ಹೆಣ್ಣಿನ ವಿಚಾರಕ್ಕೆ ಜಗಳ: ಸ್ನೇಹಿತನನ್ನೇ ಕೊಂದು ದೇಹ ತುಂಡು ಮಾಡಿ ಎಸೆದ ಯುವಕ

ಹೆಣ್ಣಿನ ವಿಚಾರಕ್ಕೆ ಜಗಳ: ಸ್ನೇಹಿತನನ್ನೇ ಕೊಂದು ದೇಹ ತುಂಡು ಮಾಡಿ ಎಸೆದ ಯುವಕ
Photo credit:NDTV

ಗುಜರಾತ್‍: ಆರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆಯಾದ ಹಿನ್ನೆಲೆಯಲ್ಲಿ ನಖತ್ರಾಣ ತಾಲೂಕಿನ ಮುರು ಗ್ರಾಮದಲ್ಲಿ ನಡೆದಿರುವ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ವಿಚಾರಕ್ಕೆ ಸಂಬಂಧಿಸಿದ ಜಗಳ ತಾರಕಕ್ಕೇರಿ, ಸ್ನೇಹಿತ ಕಿಶೋರ್ ತನ್ನ ಆಪ್ತ ಸ್ನೇಹಿತ ರಮೇಶ್ ಮಹೇಶ್ವರಿ (20) ಅವರನ್ನು ಕೊಲೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 2ರಂದು ರಮೇಶ್ ನಾಪತ್ತೆಯಾಗಿದ್ದು, ಕುಟುಂಬದವರ ದೂರು ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆಯ ದಿಕ್ಕು ಕಿಶೋರ್‌ವರೆಗೂ ತಲುಪುತ್ತಿದ್ದಂತೆಯೇ, ವಿಚಾರಣೆಯಲ್ಲಿ ಆತ ತಪ್ಪೊಪ್ಪಿಕೊಂಡಿರುವುದು ಪ್ರಕರಣಕ್ಕೆ ಮತ್ತಷ್ಟು ತೂಕ ನೀಡಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಕಿಶೋರ್ ತಮ್ಮಿಬ್ಬರಿಗೂ ಪರಿಚಿತಳಾದ ಮಹಿಳೆಯೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಬಂಧಕ್ಕೆ ಒತ್ತಡ ಹೇರಿದ್ದ. ಈ ಬಗ್ಗೆ ಮಹಿಳೆ ರಮೇಶ್‌ಗೆ ತಿಳಿಸಿದ್ದರಿಂದ ಇಬ್ಬರ ನಡುವೆ ವಾಗ್ವಾದ ತೀವ್ರಗೊಂಡಿತ್ತು.

ಕಿಶೋರ್ ತಪ್ಪೊಪ್ಪಿಕೊಂಡಂತೆ, ಆತ ರಮೇಶ್‌ ನನ್ನು ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಕೊಲೆ ಮಾಡಿ, ನಂತರ ಚಾಕುವಿನಿಂದ ತಲೆ, ಕೈ, ಕಾಲುಗಳನ್ನು ಕತ್ತರಿಸಿದ್ದಾನೆ. ಕತ್ತರಿಸಿದ ಭಾಗಗಳನ್ನು ಕೊಳವೆ ಬಾವಿಗೆ ಎಸೆದು, ದೇಹದ ಉಳಿದ ಭಾಗವನ್ನು ಹತ್ತಿರದ ಪ್ರದೇಶದಲ್ಲಿ ಹೂಳಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಅಪ್ರಾಪ್ತ ಬಾಲಕನೂ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಪೊಲೀಸರು ನೀಡಿದ್ದಾರೆ. 

ಕಿಶೋರ್ ನೀಡಿದ ಸುಳಿವಿನ ಆಧಾರದ ಮೇಲೆ ನಖತ್ರಾಣ ಪೊಲೀಸರು ಮತ್ತು ಜಿಲ್ಲಾಡಳಿತದ ತಂಡ ಸ್ಥಳಕ್ಕೆ ಭೇಟಿ ನೀಡಿ, ಹೂತು ಹಾಕಿದ್ದ ಶವವನ್ನು ಹೊರತೆಗೆದರು. ಕೊಳವೆ ಬಾವಿಯಿಂದ ಶರೀರದ ಕತ್ತರಿಸಿದ ಭಾಗಗಳನ್ನು ಮೇಲಕ್ಕೆತ್ತಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.