ಆಳಂದ ಮತಗಳ್ಳತನ ಪ್ರಕರಣ | ಮಾಜಿ ಶಾಸಕ ಸೇರಿ ಏಳು ಮಂದಿ ವಿರುದ್ಧ ಸಿಐಡಿ ಚಾರ್ಜ್‌ಶೀಟ್

Dec 13, 2025 - 23:02
 0  415
ಆಳಂದ ಮತಗಳ್ಳತನ ಪ್ರಕರಣ | ಮಾಜಿ ಶಾಸಕ ಸೇರಿ ಏಳು ಮಂದಿ ವಿರುದ್ಧ ಸಿಐಡಿ ಚಾರ್ಜ್‌ಶೀಟ್

ಬೆಂಗಳೂರು, ಡಿ. 13: ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆ ವೇಳೆ ನಡೆದಿದ್ದ ಮತಗಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ತನಿಖೆ ನಡೆಸಿದ ಸಿಐಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿದಂತೆ ಏಳು ಮಂದಿಯ ವಿರುದ್ಧ ಬೆಂಗಳೂರು ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.

ರಾಜ್ಯ ಸರ್ಕಾರದ ಆದೇಶದಂತೆ ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ರಚಿಸಲಾಗಿದ್ದ ಎಸ್‌ಐಟಿ ತನಿಖೆ ಪೂರ್ಣಗೊಳಿಸಿದ್ದು, ಸುಮಾರು 22 ಸಾವಿರ ಪುಟಗಳ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ತನಿಖೆಯಲ್ಲಿ, ಆಳಂದ ಕ್ಷೇತ್ರದಲ್ಲಿ 5,994 ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂಬುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಚಾರ್ಜ್‌ಶೀಟ್‌ನಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಸೇರಿದಂತೆ ಒಟ್ಟು ಏಳು ಮಂದಿಯನ್ನು ಆರೋಪಿಗಳಾಗಿ ಉಲ್ಲೇಖಿಸಲಾಗಿದೆ. ಮತದಾರರ ಹೆಸರುಗಳನ್ನು ಅಳಿಸಲು ಸೈಬರ್ ಸೆಂಟರ್‌ಗಳನ್ನು ಬಳಸಿಕೊಂಡು ಹಣ ಪಾವತಿಸಲಾಗಿದೆ ಎಂಬ ಆರೋಪವೂ ತನಿಖೆಯಲ್ಲಿ ಹೊರಬಿದ್ದಿದೆ.

ಪ್ರತಿ ಮತಕ್ಕೆ 80 ರೂ. ಪಾವತಿ ಆರೋಪ

ಪ್ರಕರಣದಲ್ಲಿ ಪ್ರತಿ ಮತದಾರರ ಹೆಸರನ್ನು ಅಳಿಸಲು 80 ರೂ. ಹಣ ಪಾವತಿಸಲಾಗಿದೆ ಎಂಬ ಗಂಭೀರ ಆರೋಪವಿದ್ದು, 2022ರ ಡಿಸೆಂಬರ್‌ನಿಂದ 2023ರ ಫೆಬ್ರವರಿವರೆಗೆ 6,018 ಮತಗಳ ರದ್ದತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ಮತಗಳ್ಳತನಕ್ಕೆ ಹಣಕಾಸು ನೆರವು ಒದಗಿಸಲಾಗಿದೆ ಎಂಬ ಆರೋಪವೂ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ವಿರುದ್ಧ ದಾಖಲಾಗಿದೆ ಎಂದು ತಿಳಿದುಬಂದಿದೆ. 

2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದರು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಈ ವಿಷಯವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0