ಕುಖ್ಯಾತ ‘ಬ್ಯಾಂಡ್ ಬಜಾ’ ಗ್ಯಾಂಗ್‌ ನಿಂದ ಅರ್ಧ ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ; ಇಬ್ಬರು ಆರೋಪಿಗಳು ಪರಾರಿ

ಕುಖ್ಯಾತ ‘ಬ್ಯಾಂಡ್ ಬಜಾ’ ಗ್ಯಾಂಗ್‌ ನಿಂದ  ಅರ್ಧ ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ; ಇಬ್ಬರು ಆರೋಪಿಗಳು ಪರಾರಿ
Photo credit: TV09 (ವಶಪಡಿಸಿಕೊಂಡ ಆಭರಣಗಳು)

ದಾವಣಗೆರೆ, ಡಿ. 10: ಪ್ರತಿಷ್ಠಿತ ಮದುವೆ ಸಮಾರಂಭಗಳಲ್ಲಿ ಅತಿಥಿಗಳ ಗಮನ ಬೇರೆಡೆ ಸೆಳೆಯುವ ತಂತ್ರ ಬಳಸಿಕೊಂಡು ಚಿನ್ನಾಭರಣ ಕಳವು ಮಾಡುತ್ತಿದ್ದ ಮಧ್ಯಪ್ರದೇಶದ ಕುಖ್ಯಾತ ‘ಬ್ಯಾಂಡ್ ಬಜಾ’ ಗ್ಯಾಂಗ್ ನಡೆಸಿದ ದರೋಡೆ ಪ್ರಕರಣವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ. ಮಧ್ಯಪ್ರದೇಶದ ಪರೋರಿನಗರ ಪ್ರದೇಶದಲ್ಲಿ ನಡೆಸಿದ ನಿಖರ ದಾಳಿಯಲ್ಲಿ 51.49 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ದಾಳಿ ವೇಳೆ ಗ್ಯಾಂಗ್‌ನ ಇಬ್ಬರು ಪ್ರಮುಖ ಆರೋಪಿಗಳು ಪೊಲೀಸರ ಕೈ ತಪ್ಪಿಸಿಕೊಂಡಿದ್ದಾರೆ.

ನವೆಂಬರ್ 14ರಂದು ದಾವಣಗೆರೆಯ ಅಪೂರ್ವ ರೆಸಾರ್ಟ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಬಾಲಕಿ ನೃತ್ಯ ಮಾಡುತ್ತಿದ್ದ ವೇಳೆ, ಕುಟುಂಬದವರು ಸಂಭ್ರಮದಲ್ಲಿ ಚಪ್ಪಾಳೆ ತಟ್ಟುತ್ತಿದ್ದ ಕ್ಷಣದಲ್ಲಿ 535 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ನಾಪತ್ತೆಯಾಗಿತ್ತು. ಈ ಕೃತ್ಯಕ್ಕೆ ಗ್ಯಾಂಗ್ ಸದಸ್ಯರಾದ ಕರಣ್ ವರ್ಮಾ ಮತ್ತು ವಿನಿತ್ ಸಿಸೋಡಿಯಾ ಹೊಣೆ ಎಂಬುದು ತನಿಖೆಯಲ್ಲಿ ಸ್ಪಷ್ಟವಾಯಿತು.

ಪ್ರಕರಣ ಭೇದಿಸಲು ದಾವಣಗೆರೆ ಗ್ರಾಮಾಂತರ ವಿಭಾಗದ ಪೊಲೀಸರು ವೇಷ ಬದಲಿಸಿ ಮಧ್ಯಪ್ರದೇಶಕ್ಕೆ ತೆರಳಿ ಸುಳಿವು ಸಂಗ್ರಹಿಸಿದರು. ಕಳವಾಗಿದ್ದ ಚಿನ್ನಾಭರಣದ ಬ್ಯಾಗ್ ಮಧ್ಯವರ್ತಿಯ ಮೂಲಕ ಮಾರಾಟಕ್ಕಿಳಿಯುತ್ತಿದೆ ಎಂಬ ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ದಾಳಿ ನಡೆಸಿ ಅರ್ಧ ಕೋಟಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡರು. ರಾಜ್‌ಗಢ ಜಿಲ್ಲೆಯ ನರಸಿಂಗ್ ತಾಲೂಕು, ಕಡಿಯಾಸಾಂಸಿ ಮತ್ತು ಗುಲ್‌ಖೇಡಾ ಗ್ರಾಮಗಳಲ್ಲಿನ ಕೆಲವು ಕುಟುಂಬಗಳು ತಲತಲಾಂತರಗಳಿಂದಲೇ ಕಳ್ಳತನವನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವ ಸಂಗತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಳವಾಗಿದ್ದ ಬ್ಯಾಗ್‌ನಲ್ಲಿ ಡಾಬು, ಅವಲಕ್ಕಿ ಸರ, ಲಾಂಗ್ ಚೈನ್, ನಾಲ್ಕು ನೆಕ್‌ಲೆಸ್‌ಗಳು, ಎರಡು ಚಿನ್ನದ ಸರಗಳು ಸೇರಿದಂತೆ ಒಟ್ಟು 16 ಚಿನ್ನಾಭರಣಗಳಿದ್ದವು. ಇವುಗಳಲ್ಲಿ ಹೆಚ್ಚಿನವನ್ನು ಈಗ ಪೊಲೀಸರು ಮರುಪಡೆದಿದ್ದಾರೆ.

ಮುಖ್ಯ ಆರೋಪಿ ಕರಣ್ ವರ್ಮಾ ಮತ್ತು ವಿನಿತ್ ಸಿಸೋಡಿಯಾ ಪರಾರಿಯಾಗಿರುವುದರಿಂದ, ಆತನ ಬಂಧನಕ್ಕೆ ರಾಜ್ಯಾದ್ಯಂತ ಶೋಧ ಮುಂದುವರಿದಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.