ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ವಾತಾವರಣ: ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ಆರೋಪ

ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ವಾತಾವರಣ: ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ಆರೋಪ
ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ

ಮಡಿಕೇರಿ: ಇಂದಿರಾಗಾಂಧಿ 50 ವರ್ಷಗಳ ಹಿಂದೆ ಜಾರಿಗೆ ತಂದ ತುರ್ತುಪರಿಸ್ಥಿತಿಯ ಅಂಶಗಳು ಈಗಿನ ರಾಜ್ಯ ಸರ್ಕಾರದಲ್ಲೂ ಕಂಡು ಬರುತ್ತಿವೆ ಎಂದು ಬಿಜೆಪಿ ರಾಜ್ಯ ಘಟಕದ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ ಆರೋಪಿಸಿದರು.

ಮಡಿಕೇರಿ ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ‘ತುರ್ತುಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕರಾಳ ಇತಿಹಾಸಕ್ಕೆ 50 ವರ್ಷ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಮಾನ್ಯವಾಗಿ ಯುದ್ಧಗಳು ನಡೆದಾಗ ತುರ್ತುಪರಿಸ್ಥಿತಿ ಹೇರುವುದು ಸ್ವಾಭಾವಿಕ. ಆದರೆ, ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದ್ದು ಕೇವಲ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಮಾತ್ರ. ಈ ಘಟನೆ ಕುರಿತು ಯುವ ತಲೆಮಾರಿನಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.ಈಗಲೂ ರಾಜ್ಯಸರ್ಕಾರದ ನಡವಳಿಕೆಗಳನ್ನು ಗಮನಿಸಿದರೆ ಅಂದಿನ ತುರ್ತುಪರಿಸ್ಥಿತಿಯ ಕರಾಳ ಮುಖಗಳ ಛಾಯೆ ಕಾಣುತ್ತಿದೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ನಿರಂತರವಾಗಿ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದೆ ಎಂದು ದೂರಿದರು.

ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ,ಇಂದಿರಾಗಾಂಧಿ ವಿರುದ್ಧ ಹೋರಾಟ ಮಾಡಿದವರನ್ನು 19 ತಿಂಗಳ ಕಾಲ ಜೈಲಿನಲ್ಲಿಡಲಾಗಿತ್ತು. ಕೊಡಗು ಜಿಲ್ಲೆಯಲ್ಲಿಯೂ 15ಕ್ಕೂ ಹೆಚ್ಚು ಮುಖಂಡರನ್ನು ಬಂಧಿಸಲಾಗಿತ್ತು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್‌ಜೈನಿ, ಮುಖಂಡರಾದ ನಾಗೇಶ್‌ ಕುಂದಲ್ಪಾಡಿ, ರೀನಾ ಪ್ರಕಾಶ್, ನೆಲ್ಲಿರ ಚಲನ್, ಅರುಣ್ ಭೀಮಯ್ಯ, ಕಾಂಗೀರ ಸತೀಶ್, ರಘು ನಾಣಯ್ಯ, ಕಿಲನ್ ಗಣಪತಿ, ತಳೂರು ಕಿಶೋರ್‌ಕುಮಾರ್, ಬಿ.ಕೆ.ಅರುಣ್‌ಕುಮಾರ್ ಇದ್ದರು.