ಮಾಲ್ದಾರೆ: ಕಾರಿನಲ್ಲಿ ಮಹಿಳೆಯ ಶವ ಪತ್ತೆ, ಘಟನೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ
ಮಡಿಕೇರಿ: ಪಿರಿಯಾಪಟ್ಟಣ-ಮಾಲ್ದಾರೆ ಅರಣ್ಯ ಪ್ರದೇಶದ ಚೆಕ್‌ಪೋಸ್ಟ್ ಬಳಿ ತಪಾಸಣೆ ವೇಳೆ ಕಾರೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರನ್ನು ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 2 ಗಂಟೆಯ ವೇಳೆ ಆಲ್ಟೋ 800 ಕಾರೊಂದು ಚೆಕ್‌ಪೋಸ್ಟ್ ಹತ್ತಿರ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಅರಣ್ಯ ಸಿಬ್ಬಂದಿ ಗಮನಿಸಿದ್ದಾರೆ. ಸಿಬ್ಬಂದಿಯನ್ನು ಕಂಡ ಕಾರಿನಲ್ಲಿದ್ದವರು ದಿಕ್ಕು ತಿರುಗಿಸಿ ತೆರಳಲು ಯತ್ನಿಸಿದ್ದು, ಇದರಿಂದ ಸಂಶಯಗೊಂಡ ಅರಣ್ಯ ಸಿಬ್ಬಂದಿ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ. ಆ ವೇಳೆ ಕಾರಿನೊಳಗೆ ಮಹಿಳೆಯ ಶವ ಪತ್ತೆಯಾಗಿದೆ.
ತಕ್ಷಣವೇ ಅವರು ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕಾರು ಸಮೇತ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರಿನಲ್ಲಿದ್ದ ಮೃತದೇಹವು ಹರಿಯಾಣ ಮೂಲದ ನಾನ್ಕಿದೇವಿ (44) ಅವರದ್ದು ಎಂದು ಗುರುತಿಸಲಾಗಿದೆ. ಅವರು ಪತಿ ರಾಕೇಶ್ ಕುಮಾರ್ ಹಾಗೂ ಸ್ನೇಹಿತರಾದ ವಿಕಾಸ್ (32), ಸತ್‌ವೀರ್ (32) ಜೊತೆ ಮೈಸೂರಿನ ಮೇಟಗಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನಾನ್ಕಿದೇವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ ಪತಿ ರಾಕೇಶ್ ಕುಮಾರ್ ಘಟನೆಯನ್ನು ಗಮನಿಸಿದ್ದು, ಆತಂಕಗೊಂಡ ಅವರು ಸ್ನೇಹಿತರ ಸಹಾಯದಿಂದ ಮೃತದೇಹವನ್ನು ಕಾರಿನಲ್ಲಿ ಕೊಡಗು ಕಡೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ನಾನ್ಕಿದೇವಿ ಮೂರ್ಛೆ ರೋಗದಿಂದ ಬಳಲುತ್ತಿದ್ದರು ಮತ್ತು ಹಲವು ಬಾರಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ಪತಿ ರಾಕೇಶ್ ಪೊಲೀಸರಿಗೆ ತಿಳಿಸಿದ್ದಾರೆ.ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
