ಗಂಡ ದುಬೈ ನಲ್ಲಿ, ಹೆಂಡತಿ ಊರಿನಲ್ಲಿ ಡ್ರಗ್ ಪೆಡ್ಲರ್!

ಗಂಡ ದುಬೈ ನಲ್ಲಿ, ಹೆಂಡತಿ ಊರಿನಲ್ಲಿ ಡ್ರಗ್ ಪೆಡ್ಲರ್!
Photo credit: TV09 (ಬಂಧಿತ ಆರೋಪಿಗಳು)

ತುಮಕೂರು, ಡಿ. 12: ಹೊಸ ವರ್ಷಾಚರಣೆಯ ಹೊಸ್ತಿಲಿನಲ್ಲಿ ಮಾದಕ ವಸ್ತುಗಳ ಚಟುವಟಿಕೆಗಳು ಗರಿಗೆದರಿರುವ ಹಿನ್ನೆಲೆಯಲ್ಲಿ ತುಮಕೂರು ಪೊಲೀಸರು ಹಠಾತ್‌ ದಾಳಿ ನಡೆಸಿ ಡ್ರಗ್ ಪೆಡ್ಲರ್‌ಗಳ ಹೆಡೆಮುರಿ ಕಟ್ಟಿದ್ದಾರೆ. ತುಮಕೂರಿನಲ್ಲಿ ಒಬ್ಬ ಮಹಿಳೆ ಸೇರಿ ಹಲವಾರು ಆರೋಪಿಗಳನ್ನು ಬಂಧಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಎಂಡಿಎಂಎ ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಲಾಕ್‌ ಆಗಿದ್ದಾರೆ.

ಬೆಂಗಳೂರು ಪಾರ್ಟಿ ಸೀಸನ್‌ ಗರಿಗೆದರುತ್ತಿರುವುದನ್ನು ಬಳಸಿಕೊಳ್ಳಲು ಕೆಲ ಡ್ರಗ್ ಡೀಲರ್‌ಗಳು ಪಟ್ಟಣ ಹೊರವಲಯಗಳತ್ತ ಮುಖ ಮಾಡಿರುವ ಮಾಹಿತಿ ಹಿನ್ನೆಲೆಯಲ್ಲಿ ತುಮಕೂರು ನಗರ ಪೊಲೀಸರು ವಿಶೇಷ ಪಡೆ ರಚಿಸಿ ಕಾರ್ಯಾಚರಣೆ ನಡೆಸಿದರು. ದಾಳಿಯಲ್ಲಿ ಆಯಿಷಾ ಎಂಬ ಮಹಿಳೆ ಸೇರಿದ್ದ ಗ್ಯಾಂಗ್‌ ಬಲೆಗೆ ಬಿದ್ದಿದೆ. ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಜಪ್ತಿ ಮಾಡಲಾಗಿದೆ.

ಬಂಧಿತ ಆಯಿಷಾ ಬೆಂಗಳೂರಿನ ನಿವಾಸಿ. ಬಿಕಾಂ ಪದವಿ ಪಡೆದಿರುವ ಈಕೆ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದು, ಪತಿ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದ ಸಂದರ್ಭದಲ್ಲಿ ಡ್ರಗ್ ಬಳಕೆಗೆ ಒಳಗಾದ ಆಕೆ, ಬಳಿಕ ಪೆಡ್ಲರ್ ಆಗಿ, ತನ್ನದೇ ಜಾಲದ ಮೂಲಕ ವಹಿವಾಟು ನಡೆಸಿಕೊಂಡು ಬಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ತುಮಕೂರಿನಲ್ಲಿ ಗ್ರಾಹಕರ ಜಾಲ ವಿಸ್ತರಿಸಲು ಬಂದಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.