ಮುಂಗಾರು ಕಾಲಿಟ್ಟರು "ಕೊಡಗಿಗೆ ಕಾಲಿಡದ " ಉಸ್ತುವಾರಿ ಸಚಿವರು": ಆರಂಭದಲ್ಲಿದ್ದ ಜೋಶ್ ಕಳೆದುಕೊಂಡರೇ ಎನ್.ಎಸ್ ಬೋಸರಾಜು!"

ಮುಂಗಾರು ಕಾಲಿಟ್ಟರು "ಕೊಡಗಿಗೆ ಕಾಲಿಡದ "  ಉಸ್ತುವಾರಿ ಸಚಿವರು":  ಆರಂಭದಲ್ಲಿದ್ದ ಜೋಶ್ ಕಳೆದುಕೊಂಡರೇ ಎನ್.ಎಸ್ ಬೋಸರಾಜು!"

(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ಅವಧಿಗೂ ಮುನ್ನವೇ ಈ ಬಾರಿ ಮುಂಗಾರು ಕಾಲಿಟ್ಟಿದೆ.ಮೇ ತಿಂಗಳ ಅಂತ್ಯದಲ್ಲಿ ಒಂದು ವಾರಗಳ ಕಾಲ ಸುರಿದ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನಷ್ಟವುಂಟಾಗಿತ್ತು.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಭೆಯಲ್ಲಿ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲೆಗೆ ತೆರಳಿ ಮಳೆಯಿಂದಾದ ಹಾನಿಯ ಬಗ್ಗೆ, ಮುಂಜಾಗೃತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಹೇಳಿದ್ದರು.ಇದೀಗ ಜಿಲ್ಲೆಗೆ ಮುಂಗಾರು ಕಾಲಿಟ್ಟರು ಕೂಡ ಉಸ್ತುವಾರಿ ಸಚಿವರಾದ ಎನ್.ಎಸ್ ಬೋಸರಾಜು ಅವರು ಕಾಲಿಟ್ಟಿಲ್ಲ ಎಂಬ ಆಕ್ರೋಶಗ ಜನವಲಯದಲ್ಲಿ ಕೇಳಿಬರುತ್ತಿದೆ.

ಅದಲ್ಲದೇ ಮೇ ಅಂತ್ಯದಲ್ಲಿ ಸುರಿದ ಮಳೆಯ ಸಂದರ್ಭದಲ್ಲಿ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಪರಿಶೀಲನಗೆ ಕೊಡಗಿಗೆ ಆಗಮಿಸದ ಉಸ್ತುವಾರಿ ಸಚಿವ ಎನ್.ಎಸ್ ಬೋಸರಾಜು, ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಕಳೆದ ವಾರ ಉದ್ಘಾಟನೆಗೊಂಡಿರುವ ಕುಶಾಲನಗರ ನೂತನ ಪುರಸಭೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೂಡ ಉಸ್ತುವಾರಿ ಸಚಿವ ಬೋಸರಾಜು ಭಾಗವಹಿಸಿರಲಿಲ್ಲ.ಆರಂಭದಲ್ಲಿ ಜಿಲ್ಲೆಗೆ ತಿಂಗಳಿಗೆ ಎರಡ್ಮೂರು ಬಾರಿ ಭೇಟಿ ನೀಡುತ್ತಿದ್ದ ಎನ್.ಎಸ್ ಬೋಸರಾಜು ಅವರು ಇತ್ತೀಚಿನ ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡುವುದು ಕಡಿಮೆಗೊಂಡಿದೆ.ಆರಂಭದಲ್ಲಿದ್ದ ಉತ್ಸಾಹ,ಕಳೆದ ಆರು ತಿಂಗಳಲ್ಲಿ ಉಸ್ತುವಾರಿ ಸಚಿವರಲ್ಲಿ ಕಾಣುತ್ತಿಲ್ಲ.

ಪ್ರಭಾವಿ ಶಾಸಕರದ್ದೇ ನಿರ್ಧಾರ ಫೈನಲ್!

ಎನ್‌ಎಸ್ ಬೋಸರಾಜು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು.ರಾಯಚೂರು ಮೂಲದವಾರಗಿರುವ ಎನ್‌ಎಸ್ ಬೋಸರಾಜು ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ನೇರವಾಗಿ ಸಚಿವ ಸ್ಥಾನಗಿಟ್ಟಿಸಿ,ನಂತರ ವಿಧಾನಪರಿಷತ್ ಗೆ ನಾಮ ನಿರ್ದೇಶನಗೊಂಡಿದ್ದರು.

ಹೈಕಮಾಂಡ್ ಹಾಗೂ ಸರ್ಕಾರದ ಮಟ್ಟದಲ್ಲಿ ಪ್ರಭಾವಿ ಸಚಿವ.ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರೇ ಗೆಲುವು ಸಾಧಿಸಿರುವ ಕಾರಣ ಹಾಗೂ ಸೂಕ್ಷ್ಮ ಜಿಲ್ಲೆಗಳಾಗಿರುವುದರಿಂದ ಕೆಲವು ಸಚಿವರು ಕೊಡಗು ಜಿಲ್ಲಾ ಉಸ್ತುವಾರಿ ಸ್ಥಾನವನ್ನು ವಹಿಸಿಕೊಳ್ಳಲು ಹಿಂದೇಟು ಹಾಕಿದ್ದರು.ಕೊನೆಯಗಳಿಗೆಯಲ್ಲಿ ಅಚ್ಚರಿಯಾಗಿ ಯಾರು ಕೂಡ ಊಹಿಸದ ವ್ಯಕ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಸರ್ಕಾರ ವಹಿಸಿತ್ತು.ಆರಂಭದಲ್ಲಿ ಬಹಳ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದ ಬೋಸರಾಜು ಅವರು,ನಂತರ ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡುವುದು ಕಡಿಮೆಗೊಳಿಸಿದ್ದಾರೆ.ಕೆಲವು ತಿಂಗಳುಗಳ ಹಿಂದೆ ರಾಜ್ಯದಲ್ಲಿ ಉಸ್ತುವಾರಿ ಸಚಿವರ ಬದಲಾವಣೆಗೊಳ್ಳಲಿದೆ ಎಂಬ ಮಾತುಗಳು ಕೂಡ ಹರಿದಾಡುತ್ತಿತ್ತು.

ಜಿಲ್ಲೆಯ ಶಾಸಕದ್ವಯರಾದ ಎ.ಎಸ್ ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರು ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಶಾಸಕರಾಗುತ್ತಿದ್ದಂತೆ,ಇವರನ್ನು ಮೀರಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಉಸ್ತುವಾರಿ ಸಚಿವರಿಗೆ ಕಷ್ಟಸಾಧ್ಯ.ಒಂದು ವೇಳೆ ಶಾಸಕರನ್ನು ಮೀರಿ ನಿರ್ಧಾರ ತೆಗೆದುಕೊಂಡರೆ,ಶಾಸಕರನ್ನು ಎದುರಿಸಬೇಕಾಗುತ್ತದೆ ಎಂಬಿತ್ಯಾದಿ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಉಸ್ತುವಾರಿ ಸಚಿವ ಬೋಸರಾಜಿ ಅವರು ಜಿಲ್ಲೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂಬ ಮಾತುಗಳಿವೆ.ಅದಲ್ಲದೇ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ, ಸಚಿವ ಸಂಪುಟ ಪುನರ್ ರಚನೆ ವೇಳೆಯಲ್ಲಿ ಎನ್.ಎಸ್ ಬೋಸರಾಜ್ ಅವರನ್ನು ಬದಲಾಯಿಸಿ ವಿಧಾನಪರಿಷತ್ ನಿಂದ ಬಿ.ಕೆ ಹರಿಪ್ರಸಾದ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುತ್ತಾರೆ ಎಂಬ ರಾಜಕೀಯ ಚರ್ಚೆಗಳು ಕೂಡ ನಡೆಯುತ್ತಿದೆ. ಬೋಸರಾಜು ತಮ್ಮ ತವರು ಜಿಲ್ಲೆ ರಾಯಚೂರಿನಲ್ಲೇ ಹೆಚ್ಚಿನ ಆಸಕ್ತಿ ತೋರಿದ್ದಾರೆ.

ರಾಜ್ಯದಲ್ಲಿ ಕಾರ್ಯನಿರ್ವಹಣೆಯಲ್ಲಿ ಉತ್ತಮ ಸಚಿವರು ಎಂಬ ಹೆಗ್ಗಳಿಕೆ ಇದ್ದರೂ ಕೂಡ,ಉಸ್ತುವಾರಿ ಸಚಿವರಾಗಿ ಎನ್.ಎಸ್ ಬೋಸರಾಜು ಅವರ ಕೊಡಗು ಏನು ಎಂಬ ಚರ್ಚೆಗಳು ಕೂಡ ನಡೆಯುತ್ತಿದೆ.ಇದೀಗ ಮುಂಗಾರು ಕಾಲಿಟ್ಟರು ಕೂಡ ಉಸ್ತುವಾರಿ ಸಚಿವರು ಮಾತ್ರ ಜಿಲ್ಲೆಗೆ ಕಾಲಿಟ್ಟಿಲ್ಲ.ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಮಳೆಯಿಂದಾಗಿ ಪ್ರವಾಹ,ಮಾನಹಾನಿ,ಭೂಕುಸಿತ ಸಂಭವಿಸುತ್ತಿದೆ.ಇದರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತೆಗದುಕೊಂಡು ಸಭೆ ನಡೆಸಬೇಕಿದ್ದ ಉಸ್ತುವಾರಿ ಸಚಿವರು ಜಿಲ್ಲೆಗೆ ಇದುವರೆಗೆ ಆಗಮಿಸಿಲ್ಲ.

2004ರಿಂದ ಕೊಡಗಿಗೆ ಗೆಸ್ಟ್ ಉಸ್ತುವಾರಿ ಸಚಿವರು!

ಕೊಡಗು ಜಿಲ್ಲೆಯಲ್ಲಿ ಈ ಬಾರಿಯಾದರೂ ಕೊಡಗಿನ ಶಾಸಕರೇ ಉಸ್ತುವಾರಿ ಸಚಿವ ಸ್ಥಾನವನ್ನು ವಹಿಸುವ ನಿರೀಕ್ಷೆಗಳಿತ್ತು. ಆದರೆ,ಕೊಡಗಿನ ಶಾಸಕರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಭಾಗ್ಯ ಒಲಿಯದೆ,ಎಂದಿನಂತೆ ಕೊಡಗಿಗೆ ಗೆಸ್ಟ್ ಉಸ್ತುವಾರಿ ಸಚಿವರೇ ಬರಬೇಕಾಯಿತು.ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುವ ಸಚಿವರಿಗೆ ಆರಂಭದಲ್ಲಿದ್ದ ಆಸಕ್ತಿ, ಉತ್ಸಾಹ,ಅಂತ್ಯದವರೆಗೆ ಇರುವುದಿಲ್ಲ.ಜಿಲ್ಲೆಯ ಬಗ್ಗೆ ಯಾವುದೇ ರೀತಿಯ ಮಾಹಿತಿ,ಭೌಗೋಳಿಕವಾದ ವಿಷಯದ ಬಗ್ಗೆ ಅರಿವೇ ಇಲ್ಲದ ಉತ್ತರ ಕರ್ನಾಟಕ, ಕೋಲಾರ, ದಕ್ಷಿಣ ಕನ್ನಡ,ಉಡುಪಿ,ತುಮಕೂರು ,ಮೈಸೂರು ಮೂಲದವರೇ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನವನ್ನು ವಹಿಸಿಕೊಂಡಿದ್ದಾರೆ.ಕೊಡಗಿನ ಸಮಸ್ಯೆಗಳನ್ನು ತಿಳಿಯುವ ವೇಳೆಗೆ ಉಸ್ತುವಾರಿ ಸಚಿವರ ಬದಲಾವಣೆ ಕೂಡ ಆಗಿರುತ್ತದೆ.ಈಗೇ ಕಳೆದ ಎರಡು ದಶಕಗಳಿಂದ ಕೊಡಗು ಜಿಲ್ಲೆಗೆ ಗೆಸ್ಟ್ ಉಸ್ತುವಾರಿ ಸಚಿವರೇ ಕಾರ್ಯನಿರ್ವಹಿಸುತ್ತಿದ್ದಾರೆ‌.

1999-2004ರ ಅವಧಿಯಲ್ಲಿ ಕೊಡಗಿನ ಎಂ.ಎಂ ನಾಣಯ್ಯ ಅವರು ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.ನಂತರ ಎಲ್ಲರೂ ಹೊರ ಜಿಲ್ಲೆಯವರೇ ಕೊಡಗಿನ ಉಸ್ತುವಾರಿ ಸ್ಥಾನವನ್ನು ವಹಿಸಿದ್ದಾರೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೂಡ ಇಬ್ಬರು ಶಾಸಕರು ಬಿಜೆಪಿಯವರೇ ಆಗಿದ್ದರೂ ಕೂಡ ಸಚಿವ ಸ್ಥಾನ ನೀಡಿರಲಿಲ್ಲ.2004ರಿಂದ 2008ರವರೆಗೆ ಅಲಂಗೂರು ಶ್ರೀನಿವಾಸ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2008ರಿಂದ 2013ರವರೆಗೆ ರಾಮಚಂದ್ರಗೌಡ,ಕೃಷ್ಣ ಪಾಲೇಮಾರ್,ರೇಣುಕಾಚಾರ್ಯ,ಸಿ.ಎಚ್‌ ವಿಜಯ ಶಂಕರ್ ಹಾಗೂ ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾಗಿ ಕೊಡಗಿನ ಉಸ್ತುವಾರಿ ಸಚಿವ ಸ್ಥಾನವನ್ನು ಕಡಿಮೆ ಅವಧಿಯಲ್ಲಿ ವಹಿಸಿದ್ದರು.

2013 ರಿಂದ 2018ರವರೆಗೆ,ಕೆ‌‌.ಜೆ ಜಾರ್ಜ್, ಡಾ.ಸಿಹೆಚ್ ಮಹದೇವಪ್ಪ,ದಿನೇಶ್ ಗುಂಡೂರಾವ್ ಹಾಗೂ ಡಾ ಎಂ.ಆರ್ ಸೀತಾರಾಮ್ ಕಾರ್ಯನಿರ್ವಹಿಸಿದ್ದರು.ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಾ.ರಾ ಮಹೇಶ್ ಉಸ್ತುವಾರಿ ಸ್ಥಾನವನ್ನು ವಹಿಸಿಕೊಂಡಿದ್ದರು.2018ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಅವರ ಕಾರ್ಯವೈಖರಿಯ ಬಗ್ಗೆ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತವಾಗಿತ್ತು.

2019 ರಿಂದ 2023ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡಗು ಜಿಲ್ಲೆ ನಾಲ್ವರು ಉಸ್ತುವಾರಿ ಸಚಿವರನ್ನ ಕಂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತೀ ವರ್ಷ ಉಸ್ತುವಾರಿ ಸಚಿವರ ಬದಲಾವಣೆ ಮಾಡಲಾಗುತ್ತಿತ್ತು.2019-20 ಸುರೇಶ್ ಕುಮಾರ್,2020-21 ವಿ.ಸೋಮಣ್ಣ, 2021-22 ಕೋಟ ಶ್ರೀನಿವಾಸ್ ಪೂಜಾರಿ,2022-23 ರಲ್ಲಿ ಬಿ.ಸಿ ನಾಗೇಶ್ ಉಸ್ತುವಾರಿ ಸಚಿವ ಸ್ಥಾನವನ್ನು ವಹಿಸಿಕೊಂಡಿದ್ದರು.ಈಗೇ ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ಉಸ್ತುವಾರಿ ಜವಾಬ್ದಾರಿಯನ್ನ ಹೊರ ಜಿಲ್ಲೆಯವರೇ ವಹಿಸುತ್ತಿದ್ದಾರೆ.ಆದರೆ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನವನ್ನು ವಹಿಸಿಕೊಂಡವರ ಕಾರ್ಯವೈಖರಿ ಆರಂಭದಲ್ಲೇ ಉತ್ತಮವಾಗಿದ್ದರು ಕೂಡ ನಂತರ ದಿನಗಳಲ್ಲಿ ಅಷ್ಟಕಷ್ಟೇ‌‌.ಇದೀಗ ಹಾಲಿ ಉಸ್ತುವಾರಿ ಸಚಿವರಾಗಿರುವ ಎನ್.ಎಸ್ ಬೋಸರಾಜು ಅವರಿಗೆ ಆರಂಭದಲ್ಲಿದ್ದ ಉತ್ಸಾಹ, ಆಸಕ್ತಿ ಕಳೆದುಕೊಂಡಂತೆ ಕಾಣುತ್ತಿದೆ..ಜಿಲ್ಲೆಯಲ್ಲಿ ಮುಂಗಾರು ಮಳೆ ಸುರಿಯುತ್ತಿದ್ದರು ಕೂಡ ಉಸ್ತುವಾರಿ ಸಚಿವರು ಮಾತ್ರ ಜಿಲ್ಲೆಗೆ ಆಗಮಿಸಿಲ್ಲ.ಕೊಡಗು ಜಿಲ್ಲೆಯ ಶಾಸಕರೇ ಜಿಲ್ಲೆಯ ಉಸ್ತುವಾರಿ ಸಚಿವರಾಗುವ ಕಾಲ ಯಾವಾಗ ಕೂಡಿ ಬರಲಿದೆ ಕಾದು ನೋಡಬೇಕಿದೆ.