ಕೊಡಗು:ಆಡುವ ವಯಸ್ಸಿಗೆ ಗರ್ಭ ಧರಿಸುತ್ತಿರುವ ವಿದ್ಯಾರ್ಥಿನಿಯರು: ಕೊಡಗು ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಪೋಕ್ಸೊ ಪ್ರಕರಣಗಳ ಹಿಂದಿನ ನೈಜ, ಬೆಚ್ಚಿಬೀಳಿಸುವ ಘಟನೆಗಳು!

ಕೊಡಗು:ಆಡುವ ವಯಸ್ಸಿಗೆ ಗರ್ಭ ಧರಿಸುತ್ತಿರುವ ವಿದ್ಯಾರ್ಥಿನಿಯರು: ಕೊಡಗು ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಪೋಕ್ಸೊ ಪ್ರಕರಣಗಳ ಹಿಂದಿನ ನೈಜ, ಬೆಚ್ಚಿಬೀಳಿಸುವ ಘಟನೆಗಳು!
ಸಾಂದರ್ಭಿಕ ಚಿತ್ರ......

(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ(coorgdaily): ಪುಟ್ಟ ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವರ್ಷಗಳಲ್ಲಿ ದಾಖಲಾದ ಪೋಕ್ಸೊ ಪ್ರಕರಣಗಳ ಹಿಂದಿನ ನೈಜ ಸಂಗತಿ ಇಡೀ ಜಿಲ್ಲೆ ಬೆಚ್ಚಿ ಬೀಳಿಸುವಂತಹ ಘಟನೆಗಳಾಗಿವೆ.14 ಮತ್ತು 15 ವರ್ಷದೊಳಗಿನ ಬಾಲಕಿಯರು ಗರ್ಭಿಣಿಗಳಾಗಿ ಬಾಲ್ಯದಲ್ಲೇ ಮಕ್ಕಳಿಗೆ ಜನ್ಮ ನೀಡುತ್ತಿರುವ ಘಟನೆಗಳು ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿವೆ. ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಗರ್ಭಿಣಿಗಳಾಗಿ ಪತ್ತೆಯಾದರೆ, ಮಾಮೂಲಿ ಪೋಕ್ಸೊ ಪ್ರಕರಣ ದಾಖಲಿಸುತ್ತಾರೆ. ಆದರೆ ಅದರ ಹಿಂದಿನ ನೈಜ ಘಟನೆಯನ್ನು ತನಿಖೆ ಮಾಡಬೇಕಾದುದು ಅಗತ್ಯವಾಗಿದೆ.

ಕೊಡಗು ಜಿಲ್ಲೆಯಲ್ಲಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಹೆಣ್ಣುಮಕ್ಕಳು ಬಾಲ್ಯದಲ್ಲೇ ಗರ್ಭಿಣಿಗಳಾಗುತ್ತಿರುವ ಘಟನೆಗಳ ಹಿಂದಿನ ಚಿತ್ರಣವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಆಶ್ಚರ್ಯವಾಗುತ್ತದೆ. ಕೆಲವೊಂದು ಘಟನೆಗಳು ಹೊರಬಂದರೆ, ಇನ್ನೂ ಕೆಲವು ಘಟನೆಗಳು ಜನಾಂಗ, ಜಾತಿ, ಧರ್ಮ, ಹಣದ ಬಲದಿಂದ ಮುಚ್ಚಿ ಹೋಗುತ್ತಿರುವುದು ನಿರಂತರವಾಗಿ ನಡೆಯುತ್ತಿದೆ.

9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ, 9ತಿಂಗಳವರೆಗೆ ಗೊತ್ತೇ ಆಗಲಿಲ್ಲ!

ಮಹಿಳೆಯರು ಗರ್ಭಣಿಗಳಾದರೆ ಅವರ ದೇಹದಲ್ಲಿನ ಬದಲಾವಣೆಯಿಂದ ಆಕೆ ಗರ್ಭಿಣಿ ಎಂದು ಎಲ್ಲರಿಗೂ ತಿಳಿಯುತ್ತದೆ. ಆದರೆ ಗೋಣಿಕೊಪ್ಪಲಿನ ದಾಖಲಾಗಿದ್ದ ಪೋಕ್ಸೊ ಪ್ರಕರಣವೊಂದರಲ್ಲಿ 9 ತಿಂಗಳವರೆಗೆ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿ ಎಂದು ಆಕೆಯ ಮನೆಯವರಿಗೂ ಹಾಗೂ ಶಾಲೆಯ ಶಿಕ್ಷಕರಿಗೂ ತಿಳಿದಿರಲಿಲ್ಲ.18 ವರ್ಷದ ಬಾಲಕನೊಂದಿಗೆ ಪ್ರೀತಿಯಲ್ಲಿ ಮುಳುಗಿದ್ದ ಅಪ್ರಾಪ್ತ ವಯಸ್ಸಿನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಳು. ಆದರೆ ಎಂಟು ತಿಂಗಳ ಕಾಲ ಆಕೆ ನಿರಂತರವಾಗಿ ಶಾಲೆಗೆ ಬಂದರೂ ಕೂಡ ಶಿಕ್ಷಕರಿಗೆ ಆಕೆ ಗರ್ಭಿಣಿ ಎಂದು ಗೊತ್ತೇ ಆಗಲಿಲ್ಲ. ಶಾಲೆಯ ವಿದ್ಯಾರ್ಥಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಪ್ರಕರಣ ಹೊರಬರುತ್ತಿದ್ದಂತೆ ಪ್ರಭಾವ ಬಿದ್ದು ಇಡೀ ಪ್ರಕರಣವೇ ಮುಚ್ಚಿಹೋಯಿತು.ಎಂಟು ತಿಂಗಳ ಕಾಲ ಆಕೆ ಶಾಲೆಗೆ ಬರುತ್ತಿದ್ದರೂ ಕೂಡ ಶಾಲೆಯವರಿಗೆ ಗೊತ್ತೇ ಆಗಲಿಲ್ಲವೆಂಬುದು ಅಚ್ಚರಿ ಸಂಗತಿಯೇ ಸರಿ. ಈ ಪ್ರಕರಣದಲ್ಲಿ ವಿದ್ಯಾರ್ಥಿನಿ ತಾನು ಗರ್ಭಿಣಿ ಎಂದು ಗೊತ್ತೇ ಆಗಬಾರದೆಂದು ಎಲ್ಲಾ ಉಪಾಯಗಳನ್ನು ಅನುಸರಿಸಿದ್ದಳು. ಆಕೆ ಗರ್ಭಣಿಯಾಗಿ, ಮಗುವಿಗೆ ಜನ್ಮ ನೀಡುವವರೆಗೂ ವಿದ್ಯಾರ್ಥಿನಿ ತಾಯಿಗೆ ತಿಳಿದಿರಲಿಲ್ಲವಂತೆ.

ಪ್ರತಿನಿತ್ಯ ಶಾಲೆಗೆ ತೆರಳಿ ಮನೆಗೆ ಬರುತ್ತಿದ್ದ ಹೆಣ್ಣು ಮಗಳ ದೇಹದಲ್ಲಿ ಉಂಟಾಗುತ್ತಿರುವ ಬದಲಾವಣೆಯ ಬಗ್ಗೆ ಹೆತ್ತು ಹೊತ್ತ ತಾಯಿಗೂ ಕೂಡ ಗೊತ್ತೇ ಆಗಲಿಲ್ಲ ಎಂಬುದು ನಂಬಲು ಸಾಧ್ಯವೇ! ಹೌದು ಈ ಪ್ರಕರಣದಲ್ಲಿ ತಾಯಿಗೂ ಕೂಡ ತಮ್ಮ ಮಗಳು ಗರ್ಭಿಣಿ ಎಂದು ಗೊತ್ತೇ ಇರಲಿಲ್ಲ.

9ಒಳ ಉಡುಪು! 10 ಲೆಗ್ಗಿಂಗ್ಸ್ ಪ್ಯಾಂಟ್!

ಮಹಿಳೆಯರು ಗರ್ಭಿಣಿಗಳಾದರೆ ಪ್ರತೀ ತಿಂಗಳು ಆರೋಗ್ಯ ತಪಾಸಣೆ, ವೈದ್ಯರ ಸೂಚನೆಯಂತೆ ಚಿಕಿತ್ಸೆ ಪಡೆಯುತ್ತಾರೆ. ಆದರೂ ಕೆಲವೊಮ್ಮೆ ಸಿಸೇರಿಯನ್ ಮೂಲಕವೇ ಹೆರಿಯಾಗುವ ಪ್ರಕರಣಗಳಿಗೇನೂ ಕಡಿಮೆ ಇಲ್ಲ. ಆದರೆ ಮೇಲೆ ಹೇಳಿದ ವಿದ್ಯಾರ್ಥಿನಿ ತಾನು ಗರ್ಭಿಣಿ ಎಂದು ಯಾರಿಗೂ ಗೊತ್ತೇ ಆಗಬಾರದೆಂದು ಆಕೆ ಮಾಡಿರುವ ಉಪಾಯಕ್ಕೆ ಇಡೀ ವೈದ್ಯಲೋಕ ಆಶ್ಚರ್ಯಪಟ್ಟಿದೆ.ಯಾವುದೇ ರೀತಿಯ ಚಿಕಿತ್ಸೆ, ಗರ್ಭಿಣಿಯರು ಪಡೆಯಬೇಕಾದ ಪೌಷ್ಟಿಕ ಆಹಾರವನ್ನು ಈ ವಿದ್ಯಾರ್ಥಿನಿ ಪಡೆದಿರಲಿಲ್ಲ. 14 ವರ್ಷದ ಬಾಲಕಿ ಪ್ರತಿನಿತ್ಯ ಎಲ್ಲರಂತೆ ಶಾಲೆಗೆ ಹೋಗಿ ಬರುತ್ತಿದ್ದಳು, ಮನೆಯಲ್ಲಿ ಕೂಡ ಎಂದಿನಂತೆ ಇರುತ್ತಿದ್ದಳು. ಆದರೆ ಗರ್ಭಿಣಿಯಾಗಿರುವ ವಿಷಯ ಮನೆ ಹಾಗೂ ಶಾಲೆಯಲ್ಲಿ ತಿಳಿಯಬಾರದೆಂದು ಗರ್ಭಧರಿಸಿ ಐದನೇ ತಿಂಗಳಿನಿಂದ 09 ಇನ್ನರ್ ಬಟ್ಟೆ ಹಾಗೂ 10 ಲೆಗ್ಗಿಂಗ್ಸ್ ಪ್ಯಾಂಟ್ ಪ್ರತಿನಿತ್ಯ ಧರಿಸುತ್ತಿದ್ದಳು. ತನ್ನ ದೇಹದಲ್ಲಿನ ಬದಲಾವಣೆ ಯಾರಿಗೂ ಗೊತ್ತೇ ಆಗಬಾರದೆಂದು ನಾಲ್ಕು ತಿಂಗಳ ಕಾಲ ಮನೆ ಹಾಗೂ ಶಾಲೆಯಲ್ಲಿ ಇದೇ ಮಾಡುತ್ತಿದ್ದಳು ಎಂದು ಹೆಸರು ಹೇಳಲಿಚ್ಚಿಸದ ಆರೋಗ್ಯ ಕಾರ್ಯಕರ್ತೆಯೊಬ್ಬರು ಮಾಹಿತಿ ನೀಡಿದ್ದಾರೆ. ಹಿಗೇ ಎಂಟು ತಿಂಗಳು ಕಳೆದು ಇನ್ನೇನು ಹೆರಿಗೆ ಸಮಯ ಹತ್ತಿರ ಬರುವಾಗ ಬಾಲಕಿಗೆ ಹೆರಿಗೆ ನೋವು ಕಾಡಲಾರಂಭಿಸಿತ್ತು. ಶಾಲೆಯಲ್ಲಿ ಇರುವಾಗಲೇ ಹೆರಿಗೆ ನೋವು ಬಂದು, ಶಾಲೆಯ ಶಿಕ್ಷಕರು ಈಕೆಯ ಮನೆಯವರಿಗೆ ಮಾಹಿತಿ ನೀಡಿದ್ದರು. ಮನೆಯವರು ಬಂದು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಬಾಲಕಿಯ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೂ ಕೂಡ ನನ್ನ ಮಗಳು ಗರ್ಭಿಣಿ ಎಂದು ಗೊತ್ತಿರಲಿಲ್ಲ. ಅದೇನೋ ಹೊಟ್ಟೆ ನೋವು ಇರಬಹುದೆಂದು ತಾಯಿ ತಿಳಿದುಕೊಂಡಿದ್ದಳು.

ಹೆರಿಗೆ ನೋವಿನಿಂದಾಗಿ ಬಾಲಕಿ ನೋವು ತಾಳಲಾರದೆ ಆಸ್ಪತ್ರೆ ತಲುಪಿದಳು. ಆಸ್ಪತ್ರೆಯಲ್ಲಿ ವೈದ್ಯರು ನೋಡಿದಾಕ್ಷಣ ಈಕೆ ಗರ್ಭಿಣಿ ಎಂದು ಹೇಳಿಯೇ ಬಿಟ್ಟರು. ಆದರೆ ಆಕೆಯ ತಾಯಿ ತನ್ನ ಮಗಳು ಗರ್ಭಿಣಿ ಅಲ್ಲ ಎಂದು ಆಸ್ಪತ್ರೆಯಲ್ಲಿ ವಾದಿಸಿದ್ದರು. ಬಾಲಕಿಯನ್ನು ಹೆರಿಗೆ ವಾರ್ಡ್ಗೆ ಶಿಫ್ಟ್ ಮಾಡಿ, ವೈದ್ಯರು ಆಕೆಯ ಬಟ್ಟೆಗಳನ್ನು ಬಿಚ್ಚುವಾಗ ವೈದ್ಯರು ಅಚ್ಚರಿಪಟ್ಟಿದ್ದರು. ಆಸ್ಪತ್ರೆ ತಲುಪುವಾಗಲೇ ಮಗುವಿನ ತಲೆಯ ಭಾಗ ಹೊರಬಂದಿತ್ತು ಎಂದು ಆರೋಗ್ಯ ಕಾರ್ಯಕರ್ತೆಯೊಬ್ಬರು ಹೇಳುತ್ತಾರೆ. ಬಾಲಕಿ 09 ಇನ್ನರ್ ಹಾಗೂ 10 ಲೆಗ್ಗಿಂಗ್ಸ್ ಪ್ಯಾಂಟ್ ಧರಿಸಿರುವುದು ಕಂಡು ವೈದ್ಯರು ಶಾಕ್ ಆಗಿದ್ದರು.ಗರ್ಭಿಣಿ ಎಂದು ಯಾರಿಗೂ ತಿಳಿಯದಂತೆ ಎಂಟು ತಿಂಗಳ ವಿದ್ಯಾರ್ಥಿನಿ ನಡೆದುಕೊಂಡದ್ದು ಕಂಡು ವೈದ್ಯರು ನಿಬ್ಬೆರಗಾಗಿದ್ದರು. ಬಾಲಕಿ ಹಾಗೂ ಮಗುವಿಗೆ ಯಾವುದೇ ರೀತಿಯ ತೊಂದರೆ ಯಾಗದ ರೀತಿಯಲ್ಲಿ ವೈದ್ಯರು ಹೆರಿಗೆ ಮಾಡಿಸಿ, ಬಾಲಕಿ ಹೆಣ್ಣು ಮಗಳಿಗೆ ಜನ್ಮ ನೀಡಿದ್ದಳು. ಆದರೆ ಈ ಘಟನೆ ಯಾರಿಗೂ ತಿಳಿಯ ದಾಗೆ, ವಿದ್ಯಾರ್ಥಿನಿ ಎಂಬ ಕಾರಣಕ್ಕಾಗಿಯೇ ಮುಚ್ಚಿ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆಕೆ ಗರ್ಭಿಣಿಯಾಗಲು ಕಾರಣಕರ್ತನಾದ 18 ವರ್ಷದ ಬಾಲಕನ ವಿರುದ್ಧ ಪ್ರಕರಣ ದಾಖಲಿಸ ಲಾಗಿತ್ತು. 18 ವರ್ಷದ ನಂತರ ಆಕೆಯನ್ನು ನಾನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಕೂಡ ಹೇಳಿದ್ದನು. ಬಾಲಕಿ ಜನ್ಮ ನೀಡಿದ ಹೆಣ್ಣು ಮಗಳು ಆಕೆಯ ತಾಯಿಯ ಶುಶ್ರೂಶೆಯಲ್ಲಿ ಇದ್ದು, ಆಕೆ ತನ್ನ ಶಿಕ್ಷಣವನ್ನು ಮುಂದುವರಿಸಿದ್ದಾಳೆ. ಪ್ರೀತಿ, ಪ್ರೇಮಕ್ಕೆ ಸಿಲುಕಿ ಅಪ್ರಾಪ್ತ ವಯಸ್ಸಿನಲ್ಲೇ ಬಾಲಕಿಯರು ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. 14 ಮತ್ತು 15 ವಯಸ್ಸಿನ ವಿದ್ಯಾರ್ಥಿಗಳು ಬಾಲ್ಯದಲ್ಲೇ ಗರ್ಭಿಣಿಗಳಾಗಿ ಮಕ್ಕಳಿಗೆ ಜನ್ಮ ನೀಡಿ, ಇಡೀ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಪ್ರಕರಣದ ಆರೋಪಿಗಳು ಪ್ರಭಾವ ಬಳಸಿ, ಪ್ರಕರಣದಿಂದ ಹೊರಬಂದು ಸಮಾಜದಲ್ಲಿ ಎಂದಿನಂತೆ ಓಡಾಡುವ ದೃಶ್ಯ ಸಾಮಾನ್ಯ ವಾಗಿದೆ ಎಂದು ಆರೋಗ್ಯ ಕಾರ್ಯರ್ತೆಯೊಬ್ಬರು ಮಾಹಿತಿ ಹಂಚಿಕಂಡಿದ್ದಾರೆ. ಕೊಡಗಿನ ಕೆಲವೆಡೆ ಪೋಕ್ಸೊ ಪ್ರಕರಣಗಳ ಹಿಂದಿನ ನೈಜ ವಿಷಯ ಎಲ್ಲಿಯೂ ಹೊರಬಾರದ ರೀತಿಯಲ್ಲಿ ಪ್ರಭಾವ ಬೀರುತ್ತಿದೆ ಎಂದು ಮಹಿಳಾ ಆರೋಗ್ಯ ಕಾರ್ಯಕರ್ತೆಯೊಬ್ಬರು ಮಾಹಿತಿ ನೀಡಿದ್ದಾರೆ.

ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ!

ಜಿಲ್ಲೆಯಲ್ಲಿ ಕೊಡಗು ಜಿಲ್ಲಾ ರಕ್ಷಣಾ ಘಟಕ ನಿರಂತರವಾಗಿ ಬಾಲ್ಯವಿವಾಹ, ಅಪ್ರಾಪ್ತ ಗರ್ಭಿಣಿ ಪ್ರಕರಣವನ್ನು ತಡೆಗಟ್ಟಲು ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಆದರೆ ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳೂ ಗರ್ಭಿಣಿಗಳಾಗಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಯನ್ನು ಶಿಕ್ಷಣ ಇಲಾಖೆ ನೀಡುತ್ತಿಲ್ಲ. ಶಾಲೆಯಿಂದ ಹೊರಗುಳಿದ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದ ಘಟನೆ ಇತ್ತೀಚಿಗೆ ನಡೆದಿತ್ತು. ಕೊಡಗು ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಗರ್ಭಿಣಿಗಳಾ ಗುತ್ತಿರುವುದು, ಬಾಲ್ಯ ವಿವಾಹ ಹಾಗೂ ಪೋಕ್ಸೊ ಪ್ರಕರಣಗಳನ್ನು ತಡೆಗಟ್ಟಲು ಕಳೆದ ವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಲಾಗಿತ್ತು.ಬಾಲ್ಯ ವಿವಾಹ, ಪೋಕ್ಸೊ ಪ್ರಕರಣ ಹಾಗೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಗರ್ಭಿಣಿ ಗಳಾಗುತ್ತಿರುವುದನ್ನು ತಡೆಗಟ್ಟಲು ಶಿಕ್ಷಣ ಇಲಾಖೆ ಪ್ರಮುಖ ಪಾತ್ರವಹಿಸಬೇಕು, ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಂಬಂಧಿಸಿದ ಇಲಾಖೆ ಯೊಂದಿಗೆ ಕೈ ಜೋಡಿಸ ಬೇಕೆಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಆದೇಶ ನೀಡಿದ್ದರು.-

ಎರಡು ತಿಂಗಳು 19 ಪೋಕ್ಸೊ ಪ್ರಕರಣ!

ಕೊಡಗು ಜಿಲ್ಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳು ಸೇರಿ ‌ಕಳೆದ ಎರಡು ತಿಂಗಳಿನಲ್ಲಿ 19 ಪೋಕ್ಸೊ ಪ್ರಕರಣಗಳು ದಾಖಲಾಗಿದೆ.ಮಡಿಕೇರಿ ತಾಲ್ಲೂಕಿನಲ್ಲಿ 06,ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಲಾ ಮೂರು,ಸೋಮವಾರಪೇಟೆ 05 ಹಾಗೂ ಕುಶಾಲನಗರದಲ್ಲಿ 02 ಪ್ರಕರಣ ದಾಖಲಾಗಿದೆ.ಕಳೆದ ಎರಡು ತಿಂಗಳಿನಲ್ಲಿ ದಾಖಲಾದ 19 ಪೋಕ್ಸೊ ಪ್ರಕರಣಗಳಲ್ಲಿ 09 ಮಂದಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಗರ್ಭಣಿಗಳಾಗಿದ್ದು,ಪ್ರಸ್ತುತ ಏಳು ಮಂದಿ ಗರ್ಭಣಿಗಳಾಗಿದ್ದಾರೆ.ಎರಡು ಅಪ್ರಾಪ್ತ ಹೆಣ್ಣುಮಕ್ಕಳು ಹೆರಿಗೆಯಾಗಿದ್ದು ಒಂದು ಮಗುವನ್ನು ಸರ್ಕಾರಕ್ಕೆ ಒಪ್ಪಿಸಲಾಗಿದೆ.ಪರಿಶಿಷ್ಟ ಜಾತಿ 04,ಪರಿಶಿಷ್ಟ ಪಂಗಡ 07 ಹಾಗೂ ಇತರೆ ಜನಾಂಗದಲ್ಲಿ ಒಟ್ಟು 08 ಪೋಕ್ಸೊ ಪ್ರಕರಣಗಳು ಮೇ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ದಾಖಲಾಗಿದೆ.

ಸರ್.... ದಕ್ಷಿಣ ಕೊಡಗಿನಲ್ಲಿ ಪೋಕ್ಸೊ ಪ್ರಕರಣಗಳು ದಾಖಲಾಗುತ್ತಿದೆ.ಪೋಕ್ಸೊ ಪ್ರಕರಣಗಳ ಹಿಂದಿನ ನೈಜ ಸಂಗತಿ ಎಲ್ಲಿಯೂ ಹೊರಬರುತ್ತಿಲ್ಲ.ಆರೋಪಿ ಪ್ರಭಾವಿ ಜನಾಂಗ,ಜಾತಿ,ಧರ್ಮಕ್ಕೆ ಸೇರಿದವರಾಗಿದ್ದಾರೆ ಪ್ರಕರಣವನ್ನು ಮುಚ್ಚಿಯಾಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕೊಡಗಿನಲ್ಲಿ ಶಾಲಾ ವಿದ್ಯಾರ್ಥಿಗಳು ಗರ್ಭಣಿಗಳಾಗುತ್ತಿರುವ ಘಟನೆಗಳ ನಡೆಯುತ್ತಲೇ ಇದೆ.ಆದರೆ ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಇಲಾಖೆ ಎಡವಿದೆ.ಉತ್ತರ ಕೊಡಗಿನಲ್ಲಿ ಪೋಕ್ಸೊ ಪ್ರಕರಣಗಳ ಹಿಂದಿನ ನೈಜ ಘಟನೆಗಳು ಬಯಲಿಗೆ ಬಾರದಾಗೆ ಮುಚ್ಚಿ ಹಾಕಲ್ಪಡುತ್ತಿದೆ.ಇದರಿಂದ ಅಮಾಯಕ ಹೆಣ್ಣುಮಕ್ಕಳ ಜೀವನ ಹಾಳಾಗುತ್ತಿದೆ.

ಹೆಸರು ಹೇಳಬಯಸದ,ಆರೋಗ್ಯ ಕಾರ್ಯಕರ್ತೆ ಕೊಡಗು.