ಉದ್ಯಮಿ ಮೇಲೆ ಫೈರಿಂಗ್: ಕೂದಲೆಳೆಯ ಅಂತರದಲ್ಲಿ ಪಾರು
ಬೆಂಗಳೂರು, ಡಿ. 12: ನಗರದ ಬಸವನಗುಡಿ ಪ್ರದೇಶದಲ್ಲಿರುವ ಕೃಷ್ಣರಾವ್ ಪಾರ್ಕ್ ಬಳಿ ಗುರುವಾರ ರಾತ್ರಿ ನಡೆದ ಫೈರಿಂಗ್ ಘಟನೆಯಲ್ಲಿ ಉದ್ಯಮಿ ರಾಜಗೋಪಾಲ್ ಸಣ್ಣ ಗಾಯಗಳೊಂದಿಗೆ ಪಾರಾಗಿದ್ದಾರೆ. ಏರ್ ಗನ್‌ನಿಂದ ದಾಳಿ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಘಟನೆಯ ನಂತರ ಬಸವನಗುಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಿಸಿಬಿ ಸಹ ತನಿಖೆಯಲ್ಲಿ ತೊಡಗಿಕೊಂಡಿದೆ.
ಗುರುವಾರ ಸಂಜೆ ರಾಜಗೋಪಾಲ್ ಸ್ನೇಹಿತರ ಭೇಟಿಗಾಗಿ ಕೃಷ್ಣರಾವ್ ಪಾರ್ಕ್‌ಗೆ ತೆರಳಿದ್ದರು. ಪಾರ್ಕ್ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗುಂಡಿನ ನಡೆದಿದೆ ಎನ್ನಲಾಗಿದೆ. ಕತ್ತಿನ ಬಳಿ ಪೆಲೆಟ್ ಗಾಯ ತಗುಲಿರುವುದು ಕಂಡು ಬಂದಿದೆ. ನಂತರ ಅವರನ್ನು ಜಯನಗರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪ್ರಾಥಮಿಕ ತನಿಖೆ ಪ್ರಕಾರ ಪಾರ್ಕ್‌ಗೆ ಅಂಟಿಕೊಂಡಿರುವ ರಸ್ತೆಯ ಬದಿಯಿಂದಲೇ ಫೈರಿಂಗ್ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಬಗ್ಗೆ ರಾಜಗೋಪಾಲ್ ಅವರು ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಇತ್ತೀಚೆಗೆ ಅವರಿಗೆ ಬೆದರಿಕೆ ಕರೆಗಳೂ ಬಂದಿಲ್ಲ ಎಂದು ತಿಳಿದು ಬಂದಿದೆ.
ಬಸವನಗುಡಿ ಪೊಲೀಸರು ಹಾಗೂ ಸಿಸಿಬಿ ತಂಡ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೆ, ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಜಗೋಪಾಲ್‌ರನ್ನು ಭೇಟಿ ಮಾಡಿ ವಿವರವಾದ ಹೇಳಿಕೆ ದಾಖಲಿಸಲಾಗಿದೆ.
ಉದ್ಯಮಿ ರಾಜಗೋಪಾಲ್ ಕೋಟ್ಯಂತರ ಮೌಲ್ಯದ ವಾಣಿಜ್ಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದು, ನರ್ತಕಿ ಬಾರ್ ಸೇರಿದಂತೆ ಮೆಜೆಸ್ಟಿಕ್ ಪ್ರದೇಶದ ಹಲವಾರು ವಾಣಿಜ್ಯ ಅಂಗಡಿಗಳ ಬಾಡಿಗೆ ಆದಾಯ ಇವರಿಗೆ ಸೇರಿದೆ. ಈ ಹಿನ್ನೆಲೆ ದಾಳಿಯ ಹಿಂದಿನ ಉದ್ದೇಶ ವ್ಯವಹಾರ ಸಂಬಂಧಿತವಾಗಿರಬಹುದೇ ಎಂಬ ವಿಚಾರದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಫೈರಿಂಗ್‌ನಲ್ಲಿ ಬಳಕೆಯಾದ ಆಯುಧ ನಿಜವಾಗಿಯೂ ಏರ್ ಗನ್ ಆಗಿದೆಯೇ ಅಥವಾ ಬೇರೆ ಪ್ರಕಾರದ ಆಯುಧವೇ ಎಂಬುದನ್ನು ನಿಗದಿಪಡಿಸಲು ತಾಂತ್ರಿಕ ವಿಶ್ಲೇಷಣೆ ನಡೆಯುತ್ತಿದೆ. ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲನೆ ಪ್ರಕ್ರಿಯೆ ಮುಂದುವರಿಸಲಾಗಿದೆ.
