ಪೊನ್ನಂಪೇಟೆ; ಆಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ತಂದೆ - ಮಗ ದುರ್ಮರಣ

Mar 10, 2026 - 12:37
 0  1.9k
ಪೊನ್ನಂಪೇಟೆ; ಆಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ತಂದೆ - ಮಗ ದುರ್ಮರಣ

ಪೊನ್ನಂಪೇಟೆ, ಮಾ. 9: ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಗ, ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಕೆರೆಗೆ ಇಳಿದ ತಂದೆ ಇಬ್ಬರೂ ನೀರಿನಲ್ಲಿ ಮುಳುಗಿ ದಾರುಣ ಸಾವಿಗೀಡಾದ ಹೃದಯ ವಿದ್ರಾವಕ ಘಟನೆಯೊಂದು ಪೊನ್ನಂಪೇಟೆ ತಾಲೂಕಿನ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ.

ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ 2 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಜೆ. ಕೆ. ಕೆಂಚ(8) ಹಾಗೂ ಆತನ ತಂದೆ ಜೇನುಕುರುಬರ ಶಿವಣ್ಣ(40) ಎಂಬವರೇ ಮೃತ ದುರ್ದೈವಿಗಳು.

 ಚಿಕ್ಕಮುಂಡೂರು ಗ್ರಾಮದ ಜಾಲಿ ಪೂವಯ್ಯ ಎಂಬವರ ಲೈನ್ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದ ಇವರು ತಾ. 8 ರಂದು ಭಾನುವಾರವಾದ ಕಾರಣ ಶಾಲೆಗೆ ರಜೆ ಇದ್ದ ಹಿನ್ನಲೆಯಲ್ಲಿ ಕೆರೆಯ ಬಳಿ ತನ್ನ ಕುಟುಂಬದವರೊಂದಿಗೆ ಕೆರೆಗೆ ತೆರಳಿದ್ದರು. ಕೆರೆಯ ಬಳಿಯೇ ಸ್ನಾನ ಮಾಡಿಕೊಂಡು ಆಟವಾಡಿಕೊಂಡಿದ್ದ, ಬಾಲಕ ಕೆಂಚ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾನೆ. ಮಗ ಕೆರೆಗೆ ಬಿದ್ದಿರುವುದನ್ನು ಗಮನಿಸಿದ ತಂದೆ ಶಿವಣ್ಣ ಮಗನನ್ನು ರಕ್ಷಿಸುವ ಸಲುವಾಗಿ ನೀರಿಗೆ ಇಳಿದಿದ್ದಾರೆ.

 ಆದರೆ ಕೆರೆಯಲ್ಲಿ ಹೂಳು ಇದ್ದ ಕಾರಣ ದುರದೃಷ್ಟವಶಾತ್ ನೀರಿನಿಂದ ಹೊರಬರಲಾಗದೆ, ತಂದೆ ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ತಂದೆ ಶವವನ್ನು ತಾ. 8 ರಂದು ಸಂಜೆ ಕೆರೆಯಿಂದ ಹೊರಗೆ ತೆಗೆದಿದ್ದು, ಬಾಲಕನ ಮೃತದೇಹವನ್ನು ತಾ. 9 ರಂದು ಹೊರತೆಗೆಯಲಾಯಿತು.

 ತನ್ನ ಕಣ್ಣೆದುರಿನಲ್ಲೇ ಗಂಡ ಹಾಗೂ ಮಗನನ್ನು ಕಳೆದುಕೊಂಡ ಶಿವಣ್ಣ ಅವರ ಪತ್ನಿ ಸುಮತಿ ತನ್ನ ಇನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ರೋದಿಸುತಿದ್ದ ದೃಶ್ಯ ಹಾಗೂ, ಮಗ ಮೊಮ್ಮಗನನ್ನು ಕಳೆದುಕೊಂಡ ಶಿವಣ್ಣ ಅವರ ತಾಯಿ ಹಾಗೂ ಕುಟುಂಬದವರ ಆಕ್ರಂದನ ಕರುಳು ಹಿಂಡುವಂತಿತ್ತು. ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಕುಟ್ಟ ವೃತ್ತ ನಿರೀಕ್ಷಕ ಶಿವರುದ್ರಪ್ಪ ಹಾಗೂ ಶ್ರೀಮಂಗಲ ಠಾಣಾಧಿಕಾರಿ ರವೀಂದ್ರ ಅವರು ಭೇಟಿ ನೀಡಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡರು.

ಗೋಣಿಕೊಪ್ಪ ಸಮುದಾಯ  ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹಗಳನ್ನು ಕುಟುಂಬದವರಿಗೆ ಒಪ್ಪಿಸಲಾಯಿತು. ವಿದ್ಯಾರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗೆ ತಾ. 9 ರಂದು ರಜೆ ಘೋಷಣೆ ಮಾಡಿ ಸಂತಾಪ ಸೂಚಿಸಲಾಗಿದೆ ಎಂದು ಮುಖ್ಯ ಶಿಕ್ಷಕ ಬಿ. ಎಂ. ವಿಜಯ್ ತಿಳಿಸಿದ್ದಾರೆ.

ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಕೆಲವು ದಿನಗಳಲ್ಲಿ ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದ್ದು , ಪರೀಕ್ಷೆ ಮುಗಿದ ನಂತರ ಮಕ್ಕಳಿಗೆ ಬೇಸಿಗೆ ರಜೆ ಬಿಡಲಾಗುತ್ತದೆ. ಮಕ್ಕಳು ಬಿಸಿಲಿನ ಜಳಕ್ಕೆ, ಮೈ ತಂಪು ಮಾಡಿಕೊಳ್ಳಲು, ಈಜಾಡಲು ಕೆರೆ ಹಾಗೂ ಹೊಳೆ ಕಡೆಗೆ ತೆರಳುತ್ತಾರೆ. ಬೇಸಿಗೆ ಹಿನ್ನೆಲೆಯಲ್ಲಿ ಕೆರೆ, ಹೊಳೆ ಬತ್ತಿಹೋಗಿರುವಂತೆ ಕಂಡರೂ, ಹೂಳು ತುಂಬಿಕೊಂಡು ಅಪಾಯಕಾರಿಯಾಗಿರುತ್ತವೆ.

ಆದುದರಿಂದ ಪೋಷಕರು ಮಕ್ಕಳನ್ನು ನೀರಿನಲ್ಲಿ ಆಟ ಆಡಲು ಹೊರಗೆ ಹೋಗದಂತೆ ಜಾಗ್ರತೆ ವಹಿಸಿ. ಶಾಲೆಗಳಲ್ಲಿ ಶಿಕ್ಷಕರೂ ಕೂಡ ಈ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ಮಾಡಿ, ಇಂತಹ ದುರಂತಗಳು ನಡೆಯದಂತೆ ತಡೆಯ ಬೇಕಾದ ಅನಿವಾರ್ಯತೆ ಇದೆ ಪೊಲೀಸರು, ಶಾಲಾ ಮುಖ್ಯೋಪಾಧ್ಯಾಯರು ಕೋರಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 4
Wow Wow 1