ರೆಡ್ ಕ್ರಾಸ್ ಕೊಡಗು ಘಟಕದಿಂದ ಕ್ಯಾನ್ಸರ್ ಅರಿವಿನ ಮಾಹಿತಿ ಕಾಯ೯ಕ್ರಮ - ನೂರಾರು ಮಹಿಳೆಯರಿಗೆ ತಪಾಸಣೆ; ಅಂಜಿಕೆಯಿಲ್ಲದೇ ಜೀವಿಸುವುದನ್ನು ಹೆಣ್ಣುಮಕ್ಕಳಿಗೆ ವಿದ್ಯೆಯ ಮೂಲಕ ಕಲಿಸಿ - ಮಿಲನಾ ಭರತ್
ಮಡಿಕೇರಿ ಮಾಚ್೯ 10- ಸೂಕ್ತ ವಿದ್ಯೆಯ ಜತೆಗೇ ಅಂಜಿಕೆಯಿಲ್ಲದೇ ಜೀವಿಸುವ ರೀತಿಯನ್ನು ಹೆಣ್ಣುಮಕ್ಕಳಿಗೆ ಪೋಷಕರು ಕಲಿಸುವುದು ಇಂದಿನ ಸಮಾಜದಲ್ಲಿ ಅತ್ಯಗತ್ಯವಾಗಿದೆ ಎಂದು ಕೊಡಗು ಜಿಲ್ಲಾ ಮೀನುಗಾರಿಕಾ ಇಲಾಖೆಯ ಸಹಾಯಕ ನಿದೇ೯ಶಕಿ ಮಿಲನಾ ಭರತ್ ಹೇಳಿದ್ದಾರೆ.
ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಕೊಡಗು ಜಿಲ್ಲಾ ಘಟಕದಿಂದ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಆಯೋಜಿತ ಕ್ಯಾನ್ಸರ್ ತಪಾಸಣಾ ಶಿಬಿರ, ಕ್ಯಾನ್ಸರ್ ಮಾಹಿತಿ ಜಾಗ್ರತಿ ಶಿಬಿರದಲ್ಲಿ ಅವಳ ಕನಸಿಗೊಂದು ರೆಕ್ಕೆ ಕೊಡಿ ವಿಚಾರವಾಗಿ ಅವರು ಮಾತನಾಡಿದರು.
ಸೀತೆ, ಸಾವಿತ್ರಿ, ಅಹಲ್ಯರ ಕಥೆ ಹೇಳುತ್ತಲೇ ನೀವು ಇದೇ ರೀತಿ ಜೀವಿಸಬೇಕು ಎಂಬ ಚೌಕಟ್ಟನ್ನು ಸಮಾಜದಲ್ಲಿ ಹಿರಿಯರು ಮಹಿಳೆಯರಿಗೆ ಹಾಕಿಕೊಟ್ಟಿದ್ದರು. ಆದರೆ ಬದಲಾದ ಸಮಾಜದಲ್ಲಿ ಪ್ರತೀ ಮಹಿಳೆಯೂ ಬದಲಾಗಬೇಕಾಗಿದೆ. 40 ವಷ೯ ಮೀರಿದವರು ತಮ್ಮ ಜೀವನದ ಕನಸುಗಳೆಲ್ಲಾ ಮುಕ್ತಾಯಗೊಂಡಂತೆ ನೀರಸವಾಗಿರುತ್ತಾರೆ. ಇದರ ಬದಲಿಗೆ ಕನಸುಗಳ ರೆಕ್ಕೆ ಕಟ್ಟಿಕೊಂಡು ಹೊಸ ಚಿಂತನೆಯೊಂದಿಗೆ ಸಂಭ್ರಮದಿಂದ ಜೀವಿಸಲು ಮಹಿಳೆ ಮುಂದಾಗಬೇಕಾಗಿದೆ ಎಂದು ಮಿಲನಾ ಭರತ್ ಹೇಳಿದರು.
ಅಡುಗೆ ಮನೆಯಿಂದ ಹೊರಬಂದು ತಮ್ಮ ಅಸ್ತಿತ್ವ ತೋರುವ ದಿನವೇ ಮಹಿಳಾ ದಿನಾಚರಣೆ ಎಂದು ವಿಶ್ಲೇಷಿಸಿದ ಮಿಲನಾ, ಪುರುಷರಂತೆ ಸಹಜವಾಗಿ, ನೈಜವಾಗಿ ಜೀವಿಸಲು ಮಹಿಳೆಯರು ಕೇಳುತ್ತಿರುವ ಅವಕಾಶವನ್ನು ನಿರಾಕರಿಸುವ ಹಕ್ಕು ಸಮಾಜಕ್ಕಿಲ್ಲ ಎಂದೂ ಪ್ರತಿಪಾದಿಸಿದರು..
ಹೆಣ್ಮುಮಗುವಿಗೆ ವಿದ್ಯೆ ನೀಡುವ ಮೂಲಕ ಆಕೆಯನ್ನು ಆತ್ಮವಿಶ್ವಾಸ, ಸ್ವಾವಲಂಭಿಯಾಗುವಂತೆ ಮಾಡಿ ಎಂದು ಕರೆ ನೀಡಿದ ಮಿಲನಾ ಭರತ್, ಶಿಕ್ಷಣ ನೀಡುವ ಆತ್ಮವಿಶ್ವಾಸವನ್ನು ಯಾವುದೇ ಆಸ್ತಿಯ ಶ್ರೀಮಂತಿಕೆಯೂ ನೀಡಲು ಸಾಧ್ಯವಿಲ್ಲ ಎಂದರು.
ಮಡಿಕೇರಿ ಜಿಲ್ಲಾ ಸಕಾ೯ರಿ ಆಸ್ಪತ್ರೆಯ ಅಪಘಾತ ಮತ್ತು ತುತು೯ ಚಿಕಿತ್ಸಾ ವಿಭಾಗದ ವೈದ್ಯಾಧಿಕಾರಿ ಡಾ.ಸುಮುಖ್ ಮಾತನಾಡಿ, ಮಹಿಳೆಯರು ಕೀಳಿರಿಮೆಯಿಂದ ಹೊರಬರುವುದು ಅತ್ಯಂತ ಅಗತ್ಯ. ತಮಗೆ ಮಾನಸಿಕ, ದೈಹಿಕ ಸಮಸ್ಯೆಗಳು ಕಾಡಿದಾಗ ಕೀಳಿರಿಮೆಯಿಂದ ಅನೇಕ ಮಹಿಳೆಯರು ಅದನ್ನು ಹೊರಗೆಡಹದೇ ಮುಚ್ಚಿಟ್ಟುಕೊಂಡು ತರುವಾಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಇದರ ಬದಲಿಗೆ ಯಾವುದೇ ಸಮಸ್ಯೆ ಕಾಡಿದಾಗ ವೈದ್ಯರನ್ನು ಸಂಪಕಿ೯ಸಿ ಸಮಸ್ಯೆ ಪರಿಹರಿಸಿಕೊಂಡಾಗ ಕುಟುಂಬಕ್ಕೇ ಅದು ಒಳಿತುಂಟು ಮಾಡುತ್ತದೆ ಎಂದರು. 40 ವಷ೯ ಮೇಲ್ಪಟ್ಟವರು ವಷ೯ಕ್ಕೊಮ್ಮೆ ಸಂಪೂಣ೯ ರೀತಿಯಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳಲೇಬೇಕು ಎಂದು ಸಲಹೆ ನೀಡಿದ ಡಾ.ಸುಮುಖ್, ಮಹಿಳೆಯರೇ ಪ್ರತೀಯೊಂದು ಕುಟುಂಬದ ಆಧಾರ ಸ್ಥಂಭ ಎನ್ನುತ್ತೇವೆ. ಇಂಥ ಮಹಿಳೆಯರು ಆರೋಗ್ಯವಂತರಾಗಿರುವಂತೆ ಗಮನಹರಿಸಿ ಕಾಳಜಿ ತೋರಬೇಕಾಗಿರುವುದೂ ಕೂಡ ಆಕೆಯ ಕುಟುಂಬ ಸದಸ್ಯರ ಕತ೯ವ್ಯ ಎಂದು ಕಿವಿಮಾತು ಹೇಳಿದರು.
ವಿರಾಜಪೇಟೆಯ ವಕೀಲರಾದ ಸಿಂಧೂರ ಎನ್ ಸ್ವಾಮಿ , ಕಾನೂನು ನಿಮಗೂ ಗೊತ್ತಿರಲಿ ಎಂಬ ವಿಚಾರದ ಬಗ್ಗೆ ಮಾತನಾಡಿ, ಎಲ್ಲಿಂದಲೋ ಬಂದು ಭಾರತಕ್ಕೆ ಧಾಳಿಯಿಟ್ಟಿದ್ದ ಮೊಘಲರು ಸೇರಿದಂತೆ ವಲಸಿಗರು ಭಾರತದಲ್ಲಿ ಮಹಿಳೆಯರಿಗೆ ದೊರಕುತ್ತಿದ್ದ ಗೌರವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದರು. ಭಾರತೀಯ ಮಹಿಳೆಯರ ಶೌಯ೯ವನ್ನೂ ಇಂಥ ವಿದೇಶಿ ಅತಿಕ್ರಮಣಕಾರರು ಎದುರಿಸಿದ್ದರು. ಭಾರತೀಯ ಮಹಿಳೆಯರು ಶಾಂತಿಯಂತೆ ಕ್ರಾಂತಿಗೂ ಸೈ ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದರು.
ವಿದೇಶದಲ್ಲಿ ಮಹಿಳೆಯರಿಗೆ ಗೌರವ ಕಡಮೆಯಿದ್ದ ಸಂದಭ೯ ಮಹಿಳೆಯರಿಗಾಗಿ ಪ್ರತ್ಯೇಕ ಕಾನೂನಿನ ಅಗತ್ಯ ಕಂಡುಬಂದಿತ್ತು. ವಿದೇಶಿಯರನ್ನೇ ಅನುಕರಿಸಿದ ಭಾರತದಲ್ಲಿಯೂ ಮಹಿಳೆಯರಿಗೆ ಕಾನೂನು ಜಾರಿಗೊಂಡಿತ್ತು. ಇಂಥ ಕಾನೂನು ಕೆಲವೊಮ್ಮೆ ಮಹಿಳೆಯರಿಂದಲೇ ದುರುಪಯೋಗವಾಗುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. ಇದು ಆಗಬಾರದು ಎಂದೂ ಸಿಂಧೂರ ಸ್ವಾಮಿ ಸಲಹೆ ಮಾಡಿದರು. ಕೆಲಸದ ಸ್ಥಳದಲ್ಲಿ ಲೈಂಗಿಕ ದೌಜ೯ನ್ಯ ಸಂಭವಿಸಿದಾಗ, ರಸ್ತೆಯಲ್ಲಿ ಮಹಿಳೆಯರನ್ನು ಚುಡಾಯಿಸಿದಾಗಲೂ ಪ್ರಬಲ ಕಾನೂನುಗಳು ಆಕೆಯ ನೆರವಿಗೆ ಇದೆ. ಸಬಲೆಯಾಗುವ ನಿಟ್ಟಿನಲ್ಲಿ ಶೋಷಣೆಯಾದಾಗ ಮಹಿಳೆಯರು ತಮ್ಮ ಬೆಂಬಲಕ್ಕಿರುವ ಕಾನೂನನ್ನು ಬಳಸಲು ಹಿಂಜರಿಯಬಾರದು ಎಂದೂ ಸಿಂಧೂರ ಸ್ವಾಮಿ ಕರೆ ನೀಡಿದರು.
ಯೋಗ, ಧ್ಯಾನ ಮತ್ತು ಶಾಂತತೆ ವಿಚಾರದ ಬಗ್ಗೆ ಉಪನ್ಯಾಸ ನೀಡಿದ ಯೋಗ ಗುರು ಶಿಲ್ಪಾ ರೈ, ಶಾಂತತೆಗೆ ಮತ್ತೊಂದು ಹೆಸರಾಗಿರುವ ಮಹಿಳೆಯ ಶಾಂತಚಿತ್ತತೆಯನ್ನು ಕದಡುವ ಕೆಲಸ ಮನೆ ಮತ್ತು ಮನೆಯ ಹೊರಗಡೆಯೂ ಆಗಿಂದಾಗ್ಗೆ ಸಂಭವಿಸುತ್ತದೆ. ಇಂಥ ಸಂದಭ೯ ಧ್ಯಾನ ಮತ್ತು ಯೋಗ ಕಲಿತ ಮಹಿಳೆಯರು ಮಾನಸಿಕವಾಗಿ ಶಾಂತರಾಗಿರಲು ಸಾಧ್ಯವಿದೆ ಎಂದರು. ಆಲಸ್ಯ, ಖಿನ್ನತೆಯನ್ನು ಹೋಗಲಾಡಿಸಲು ಯೋಗ ಸಹಕಾರಿಯಾಗಿದ್ದು, ಮನಸ್ಸಿನ ಸಂತೋಷಕ್ಕೂ ಯೋಗ ಕಾರಣವಾಗುತ್ತದೆ ಎಂದು ಅವರು ನುಡಿದರು. ಮಹಿಳೆಯರ ದೇಹದ ಸೌಂದಯ೯ಕ್ಕೂ ವಿವಿಧ ರೀತಿಯ ಯೋಗ ಮತ್ತು ಧ್ಯಾನ ಕಾರಣವಾಗುತ್ತದೆ ಎಂದೂ ಶಿಲ್ಪಾರೈ ಹೇಳಿದರು.
ಕೊಡಗು ವೈದ್ಯಕೀಯ ಸಂಸ್ಥೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ವೈದ್ಯಾಧಿಕಾರಿ ಡಾ.ಬಿ.ಕೆ. ರಾಜೇಶ್ವರಿ ಮಾತನಾಡಿ, ಗಭ೯ ಕಂಠದ ಕ್ಯಾನ್ಸರ್ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ 14 ವಷ೯ದ ಬಾಲಕಿಯರಿಗೆ ಲಸಿಕೆಯನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಯಾವುದೇ ವದಂತಿ, ಊಹಾಪೋಹಗಳನ್ನು ನಂಬದೇ ಲಸಿಕೆ ನೀಡುವಲ್ಲಿ ಪೋಷಕರು ಮುಂದಾಗಬೇಕು ಎಂದು ಕರೆ ನೀಡಿದರು. ಕೇಂದ್ರ ಸಕಾ೯ರ ಕೂಡ ಗಭ೯ ಕಂಠದ ಕ್ಯಾನ್ಸರ್ ನಿವಾರಣೆಗೆ ಸಮಾರೋಪಾದಿಯಲ್ಲಿ ಮುಂದಾಗಿದ್ದು ಸದ್ಯದಲ್ಲಿಯೇ ಉಿತವಾಗಿ ಲಸಿಕೆ ನೀಡುವ ಅಭಿಯಾನ ಕೂಡ ಜಾರಿಯಾಗಲಿದೆ ಎಂದು ಹೇಳಿದ ಡಾ.. ರಾಜೇಶ್ವರಿ, ಸ್ತನ ಕ್ಯಾನ್ಸರ್ ಕೂಡ ಪಿಡುಗಾಗಿ ಪರಿಣಮಿಸಿದ್ದು ಯಾವುದೇ ಲಕ್ಷಣ ಕಂಡುಬಂದಾಗ ಹಿಂಜಿರಿಕೆ ತೋರದೆ ವೈದ್ಯರನ್ನು ಸಂಪಕಿ೯ಸಿ ಚಿಕಿತ್ಸೆ ಪಡೆಯಬೇಕೆಂದು ಸೂಚಿಸಿದರು.
ಕಾಯ೯ಕ್ರಮದಲ್ಲಿ ಕಂದೀಲು ಚಿತ್ರಕ್ಕಾಗಿ 71 ನೇ ರಾಷ್ಟ್ರೀಯ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ ಕೊಟ್ಟುಕೊತ್ತೀರ ಯಶೋಧ ಪ್ರಕಾಶ್ ಅವರನ್ನು ಗಣ್ಯರು ಸನ್ಮಾನಿಸಿದರು. ರೆಡ್ ಕ್ರಾಸ್ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ಸಂಚಾಲಕತ್ನದಲ್ಲಿ ಮೂಡಿಬಂದ ಕಾಯ೯ಕ್ರಮದಲ್ಲಿ ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರ ರೈ, ಪ್ರಧಾನ ಕಾಯ೯ದಶಿ ಎಂ.ಧನಂಜಯ್, ಖಜಾಂಜಿ ಪ್ರಸಾದ್ ಗೌಡ, ನಿದೇ೯ಶಕರಾದ ಕೆ.ಟಿ.. ಉತ್ತಯ್ಯ, ವಿಕ್ರಂಶೆ ಟ್ಟಿ, ಕೆ.ಸಿ. ವಸಂತ್, ಲೋಕೇಶ್ ಡಿ.ವಿ., ಕೆ.ಎಂ.ವೆಂಕಟೇಶ್, ಮಧುಕರ್ ಶೇಟ್, ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆಯ ಅಧಿಕಾರಿ ಸವಿತಾ, ಪ್ರಬಾರ ಸಹಾಯಕ ಶಿಶು ಅಭಿವೖದ್ದಿ ಯೋಜನಾಧಿಕಾರಿ ಶೀಲಾ ಅಶೋಕ್ ಹಾಜರಿದ್ದರು. ನೂರಾರು ಮಹಿಳೆಯರು ಕ್ಯಾನ್ಸರ್ ತಪಾಸಣೆಯ ಮೂಲಕ ಶಿಬಿರದ ಪ್ರಯೋಜನ ಪಡೆದರು.