೊಂದಿಗೆ ವಿಶೇಷ ಆಕರ್ಷಣೆಯ ಟ್ರೋಫಿ ಕೂಡ ನೀಡಲಾಗುತ್ತಿದೆ. ವಿದೇಶಿ ಆಟಗಾರರು, ಮುಂಬೈ,ತಮಿಳುನಾಡು,ಕೇರಳ,ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಆಡುತ್ತಿರುವ ಆಟಗಾರರು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದರಿಂದ ಆಟಗಾರರಿಗೆ ಮತ್ತು ತಂಡಗಳಿಗೆ ಹೆಚ್ಚು ಖರ್ಚು ಉಂಟಾಗಲಿದೆ. ಈ ಎಲ್ಲಾ ಉದ್ದೇಶಗಳನ್ನು ಮನಗಂಡು ಆಲ್ ಸ್ಟಾರ್ ಯೂತ್ ಕ್ಲಬ್ ಆಟಗಾರರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಎರಡು ಲಕ್ಷ ರೂ ನಗದು ಬಹುಮಾನವನ್ನು ನೀಡಲಾಗುತ್ತಿದೆ. ಅದರೊಂದಿಗೆ ವೈಯಕ್ತಿಕ ಬಹುಮಾನ ಮತ್ತು ಪ್ರತೀ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೂಡ ನೀಡಲಾಗುತ್ತಿದೆ.

ಬಡಹೆಣ್ಣು ಮಕ್ಕಳ ವಿವಾಹ ನಡೆಸುವ ಉದ್ದೇಶ:

ಕೊಡಗು ಜಿಲ್ಲೆಯಲ್ಲಿ ಕ್ರೀಡಾಕೂಟಗಳಿಗೇನೂ ಯಾವುದೇ ಬರವಿಲ್ಲ.ದೊಡ್ಡಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಿ,ಲಕ್ಷಾಂತರ ರೂ ಖರ್ಚುಮಾಡುವ ಕ್ಲಬ್ ಗಳು ಕೂಡ ಜಿಲ್ಲೆಯಲ್ಲಿ ಇದೆ.ಲಕ್ಷಾಂತರ ರೂ ದಾನಿಗಳಿಂದ ಸಂಗ್ರಹಿಸಿ ಕ್ರೀಡಾ ಕೂಟವನ್ನು ಆಯೋಜಿಸಿ, ಕೆಲವೊಂದು ಕ್ಲಬ್ ಗಳು ಹಣ ಮಾಡುವ ಉದ್ದೇಶದೊಂದಿಗೆ ಟೂರ್ನಮೆಂಟ್ ಮಾಡುತ್ತಿದ್ದಾರೆ ಎಂಬ ಆರೋಪಗಳು ಹಲವು ಬಾರಿ ಜಿಲ್ಲೆಯಲ್ಲಿ ಕೇಳಿಬಂದಿದೆ. ಕ್ರೀಡಾಕೂಟ ಆಯೋಜಿಸಿ ಲಕ್ಷಾಂತರ ರೂ ನಷ್ಟವೊಂದಿರುವ ಸಂಸ್ಥೆಗಳು ಕೂಡ ಜಿಲ್ಲೆಯಲ್ಲಿ ಇದೆ ಎಂಬುದು ಮತ್ತೊಂದು ವಿಶೇಷ. ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಕ್ರೀಡಾಕೂಟವನ್ನು ನಡೆಸಿ ಬಾಕಿ ಉಳಿದಿರುವ ಹಣವನ್ನು ಸಮಾಜಸೇವೆಗೆ ಬಳಸುವ ಕ್ಲಬ್‌ ಗಳು ಬೆರಳೆಣಿಕೆಯಷ್ಟು ಮಾತ್ರ.

ಬಹುತೇಕರು ಕ್ರೀಡಾಕೂಟದ ನಂತರ ಬಾಕಿ ಉಳಿಯುವ ಸಂಪನ್ಮೂಲದಿಂದ ಮೋಜು-ಮಸ್ತಿಗೆ ಹೆಚ್ಚು ಆಸಕ್ತಿ ಕೊಡುತ್ತಿದ್ದಾರೆ.ಆದರೆ ಎಲ್ಲರಿಗೂ ವಿಭಿನ್ನವಾಗಿ, ದಾನಿಗಳಿಂದ ಸಂಗ್ರಹಿಸುವ ದೇಣಿಗೆಗೆ ಸದಾ ಗೌರವ ಇರಬೇಕು,ಒಂದೊಂದು ರೂಗೂ ಕೂಡ ಮೌಲ್ಯ ಇದೆ ಎಂಬ ಉದ್ದೇಶದಿಂದ ಆಲ್ ಸ್ಟಾರ್ ಯೂತ್ ಕ್ಲಬ್ ಕೊಡಗು ವರ್ಲ್ಡ್ ಕಪ್ ಪಂದ್ಯಾವಳಿ ಆಯೋಜಿಸಿ ಬಾಕಿ ಉಳಿಯುವ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಕೊಡಗು ಜಿಲ್ಲೆಯ ಎರಡು ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹವನ್ನು ನಡೆಸಿ ಕೊಡಲು ಉದ್ದೇಶಿಸಿದೆ.ಈಗಾಗಲೇ ಆಲ್ ಸ್ಟಾರ್ ಯೂತ್ ಕ್ಲಬ್ ಈ ನಿರ್ಧಾರಕ್ಕೆ ಬಹುತೇಕ ದಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಆಯೋಜಿಸುವುದರ ಮೂಲಕ ಇಡೀ ಕೊಡಗು ಜಿಲ್ಲೆಯ ಇತರೆ ಫುಟ್ಬಾಲ್ ಕ್ಲಬ್ ಗಳಿಗೆ ಮಾದರಿಯಾಗಿದೆ.ಈ ಹಿಂದೆ ಕಳೆದ ವರ್ಷ ಕೊಡಗು ಜಿಲ್ಲೆಯ ಕಂಡಕರೆಯ ಗಾಂಧಿ ಯುವಕ ಸಂಘವು ಸರ್ವಧರ್ಮೀಯ ಬಡಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಇದೀಗ ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಯಶಸ್ವಿಗಾಗಿ ಆಲ್ ಸ್ಟಾರ್ ಯೂತ್ ಕ್ಲಬ್ ಸಿದ್ಧತೆ ನಡೆಸುತ್ತಿದೆ.ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಆಲ್ ಇಂಡಿಯಾ ಸೂಪರ್ ಫೈವ್ಸ್ ಕೊಡಗು ವರ್ಲ್ಡ್ ಫುಟ್ಬಾಲ್ ಪಂದ್ಯಾವಳಿಗಾಗಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೇ 01 ರಿಂದ 04 ರವರೆಗೆ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಮತ್ತೊಂದು ದಸರಾ ಉತ್ಸವ ನಡೆಯುವ ಸಾಧ್ಯತೆ ಇದೆ. ಕ್ರೀಡಾಕೂಟ ವೀಕ್ಷಿಸಲು 20 ರಿಂದ 25 ಸಾವಿರ ಜನರ ಸೇರುವ ನಿರೀಕ್ಷೆ ಇದೆ.

ಕಳೆದ ಒಂದು ವರ್ಷದಿಂದ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲು ಆಲ್ ಸ್ಟಾರ್ ಯೂತ್ ಕ್ಲಬ್ ಕಠಿಣ ಪರಿಶ್ರಮ ನಡೆಸುತ್ತಿದೆ.ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಪೂರ್ಣಗೊಂಡಿದೆ. ಆಲ್ ಸ್ಟಾರ್ ತಂಡದ ಯುವಕರ ಕಠಿಣ ಪರಿಶ್ರಮದಿಂದ ಯಶಸ್ವಿ ಕ್ರೀಡಾಕೂಟವನ್ನು,ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ದೇಶ,ವಿದೇಶ ಪ್ರತಿಷ್ಠಿತ ಆಟಗಾರರು ಮತ್ತು ಕ್ಲಬ್ ಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ರಾಷ್ಟ್ರೀಯ ಮಟ್ಟದ ನುರಿತ ತೀರ್ಪುಗಾರರು ಪಂದ್ಯಾವಳಿಯಲ್ಲಿ ತೀರ್ಪು ನೀಡಲಿದ್ದಾರೆ.

ಸುಧಾಕರ್ ರೈ(ಚುಮ್ಮಿ ರೈ), ಅಧ್ಯಕ್ಷರು ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪ.

------------------------------------------------------------------------------

ಕ್ರೀಡಾಕೂಟದ ಆಯೋಜಿಸುವುದು ಸವಾಲಿನ ಕೆಲಸ.ಹಾಗೂ ದೊಡ್ಡ ಮಟ್ಟದಲ್ಲಿ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಕನಿಷ್ಠ ಒಂದು ವರ್ಷಗಳ ನಿರಂತರವಾದ ಪರಿಶ್ರಮ ಅವಶ್ಯಕತೆ ಇದೆ. ಆಲ್ ಸ್ಟಾರ್ ಯೂತ್ ಕ್ಲಬ್ ಎರಡು ತಿಂಗಳ ಹಿಂದೆ ಕೊಡಗು ಜಿಲ್ಲೆಯ ಎಲ್ಲಾ ಫುಟ್ಬಾಲ್ ಕ್ಲಬ್ ಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯವನ್ನು ಪಡೆದಿದ್ದೇವೆ. ಎಲ್ಲರಿಗೂ ಮಾದರಿ ಮತ್ತು ಇತಿಹಾಸದ ಪುಟಗಳಲ್ಲಿ ಉಳಿಯುವಂತಹ ಕ್ರೀಡಾಕೂಟವನ್ನು ಆಯೋಜಿಸಲು ನಾವು ಸಿದ್ಧರಾಗಿದ್ದೇವೆ. ಆಲ್ ಸ್ಟಾರ್ ಯೂತ್ ಕ್ಲಬ್ ಬಡಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯವನ್ನು ನಡೆಸಲು ತೀರ್ಮಾನಿಸಿದ್ದೇವೆ.ಅದಲ್ಲದೇ ಆಲ್ ಸ್ಟಾರ್ ಯೂತ್ ಕ್ಲಬ್ ನಿರಂತರವಾಗಿ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಕೊಂಡಿದೆ.

ಮನೆಯಪಂಡ ಶೀಲಾ ಬೋಪಣ್ಣ, ಸಲಹೆಗಾರ್ತಿ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪ.

------------------------------------------------------------------------------

ಗೋಣಿಕೊಪ್ಪಲು ಇದೀಗ ಕ್ರೀಡೆಯ ತವರೂರಾಗಿದೆ. ವರ್ಷದಲ್ಲಿ ಹಲವಾರು ಕ್ರೀಡಾಕೂಟಗಳು ನಡೆಯುತ್ತಿದೆ.ಮೇ  01 ರಿಂ 04ರವೆಗೆ ಆಲ್ ಸ್ಟಾರ್ ಯುವಕರು ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ವಿಜೇತ ತಂಡಕ್ಕೆ ಎರಡು ಲಕ್ಷ ರೂ ನಗದು ಬಹುಮಾನವನ್ನು ನೀಡಿ ಪಂದ್ಯಾವಳಿ ಆಯೋಜಿಸಿದ್ದೇವೆ.ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ದೇಶ ಮತ್ತು ವಿದೇಶಿ ಆಟಗಾರರು ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.ಆಲ್ ಸ್ಟಾರ್ ಯುವಕರು ಕಳೆದ ಒಂದು ವರ್ಷದಿಂದ ಈ ಒಂದು ಕ್ರೀಡಾಕೂಟದ ಯಶಸ್ವಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ.

ಕುಲ್ಲಚಂಡ ಪ್ರಮೋದ್ ಗಣಪತಿ, ಗೌರವಾಧ್ಯಕ್ಷರು ಆಲ್ ಸ್ಟಾರ್ ಯೂತ್ ಕ್ಲಬ್,ಅಧ್ಯಕ್ಷರು ಗೋಣಿಕೊಪ್ಪ ಗ್ರಾಮ ಪಂಚಾಯಿತಿ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1