ಸೈಟ್ ಕೊಡಿಸುವ ನೆಪದಲ್ಲಿ ಸ್ವಾಮೀಜಿಯಿಂದ ವಂಚನೆ ಆರೋಪ, ಮಹಿಳೆಯಿಂದ ಲೈಂಗಿಕ ಕಿರುಕುಳ ದೂರು

ಸೈಟ್ ಕೊಡಿಸುವ ನೆಪದಲ್ಲಿ ಸ್ವಾಮೀಜಿಯಿಂದ ವಂಚನೆ ಆರೋಪ,  ಮಹಿಳೆಯಿಂದ ಲೈಂಗಿಕ ಕಿರುಕುಳ ದೂರು

ದೇವನಹಳ್ಳಿ, ಡಿ. 13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಳೆಕೋಟೆಯಲ್ಲಿ ಇರುವ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಡಿಮೆ ದರದಲ್ಲಿ ಸೈಟ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ನಡೆಸಿದ್ದು, ಹಣ ವಾಪಸ್ ಕೇಳಿದಾಗ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರ ಮಹಿಳೆ ಮತ್ತು ಆಕೆಯ ಪತಿ ಸ್ವಾಮೀಜಿ ನಿವಾಸದ ಸಮೀಪ ವಾಸವಿದ್ದು, ಪರಿಚಯದ ಹಿನ್ನೆಲೆಯಲ್ಲೇ ಈ ವ್ಯವಹಾರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಮಾರು ₹13 ಲಕ್ಷ ಮೌಲ್ಯದ ಸೈಟ್ ಅನ್ನು ₹12 ಲಕ್ಷಕ್ಕೆ ಕೊಡಿಸುವ ಭರವಸೆ ನೀಡಲಾಗಿತ್ತು. ಮಹಿಳೆ ಬಳಿ ₹8 ಲಕ್ಷ ಮಾತ್ರ ಇದ್ದ ಕಾರಣ ಉಳಿದ ಹಣಕ್ಕೆ ಸಹಾಯ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು ಎನ್ನಲಾಗಿದೆ.

ಮಹಿಳೆಯ ದೂರಿನ ಪ್ರಕಾರ, ತಮ್ಮ ಬಳಿ ಇದ್ದ ಹಣದಲ್ಲಿ ₹5 ಲಕ್ಷವನ್ನು ಸ್ವಾಮೀಜಿ ಮತ್ತೊಬ್ಬರಿಗೆ ಅಡ್ವಾನ್ಸ್ ರೂಪದಲ್ಲಿ ನೀಡಿದ್ದಾರೆ. ಆದರೆ ಒಂದು ವರ್ಷ ಕಳೆದರೂ ಸೈಟ್ ನೀಡದೆ, ಅಡ್ವಾನ್ಸ್ ಹಣವನ್ನೂ ವಾಪಸ್ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗಿದೆ.

ಸೈಟ್ ದೊರೆಯದ ಹಿನ್ನೆಲೆಯಲ್ಲಿ ಹಣ ವಾಪಸ್ ಕೇಳಿದಾಗ, ಸ್ವಾಮೀಜಿ ಅಶ್ಲೀಲ ಹಾಗೂ ಲೈಂಗಿಕ ಸೂಚನೆಗಳೊಂದಿಗೆ ಮಾತನಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧದ ಆಡಿಯೋ ಮತ್ತು ವಿಡಿಯೋ ದಾಖಲೆಗಳನ್ನು ಸಂಗ್ರಹಿಸಿಕೊಂಡಿದ್ದು, ಅವುಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಇದಲ್ಲದೆ, ನಿರಂತರವಾಗಿ ಫೋನ್ ಕರೆಗಳು, ಆಡಿಯೋ ಸಂದೇಶಗಳು ಹಾಗೂ ವಿಡಿಯೋ ಕಾಲ್ ಮೂಲಕ ಕಿರುಕುಳ ನೀಡಲಾಗಿದೆ. ಒಂಟಿಯಾಗಿದ್ದ ಸಂದರ್ಭಗಳಲ್ಲಿ ಮನೆಗೆ ಬಂದು ಕಿರುಕುಳ ನೀಡಿದ್ದು, ದಾಖಲೆಗಳನ್ನು ಅಳಿಸಲು ಒತ್ತಡ ಹೇರಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಇದೆ. ಈ ಘಟನೆಗಳಿಂದಾಗಿ ಕುಟುಂಬದಲ್ಲಿ ಕಲಹ ಉಂಟಾಗಿ, ಪತಿ ತನ್ನನ್ನು ಬಿಟ್ಟು ಹೋಗಿದ್ದಾರೆ ಎಂದು ಮಹಿಳೆ ಅಲವತ್ತುಕೊಂಡಿದ್ದಾರೆ.

ಮೆಳೆಕೋಟೆ ಪ್ರದೇಶದಲ್ಲಿ ಸರ್ಕಾರದ ಆರ್ಥಿಕ ನೆರವಿನಿಂದ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠವನ್ನು ಸ್ಥಾಪಿಸಿರುವ ವಿಚಾರವೂ ಇದೀಗ ಚರ್ಚೆಗೆ ಬಂದಿದೆ. 

ಇತ್ತ, ಬ್ರಹ್ಮಾನಂದ ಗುರೂಜಿ ಕೂಡ ಮಹಿಳೆ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದ್ದು, ಹಣ ನೀಡದಿದ್ದರೆ ತಮ್ಮ ಫೋಟೊ, ಆಡಿಯೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.