ಕೊಡಗು: ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ 2 ವರ್ಷದ ಮಗುವನ್ನು ಪತ್ತೆ ಮಾಡಿದ ಶ್ವಾನ : ರಾತ್ರಿಯಿಡೀ ತೋಟದಲ್ಲಿ ಒಬ್ಬಂಟಿಯಾಗಿದ್ದ ಮಗು ಬದುಕಿದ್ದೇ ಪವಾಡ!
ಮಡಿಕೇರಿ, ಡಿ. 01: ಕಾಫಿ ಕೊಯ್ಲು ಕೆಲಸಕ್ಕೆ ತೆರಳಿದ್ದ ಕಾರ್ಮಿಕ ದಂಪತಿಯ, ದಿನವಿಡೀ ಕಾಫಿ ತೋಟದಲ್ಲಿ ಆಟವಾಡುತ್ತಿದ್ದ 2 ವರ್ಷದ ಸುಕನ್ಯಾ ಹೆಸರಿನ ಮಗು ಸಂಜೆ ವೇಳೆ ಕಣ್ಮರೆಯಾಗಿದ್ದು, ಪೋಷಕರು ಹಾಗೂ ಗ್ರಾಮಸ್ಥರನ್ನು ತಲೆಕೆಡಿಸುವಂತಾಯಿತು.
ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ವಾಸವಿರುವ ಸುನಿಲ್–ನಾಗಿಣಿ ದಂಪತಿ ತಮ್ಮ ಇಬ್ಬರು ಮಕ್ಕಳನ್ನೂ ಜೊತೆಗೂಡಿಸಿಕೊಂಡು ತೋಟಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಹೊರಡುವಾಗ ಸುಕನ್ಯಾ ಕಾಣೆಯಾಗಿರುವುದು ಗಮನಕ್ಕೆ ಬಂದ ತಕ್ಷಣ ಅವರು ತೋಟದ ಇಂಚಿಂಚೂ ಶೋಧಿಸಿದರು. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಮಧ್ಯರಾತ್ರಿವರೆಗೂ ಜಾಲಾಡಿದರೂ ಸುಳಿವು ದೊರಕಲಿಲ್ಲ.
ಮರುದಿನ ಬೆಳಗ್ಗಿನಿಂದಲೇ ಶೋಧ ಕಾರ್ಯ ಮತ್ತಷ್ಟು ವೇಗ ಪಡೆದುಕೊಂಡಿತು. ಈ ವೇಳೆ ಅನಿಲ್ ಎನ್ನುವವರ ಶ್ವಾನವನ್ನು ಶೋಧ ಕಾರ್ಯಕ್ಕೆ ಬಳಸಲಾಯಿತು. ಅವರ ಶ್ವಾನ ‘ಓರಿಯೋ’ ವಾಸನೆ ಹತ್ತಿ ಕಾಫಿ ತೋಟದ ಎತ್ತರದ ಭಾಗದತ್ತ ಚುರುಕಾಗಿ ಓಡಿ ಬೊಗಳಲು ಆರಂಭಿಸಿತು. ಶ್ವಾನದ ನಡವಳಿಕೆಯನ್ನು ಗಮನಿಸಿ ಅಧಿಕಾರಿಗಳು ಆ ಭಾಗಕ್ಕೆ ತೆರಳಿದಾಗ, ಕಾಣೆಯಾಗಿದ್ದ ಸುಕನ್ಯಾ ಸುರಕ್ಷಿತವಾಗಿ ಕುಳಿತಿರುವುದು ಪತ್ತೆಯಾಯಿತು.
ದಟ್ಟ ಕತ್ತಲಿನಲ್ಲಿ ಒಂದು ದಿನವಿಡೀ ಒಂಟಿಯಾಗಿ ಕಳೆದಿದ್ದರೂ ಮಗು ಅಪಾಯದಿಂದ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಗಳನ್ನು ಸುರಕ್ಷಿತವಾಗಿ ಪತ್ತೆ ಮಾಡಲು ನೆರವಾದ ‘ಓರಿಯೋ’ ಶ್ವಾನಕ್ಕೆ ಗ್ರಾಮಸ್ಥರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯದಲ್ಲಿ ಸಹಕರಿಸಿದ ಸ್ಥಳೀಯರಿಗೆ ಕೃತಜ್ಞತೆ ಸಲ್ಲಿಸಿದ್ದು, ಮಗುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದೆ.
