ಮಡಿಕೇರಿ:ಪೊಲೀಸ್ ಕಾನ್ಸ್ಟೇಬಲ್ ಪತ್ನಿಯಿಂದಲೇ ಮಂಡ್ಯ ಮೂಲದ ಯುವಕನಿಗೆ ಹನಿಟ್ರ್ಯಾಪ್ : ಆನ್‌ಲೈನ್ ಗೆಳತಿಗಾಗಿ ಮಂಡ್ಯದಿಂದ ಮಂಜಿನ ನಗರಿಗೆ ಬಂದ ಪ್ರಿಯಕರ
ಮಡಿಕೇರಿ ಡಿ.13: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯ ಆಹ್ವಾನದ ಮೇರೆಗೆ ಮಡಿಕೇರಿಗೆ ಬಂದಿದ್ದ ಮಂಡ್ಯ ಜಿಲ್ಲೆಯ ಯುವಕನೊಬ್ಬ ಹನಿಟ್ರ್ಯಾಪ್‌ಗೆ ಒಳಗಾದ ಘಟನೆ ನಗರದಲ್ಲಿ ನಡೆದಿದೆ. ಖಾಸಗಿ ಹೋಂಸ್ಟೇಯೊಂದರಲ್ಲಿ ಯುವಕನನ್ನು ಕೆಲಕಾಲ ಬಂಧಿಸಿ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಹದೇವ್ ಎಂಬ ಯುವಕನಿಗೆ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಯೊಂದಿಗೆ ಭೇಟಿಯಾಗಲು ಶುಕ್ರವಾರ ಸಂಜೆ ಮಡಿಕೇರಿಗೆ ಬಂದ ಮಹದೇವ್ ನನ್ನು ಮಂಗಳಾದೇವಿ ನಗರದ ಮನೆಯೊಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಕಾಲ ಮಾತುಕತೆ ನಡೆಸಿ ಮದ್ಯ ಸೇವಿಸಿದ ಬಳಿಕ, ತುರ್ತು ಕಾರಣವಿದೆ ಎಂದು ಹೇಳಿ ಯುವತಿ ಹೊರಟಿದ್ದಾಳೆ ಎನ್ನಲಾಗಿದೆ.
ಅದೇ ವೇಳೆ ಮನೆಗೆ ನುಗ್ಗಿದ ಮೂವರು ಯುವಕರು ಮಹದೇವ್ ಮೇಲೆ ಹಲ್ಲೆ ನಡೆಸಿ, ಹಣ ಹಾಗೂ ಇತರ ವಸ್ತುಗಳನ್ನು ಕಸಿದುಕೊಂಡು ಭಾರೀ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಂತರ ಯುವಕ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಬಂದರೂ, ಆರೋಪಿಗಳು ಆಟೋದಲ್ಲಿ ಅಪಹರಣಕ್ಕೆ ಯತ್ನಿಸಿದ್ದಾರೆ. ಈ ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಅಲ್ಲಿಂದ ಪಾರಾದ ಮಹದೇವ್ ಅರೆಬೆತ್ತಲೆ ಸ್ಥಿತಿಯಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ ಎನ್ನಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಹಲ್ಲೆಗೆ ಬಳಸಲಾಗಿದೆ ಎನ್ನಲಾದ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣ ಹನಿಟ್ರ್ಯಾಪ್‌ಗೆ ಸಂಬಂಧಿಸಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ, ಪ್ರಕರಣದ ಪ್ರಮುಖ ಆರೋಪಿ ಮಡಿಕೇರಿ ನಗರದ ಅಶೋಕಪುರ ನಿವಾಸಿಯಾಗಿರುವ ರಚನಾ ಎನ್ನಲಾಗಿದೆ. ಆಕೆ ಮಾಜಿ ಪೊಲೀಸ್ ಕಾನ್‌ಸ್ಟೇಬಲ್‌ರ ಪತ್ನಿಯಾಗಿದ್ದು, ಈಕೆ ಕುಡಿತದಿಂದ ಬೇಸತ್ತು ಪತಿ ವಿಚ್ಛೇದನ ನೀಡಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತು ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಮುಂದುವರಿಸಿದ್ದಾರೆ.
