ಕಾರುಗುಂದ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಬಳಿಯ ಕಾರುಗುಂದ ಅಂಗನವಾಡಿ ಕೇಂದ್ರದಲ್ಲಿ ಬಕ್ಕ,ಕಡಿಯತ್ತೂರು, ಕೊಟ್ಟೂರು,ಕಾರುಗುಂದ ಕಾಲೋನಿ ಅಂಗನವಾಡಿ ಕೇಂದ್ರಗಳ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರುಗುಂದ ಅಂಗನವಾಡಿ ಕೇಂದ್ರದಲ್ಲಿ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಲಲಿತ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ರಸ್ತಾವಿಕವಾಗಿ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ಹಾಕಲು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹಳ ಪ್ರಮುಖವಾಗಿದೆ. ಅದರಂತೆ ಇಲ್ಲಿನ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಕ್ಕಳ ಬೆಳವಣಿಗೆಗಳ ಮೇಲೆ ಹೆಚ್ಚಿನ ಮುತುವರ್ಜಿ ವಹಿಸುತ್ತಿರವುದು ಶ್ಲಾಘನೀಯ. ಸ್ಥಳೀಯ ಗ್ರಾಮದ ಸಮುದಾಯದವರ ಸಹಕಾರದಿಂದ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ ಅವರು ಮಾತನಾಡಿ ದಾನಿಗಳ ಸಹಕಾರದಿಂದ ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯತ್ತ ಸಾಗುತಿದೆ ಎಂದರು.
ಚೇರಂಬಾಣೆ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪಾರ್ವತಿ ಅವರು ಮಾತನಾಡಿ ಪ್ರತಿ 3 ತಿಂಗಳಿಗೊಮ್ಮೆ ಅರೋಗ್ಯ ಕೇಂದ್ರದಲ್ಲಿ 6 ವರ್ಷದೋಳಗಿನ ಮಕ್ಕಳ ಅರೋಗ್ಯ ತಪಾಸಣೆ ನಡೆಯಲಿದೆ. ಇದರ ಸದುಪಯೋಗವನ್ನು ಎಲ್ಲಾ ಪೋಷಕರು ಪಡೆದುಕೊಂಡು ಸಹಕರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಕಾರುಗುಂದ ವ್ಯಾಪ್ತಿಯ 5 ಅಂಗನವಾಡಿ ಕೇಂದ್ರಗಳ 25 ಮಕ್ಕಳಿಗೆ ಕಾರುಗುಂದ ಗ್ರಾಮದ ದಾನಿಗಳು ಹಾಗೂ ಆರ್ ಕೆ ಮೋಟರ್ಸ್ ನ ಮಾಲೀಕರಾದ ಕಾರ್ಯಪ್ಪ,ರೋಹಿಣಿ ಅವರು ಉದಾರವಾಗಿ ನೀಡಿದ ಸ್ವೆಟ್ಟರ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಕಾರುಗುಂದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರೋಹಿಣಿ, ಬಕ್ಕ ಅಂಗನವಾಡಿ ಕೇಂದ್ರದ ಶೈಲ,ಕಡಿಯತ್ತೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಸಹಾಯಕಿಯರು, ಪೋಷಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.
