ಕೊಡಗು ಜಿಲ್ಲಾ ಮುಸ್ಲಿಂ ಕಪ್ ಫುಟ್ಬಾಲ್ ಟ್ರೋಫಿ ಅನಾವರಣ: ಕ್ರೀಡೆಯಿಂದ ಸಮುದಾಯದ ಒಗ್ಗಟ್ಟು ಸಾಧ್ಯ: ಆರ್.ಕೆ ಅಬ್ದುಲ್ ಸಲಾಂ
ಮಡಿಕೇರಿ: ಕ್ರೀಡಾಕೂಟಗಳಿಂದ ಸಮುದಾಯದಲ್ಲಿ ಒಗ್ಗಟ್ಟು ಸಾಧ್ಯ ಎಂದು ವಿರಾಜಪೇಟೆ ತಾಲ್ಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಕೆ ಅಬ್ದುಲ್ ಸಲಾಂ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ಫ್ರೆಂಡ್ಸ್ ಸಹಯೋಗದೊಂದಿಗೆ ಅಮ್ಮತ್ತಿಯ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ಏಪ್ರಿಲ್ 23 ರಿಂದ 27ರವರೆಗೆ ನಡೆಯಲಿರುವ ಆರನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯ ಟ್ರೋಫಿ,
ವಿರಾಜಪೇಟೆಯ ಆರ್ಜಿ ಗ್ರಾಮದ ಟರ್ಫ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.ಕೊಡಗು ಜಿಲ್ಲೆಯಲ್ಲಿ ವಿವಿಧ ಜನಾಂಗಗಳ ಕ್ರೀಡಾಕೂಟಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ.
ಕ್ರೀಡೆಯಿಂದ ಸಮುದಾಯದಲ್ಲಿ ಒಗ್ಗಟ್ಟು ಮತ್ತು ಪರಸ್ಪರ ಸಂಬಂಧವನ್ನು ಗಟ್ಟಿಗೊಳಿಸಲು ಒಳ್ಳೆಯ ವೇದಿಕೆ.
ಕಳೆದ ಐದು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಯುವ ಫುಟ್ಬಾಲ್ ಆಟಗಾರರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾವಳಿ ನಡೆಸುತ್ತಿರುವುದು ಶ್ಲಾಘನೀಯ ವಿಷಯ.ಮುಂದಿನ ದಿನಗಳಲ್ಲಿ ಕ್ರೀಡಾಕೂಟಕ್ಕೆ ಬೇಕಾದ ಎಲ್ಲಾ ರೀತಿಯಲ್ಲಿ ಸಹಕಾರ ಮತ್ತು ಬೆಂಬಲ ನೀಡುತ್ತೇನೆ ಎಂದು ಆರ್.ಕೆ ಅಬ್ದುಲ್ ಸಲಾಂ ಹೇಳಿದರು.
ವಿರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಶಬೀರ್ ಮಾತನಾಡಿ,ಇದೇ ಮೊದಲ ಬಾರಿಗೆ ವಿರಾಜಪೇಟೆ ಭಾಗದ ಅಮ್ಮತ್ತಿಯಲ್ಲಿ ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿರುವುದು ಸಂತೋಷ ತಂದಿದೆ.
ಅಮ್ಮತ್ತಿಯ ಯುವಕರು ಸೇರಿ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಗಾಗಿ ಕಳೆದ ಎರಡು ತಿಂಗಳುಗಳಿಂದ ಹಗಲಿರುಳು ದುಡಿಯುತ್ತಿದ್ದಾರೆ.ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಸಯ್ಯದ್ ಶಬೀರ್ ಶುಭ ಹಾರೈಸಿದರು.
ಇದೇ ಸಂದರ್ಭ ಆರನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಅಮ್ಮತ್ತಿ ಫ್ರೆಂಡ್ಸ್ ತಂಡದ ಜೆರ್ಸಿ ಕೂಡ ಅನಾವರಣ ಮಾಡಲಾಯಿತು.
ಈ ಸಂದರ್ಭ ಅಮ್ಮತ್ತಿ ಫ್ರೆಂಡ್ಸ್ ಅಧ್ಯಕ್ಷ ಹನೀಫ,ಕಾರ್ಯದರ್ಶಿ ರಂಶೀದ್,ಖಜಾಂಜಿ ಶಮೀರ್,ಎ.ಎಂ.ಎಫ್.ಸಿ ಸದಸ್ಯ ಶೌಕತ್ ಅಲಿ, ಆಶಿಫ್ ಅಮ್ಮತ್ತಿ ಹಾಗೂ 30 ಅಧಿಕ ಎ.ಎಂ.ಎಫ್.ಸಿ ಸದಸ್ಯರು ಹಾಜರಿದ್ದರು.