GOAT Tour | ಕೋಲ್ಕತ್ತಾಕ್ಕೆ ಮೆಸ್ಸಿ ಭೇಟಿ: ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅವ್ಯವಸ್ಥೆ, ಕಳಪೆ ನಿರ್ವಹಣೆ ವಿರುದ್ಧ ಅಭಿಮಾನಿಗಳ ಆಕ್ರೋಶ: ಕಾರ್ಯಕ್ರಮದಲ್ಲಿ ಭಾಗವಹಿಸಲು 12,000 ರೂ. ಕೊಟ್ಟು ಟಿಕೆಟ್ ಖರೀದಿಸಿದ್ದ ಅಭಿಮಾನಿಗಳು!

GOAT Tour | ಕೋಲ್ಕತ್ತಾಕ್ಕೆ ಮೆಸ್ಸಿ ಭೇಟಿ: ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅವ್ಯವಸ್ಥೆ, ಕಳಪೆ ನಿರ್ವಹಣೆ ವಿರುದ್ಧ ಅಭಿಮಾನಿಗಳ ಆಕ್ರೋಶ:   ಕಾರ್ಯಕ್ರಮದಲ್ಲಿ ಭಾಗವಹಿಸಲು 12,000 ರೂ. ಕೊಟ್ಟು ಟಿಕೆಟ್ ಖರೀದಿಸಿದ್ದ ಅಭಿಮಾನಿಗಳು!

ಕೋಲ್ಕತ್ತಾ: ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಭೇಟಿ ಹಿನ್ನೆಲೆಯಲ್ಲಿ ಶನಿವಾರ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕಾರ್ಯಕ್ರಮದ ಕಳಪೆ ನಿರ್ವಹಣೆ ಮತ್ತು ಮೆಸ್ಸಿಯ ಅಕಾಲಿಕ ನಿರ್ಗಮನದಿಂದ ನಿರಾಶೆಗೊಂಡ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮೆಸ್ಸಿಯನ್ನು ನೋಡಲು ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ಆದರೆ, ಬಹಳ ಮುಂಚಿತವಾಗಿಯೇ ಮೆಸ್ಸಿ ಸ್ಥಳ ತೊರೆದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಅಸಮಾಧಾನ ಉಂಟಾಯಿತು. ಕೋಪಗೊಂಡ ಕೆಲವರು ನೀರಿನ ಬಾಟಲಿಗಳು ಹಾಗೂ ಕುರ್ಚಿಗಳನ್ನು ಎಸೆಯಲು ಮುಂದಾದರು. ಇದರಿಂದ ಕೆಲಕಾಲ ಅವ್ಯವಸ್ಥೆ ಉಂಟಾಯಿತು.

ನಮ್ಮನ್ನು ಕೇವಲ ಕರೆಸಿ ನಿರಾಶೆ ಮಾಡಲಾಗಿದೆ ಎಂದು ಅಭಿಮಾನಿಗಳು ಆರೋಪಿಸಿದರು. “12 ಸಾವಿರ ರೂಪಾಯಿ ಟಿಕೆಟ್ ಖರೀದಿಸಿದ್ದರೂ ಮೆಸ್ಸಿಯ ಮುಖವನ್ನೂ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಗಣ್ಯರು ಮತ್ತು ಆಹ್ವಾನಿತರಿಗೆ ಮಾತ್ರ ಅವಕಾಶ ನೀಡಲಾಯಿತು,” ಎಂದು ಒಬ್ಬ ಅಭಿಮಾನಿ ಹೇಳಿದರು.

ಮತ್ತೊಬ್ಬ ಅಭಿಮಾನಿ, “ಮೆಸ್ಸಿ ಕೇವಲ 10 ನಿಮಿಷ ಮಾತ್ರ ಕ್ರೀಡಾಂಗಣದಲ್ಲಿ ಇದ್ದರು. ಫುಟ್‌ಬಾಲ್ ಪ್ರದರ್ಶನವೂ ಇರಲಿಲ್ಲ. ನೀಡಿದ್ದ ಭರವಸೆಗಳು ಈಡೇರಲಿಲ್ಲ. ಹಣ, ಸಮಯ ಮತ್ತು ಭಾವನೆಗಳು ವ್ಯರ್ಥವಾದಂತಾಯಿತು,” ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಆಯೋಜನೆ ಮತ್ತು ನಿರ್ವಹಣೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಈ ಘಟನೆಯು ಭವಿಷ್ಯದಲ್ಲಿ ಇಂತಹ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಆಯೋಜನೆಗೆ ಪಾಠವಾಗಬೇಕೆಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಭದ್ರತಾ ದೃಷ್ಟಿಯಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.