ಅಮ್ಮತ್ತಿ: ಸೂರಿಗಾಗಿ ಹೋರಾಟ: 17 ದಿನಕ್ಕೆ ಕಾಲಿಟ್ಟ ಪ್ರತಿಭಟನೆ!!! ತಿರುಗಿಯೂ ನೋಡದ ಜಿಲ್ಲಾಡಳಿತ!!!

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ:ಒಪ್ಪೊತ್ತಿನ ಊಟ,ದುಡಿದು ತಿನ್ನಲು ಒಂದೊಳ್ಳೆ ಕೆಲಸ ಹಾಗೂ ಒಂದು ಸೂರು ಮನಷ್ಯನಿಗೆ ಅತ್ಯವಶ್ಯಕ. ಆದರೆ ಸ್ವಾತಂತ್ರ್ಯ ಪಡೆದು, ಏಳು ದಶಕಗಳು ಕಳೆದರೂ ಕೂಡ ನಿವೇಶನವಿಲ್ಲದೆ ಅದೆಷ್ಟೋ ಮಂದಿ ನಮ್ಮ ನಡುವೆ ಜೀವನ ನಡೆಸುತ್ತಿದ್ದಾರೆ.ಕೊಡಗು ಜಿಲ್ಲೆಯಲ್ಲಿ ತೋಟ ಕೆಲಸ ಮಾಡುತ್ತಾ,ಕಾಫಿ ತೋಟಗಳಲ್ಲೇ ತಮ್ಮ ಜೀವನವನ್ನು ಕಳೆಯುತ್ತಿರುವ ಸಾವಿರಾರು ಮಂದಿಗೆ ಇಂದಿಗೂ ಕೂಡ ಒಂದು ಸೆಂಟ್ ಜಾಗ ತಮ್ಮ ಹೆಸರಿನಲ್ಲಿ ಇಲ್ಲದೆ, ಸೂರಿಲ್ಲದೆ ತೋಟದ ಲೈನ್ ಮನೆಗಳಲ್ಲಿಯೇ ಹಲವು ವರ್ಷಗಳಿಂದ ಜೀವನ ದೂಡುತ್ತಿದ್ದಾರೆ.ಕಳೆದ 17 ದಿನಗಳಿಂದ ಅಮ್ಮತ್ತಿಯ ನಾಡ ಕಛೇರಿಯ ಮುಂಭಾಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕುಟುಂಬದ ನಿವೇಶ ರಹಿತ 120ಕ್ಕೂ ಅಧಿಕ ಅಮ್ಮತ್ತಿ ಹೋಬಳಿ ಹಾಗೂ ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರು,ನಿವೇಶನ ನೀಡುವಂತೆ ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು ಕೂಡ ಜಿಲ್ಲಾಡಳಿತವಾಗಲಿ,ಸ್ಥಳೀಯ ಶಾಕಸರು ಇತ್ತ ತಿರುಗಿ ನೋಡೇ ಇಲ್ಲ.ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಯ ಸರ್ವೆ ನಂಬರ್ 54\1 ರಲ್ಲಿ ನಿವೇಶನ ರಹಿತ ಕುಟಂಬಗಳು ತಾತ್ಕಾಲಿಕ ಶೆಡ್ ನಿರ್ಮಿಸಿ,ನಿವೇಶನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.ಆದರೆ ವಿರಾಜಪೇಟೆ ತಾಲ್ಲೂಕು ಉಪ ತಹಶೀಲ್ದಾರ್ ಎರಡು ವಾರಗಳ ಹಿಂದೆ ಏಕಾಏಕಿ ಶೆಡ್ ಗಳನ್ನು ತೆರವುಗೊಳಿಸಿ ಪ್ರತಿಭಟನಾಕಾರರನ್ನು ಬೀದಿಪಾಲು ಮಾಡಿದ್ದರು.ಇದೀಗ ಕಳೆದ 17 ದಿನಗಳಿಂದ ಬಹುಜನ ಕಾರ್ಮಿಕ ಸಂಘ ಕೊಡಗು ಜಿಲ್ಲಾ ಸಮಿತಿ ಭೂಮಿ ಹಾಗೂ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕೊಡಗು ಜಿಲ್ಲೆ ನೇತೃತ್ವದಲ್ಲಿ ಅಮ್ಮತ್ತಿ ಹಾಗೂ ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರು ಅಮ್ಮತ್ತಿ ನಾಡ ಕಛೇರಿಯ ಮುಂಭಾಗದಲ್ಲಿ 100 ಕ್ಕೂ ಹೆಚ್ಚು ಮಂದಿ ಅಹೋರಾತ್ರಿ ಅನಿರ್ದಿಷ್ಟಾವಧಿ ಕಾಲದ ಪ್ರತಿಭಟನೆ ನಡೆಸುತ್ತಿದ್ದಾರೆ.ಪ್ರತಿಭಟನೆಯೂ ಸೋಮವಾರಕ್ಕೆ 17 ದಿನಕ್ಕೆ ಕಾಲಿಟ್ಟಿದ್ದು,ಇದುವರೆಗೂ ಕೂಡ ಯಾರು ಕೂಡ ಇತ್ತ ತಿರುಗಿ ನೋಡದಿರುವುದು ಆಡಳಿತ ವ್ಯವಸ್ಥೆಯ ಕೈಗನ್ನಡಿಯಾಗಿದೆ.
ಲೈನ್ ಮನೆಗಳಿಂದ ಮುಕ್ತಿ ಎಂದು!
ಅಮ್ಮತ್ತಿಯ ನಾಡ ಕಛೇರಿಯ ಮುಂಭಾಗದಲ್ಲಿ ಕಳೆದ 17 ದಿನಗಳಿಂದ ನಿವೇಶನಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ 100 ಅಧಿಕ ಕುಟುಂಬಗಳು ತೋಟದ ಲೈನ್ ಮನೆಗಳಲ್ಲೇ ವಾಸಮಾಡುತ್ತಿದ್ದಾರೆ.ತಮ್ಮ ದಿನನಿತ್ಯ ಕೂಲಿ ಕೆಲಸ ಎಲ್ಲವನ್ನೂ ಬಿಟ್ಟು ಒಂದಿಚ್ಚು ಸ್ವಂತ ಭೂಮಿಗಾಗಿ ಧ್ವನಿ ಎತ್ತಿದ್ದಾರೆ.ಹಿರಿಯರು,ಮಕ್ಕಳು,ಮಹಿಳೆಯರು, ವೃದ್ಧೆಯರು ಅಮ್ಮತ್ತಿ ನಾಡ ಕಚೇರಿಯ ಮುಂಭಾಗದಲ್ಲಿ ಟೆಂಡ್ ಹಾಕಿ ದಿನದೂಡುತ್ತಿದ್ದಾರೆ.ಮಳೆ,ಗಾಳಿ ಲೆಕ್ಕಿಸದೆ ಟೆಂಡ್ ನಲ್ಲಿ ದಿನ ಕಳೆಯುತ್ತಿದ್ದಾರೆ.ಪ್ರತಿಭಟನೆ ನಡೆಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿರುವವರು, ತೋಟದಲ್ಲೇ ಕೆಲಸ ಮಾಡಿ,ತೋಟದ ಲೈನ್ ಮನೆಗಳಲ್ಲೇ ಜೀವನ ನಡೆಸುವವರಾಗಿದ್ದಾರೆ.ತೋಟದ ಲೈನ್ ಮನೆಗಳಿಂದ ಹೊರಬಾರದ ಸ್ಥಿತಿಯಲ್ಲಿ ಕುಟುಂಬಗಳು ಸಿಲುಕಿಕೊಂಡಿದ್ದಾರೆ.ತೋಟದ ಮಾಲೀಕರಿಂದ ಸಾಲ ಪಡೆದು, ಅದನ್ನ ತೀರಿಸಲಾಗದೆ ತೋಟದ ಲೈನ್ ಮನೆಗಳೇ ಪ್ರಪಂಚ ಎಂದು ಬದುಕುತ್ತಿದ್ದಾರೆ.
ತೋಟದ ಮಾಲೀಕನಿಂದ ಸಾಲ ಪಡೆದ ಹಣವನ್ನು ಮರಳಿ ಕಟ್ಟಲಾಗದೆ,ಹೊರಗಡೆ ಹೋಗಲು ಕೂಡ ಸಾಧ್ಯವಾಗದೆ ತೋಟದ ಲೈನ್ ಮನೆಗಳಲ್ಲಿಯೇ ಹಲವು ದಶಕಗಳಿಂದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬಹುತೇಕ ಮಂದಿ ಇಂದಿಗೂ ಕೂಡ ಕೊಡಗು ಜಿಲ್ಲೆಯಲ್ಲಿ ಜೀವನ ನಡೆಸುತ್ತಿದ್ದಾರೆ.ಅಮ್ಮತ್ತಿ, ಕಾರ್ಮಾಡು,ಕಣ್ಣಂಗಾಲ ಹಾಗೂ ಅಮ್ಮತ್ತಿ ಹೋಬಳಿ ವ್ಯಾಪ್ತಿಯ ವಿವಿಧ ತೋಟದ ಲೈನ್ ಮನೆಗಳಲ್ಲಿ ವಾಸುಮಾಡುತ್ತಿರುವ 100 ಕ್ಕೂ ಅಧಿಕ ಕುಟುಂಬಗಳು ಬೀದಿಗೆ ಬಂದು ಸೂರಿಗಾಗಿ ಕಳೆದ 17 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕೂಡ ಜಿಲ್ಲಾಡಳಿತ ಕಣ್ಣು ಮಾತ್ರ ಇತ್ತ ಕಡೆ ನುಸುಳಿಲ್ಲ.ನಿವೇಶನ ನೀಡುವರೆಗೂ ಕೂಡ ಹೋರಾಟದಿಂದ ಹಿಂಜರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳುತ್ತಾರೆ.
ನಾವು ಹುಟ್ಟಿದ್ದು,ಬೆಳೆದಿದ್ದು ತೋಟದ ಲೈನ್ ಮನೆಗಳಲ್ಲೇ,ನಮ್ಮ ತಾತಂದಿರ ಕಾಲದಿಂದಲೂ ತೋಟದ ಲೈನ್ ಮನೆಗಳಲ್ಲಿ ಜೀವನ ನಡೆಸುತ್ತಿದ್ದೇವೆ.ನಮ್ಮ ಕುಟುಂಬ ತೋಟ ಕೆಲಸ ಮಾಡಿ ಜೀವನ ಮಾಡುತ್ತಿದ್ದೇವೆ.ಹಲವು ಬಾರಿ ನಿವೇಶನಕ್ಕಾಗಿ ಅರ್ಜಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ.ತೋಟದಲ್ಲಿ ಸಂಬಳವೂ ಹೆಚ್ಚು ಕೊಡಲ್ಲ.ನಮಗೆ ಸ್ವಂತ ಮನೆ ಮಾತ್ರ ಕೊಟ್ಟರೆ ಸಾಕು ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.ಅಮ್ಮತ್ತಿ ಕಾರ್ಮಾಡು ಹೋಬಳಿಯ ಸರ್ಕಾರಿ ಜಾಗದ ಸರ್ವೆ ನಂಬರ್ 151,155, 173\1, 3\3, 88\11,295\12, 54\1, 241\3, 137\1 ,290\2 ಕಂದಾಯ ಇಲಾಖೆ ಸರ್ವೆ ನಡೆಸಿ ಜಾಗವನ್ನು ಗುರುತಿಸಬೇಕೆಂದು ನಿವೇಶನ ರಹಿತರು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ,ಸ್ಥಳೀಯ ಗ್ರಾಮ ಪಂಚಾಯಿತಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಹಲವು ಬಾರಿ ನಾವು ಮನವಿ ಸಲ್ಲಿಸಿದ್ದೇವೆ,ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.ಅಮ್ಮತ್ತಿ ಕಾರ್ಮಾಡು ಹೋಬಳಿಯ 54\1 ಸರ್ಕಾರಿ ಕಂದಾಯ ಪೈಸಾರಿ ಜಾಗದಲ್ಲಿ ಟೆಂಡ್ ಹಾಕಿ ನಿವೇಶನ ನೀಡುವಂತೆ ಒತ್ತಾಯಿಸಿ ಅಲ್ಲಿಯೇ ಇದ್ದೆವು.ಏಕಾಏಕಿ ಉಪತಹಶೀಲ್ದಾರ್ ಟೆಂಡ್ ತೆರವುಗೊಳಿಸಿ ನೀರಿನ ಟ್ಯಾಂಕ್ ಹೊಡೆದುಹಾಕಿದ್ರು.ಇದೀಗ ನಾವು ಕಳೆದ 17 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ.ಸರ್ಕಾರದ ಯಾವುದೇ ಪೊಳ್ಳು ಭರವಸೆಗಳಿಗೆ ನಾವು ಬಗ್ಗುವುದಿಲ್ಲ. ನಿವೇಶನ ರಹಿತರಿಗೆ ಭೂಮಿ ಗುರುತಿಸಿ,ನಿವೇಶನ ನೀಡುವವರೆಗೆ ನಾವು ಇಲ್ಲಿಂದ ತೆರಳುವುದಿಲ್ಲ.ಜಿಲ್ಲಾಡಳಿತ ಭೂಮಾಲೀಕರ ಪರವಾಗಿ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ.ಆದಿವಾಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಂಡದವರನ್ನು ಜೀತದಾಳುವಾಗಿ ದುಡಿಸಿಕೊಳ್ಳುತ್ತಿದ್ದಾರೆ.
ಪಾಪಣ್ಣ ಅಮ್ಮತ್ತಿ, ನಿವೇಶನ ರಹಿತ ಹೋರಾಟ ಸಮಿತಿ ಪ್ರಮುಖ
-----------------------------------------------------
ಅಮ್ಮತ್ತಿ ಹೋಬಳಿಯಲ್ಲಿ, ತಲಾ ತಲಾಂತರದಿಂದಲೂ ದಲಿತರು,ಆದಿವಾಸಿಗಳು ಲೈನ್ ಮನೆಗಳಲ್ಲೇ ವಾಸಿಸುತ್ತಿದ್ದಾರೆ.ಭೂ ಮಾಲೀಕರು ನಿವೇಶನ ರಹಿತರಿಗೆ ಸೂರು ಕೊಡಲು ಬಿಡುತ್ತಿಲ್ಲ.ಸರ್ಕಾರ ಮಟ್ಟದಲ್ಲಿ ಪ್ರಭಾವ ಬೀರುತ್ತಿದ್ದಾರೆ.ಲೈನ್ ಮನೆಗಳಲ್ಲಿ ಜನರು ಇರುವುದಿಲ್ಲ ಎಂಬ ಕಾರಣದಿಂದಾಗಿ ಭೂ ಮಾಲೀಕರು ಸೂರು ಕೊಡಲು ಬಿಡುತ್ತಿಲ್ಲ.ಸರ್ಕಾರಿ ಪೈಸಾರಿ ಭೂಮಿ ನೀಡಲು ನೂರೊಂದು ಕಾರಣ ಹೇಳುತ್ತಾರೆ.ಬಡವರಿಗೆ ನಿವೇಶನ ಕೊಟ್ಟರೆ ಶ್ರೀಮಂತರ ಹಿಡಿತದಲ್ಲಿ ಕಾರ್ಮಿಕರು ಇರುವುದಿಲ್ಲ ಎಂಬ ಭಾವನೆ ಇಟ್ಟುಕೊಂಡು,ದಲಿತರನ್ನು ಕೇವಲ ಮತಕ್ಕಾಗಿ ಬಳಸುತ್ತಿದ್ದಾರೆ.ದಲಿತರ ಕೂಗು ಜಿಲ್ಲಾಡಳಿತ ಕೇಳುತ್ತಿಲ್ಲ.ಎಕರೆಗಟ್ಟಲೇ ಭೂಮಿ ಸರ್ಕಾರ ಶ್ರೀಮಂತರಿಗೆ ಕೊಡುತ್ತಿದ್ದಾರೆ.ಜೀತ ಮುಕ್ತವಾಗಬೇಕೆಂದು ಹೇಳುತ್ತಾರೆ ಆದರೆ ಇನ್ನೂ ಕೂಡ ಕೊಡಗಿನಲ್ಲಿ ಜೀತ ಪದ್ಧತಿ ಜೀವಂತವಾಗಿದೆ.ಅಮ್ಮತ್ತಿ ಹೋಬಳಿ ವ್ಯಾಪ್ತಿಯಲ್ಲಿ ಎಕರೆಗಟ್ಟಲೇ ಸರ್ಕಾರಿ ಪೈಸಾರಿ ಜಾಗವನ್ನು ಅತಿಕ್ರಮಿಸಿದ್ದಾರೆ.ಆದರೆ ನಿವೇಶನ ಇಲ್ಲದವರಿಗೆ ಕೊಡುತ್ತಿಲ್ಲ.ಸೂರು ನೀಡದೆ ನಾವು ಇಲ್ಲಿ ಕದಳಲ್ಲ. ಇಲ್ಲಿಂದ ಹೋಗಬೇಕೆಂದರೆ ನಮಗೆ ಭೂಮಿ ಕೊಡಬೇಕು.
ಮಹದೇಶ್,ಬಹುಜನ ಕಾರ್ಮಿಕ ಸಂಘದ ಜಿಲ್ಲಾ ಪದಾಧಿಕಾರಿ
-----------------------------------------------------
ತೋಟದ ಲೈನ್ ಮನೆಗಳಲ್ಲಿ ಜೀವನ ನಡೆಸಲು ಸ್ವಾತಂತ್ರವೇ ಇಲ್ಲದ ಪರಿಸ್ಥಿತಿ ನಮ್ಮದು.ನನಗೆ ತಂದೆ ಇಲ್ಲ.ತಾಯಿಯೇ ಒಬ್ಬಳೇ ಆಸರೆ.ತೋಟದ ಲೈನ್ ಮನೆಯಲ್ಲಿ ವಾಸಮಾಡುತ್ತಿದ್ದೇವೆ.ನಮಗೆ ಸ್ವಂತ ನಿವೇಶನ ಸರ್ಕಾರ ಕೊಡಬೇಕು.ತೋಟದ ಲೈನ್ ಮನೆಗಳಲ್ಲಿ ನೀರು,ವಿದ್ಯುತ್ ಎಲ್ಲವೂ ಮಿತವಾಗಿ ಬಳಸಬೇಕು,ಸ್ವಾತಂತ್ರ್ಯ ಬಂದರೂ ಕೂಡ ನಾವು ಸ್ವಾತಂತ್ರ್ಯವಿಲ್ಲದ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ.ಜ್ವರ ಬಂದರೆ ಕೆಲಸಕ್ಕೆ ರಜೆ ಮಾಡಬಾರದು ಎಂಬ ಸ್ಥಿತಿಯಲ್ಲಿ ಜೀವನ ಮಾಡುವ ನಮ್ಮ ಕೂಗು ಸರ್ಕಾರಕ್ಕೆ ಕೇಳಲ್ಲ.
ನಾವು ಬರೀ ವೋಟ್ ಹಾಕಬೇಕು,ನಮ್ಮ ಹಕ್ಕು ನಾವು ಕೇಳಬಾರದೆ!!
ಗಗನ, ಅಮ್ಮತ್ತಿ ಕಾರ್ಮಾಡು.
What's Your Reaction?






