ಪ್ರಾಡಾದ ಒಂದು ಸೇಫ್ಟಿ ಪಿನ್ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದ್ ಗ್ಯಾರಂಟಿ
ಹೊಸದಿಲ್ಲಿ: ದಿನನಿತ್ಯದ ಉಪಯೋಗದ ವಸ್ತುಗಳನ್ನೇ ಐಷಾರಾಮಿ ಶೈಲಿಯಲ್ಲಿ ಮಾರುಕಟ್ಟೆಗೆ ತಂದು ದುಬಾರಿ ಬೆಲೆ ನಿಗದಿಪಡಿಸುವ ಕ್ರೇಜ್‌ಗೆ ಫ್ಯಾಷನ್ ಬ್ರ್ಯಾಂಡ್‌ಗಳು ಮಾರು ಹೋಗಿವೆ. ಪೇಪರ್ ಬ್ಯಾಗ್, ಚಪ್ಪಲಿ, ಊಟದ ಡಬ್ಬಿಯ ಬಳಿಕ ಇದೀಗ ಸೇಫ್ಟಿಪಿನ್‌ಗೂ “ಲಕ್ಷುರಿ ಟ್ಯಾಗ್” ಅಂಟಿದೆ.
ಇಟಲಿಯ ಖ್ಯಾತ ಫ್ಯಾಷನ್ ಹೌಸ್ ಪ್ರಾಡಾ ಬಿಡುಗಡೆ ಮಾಡಿರುವ ‘ಕ್ರೋಷೆ ಸೇಫ್ಟಿ ಪಿನ್ ಬ್ರೂಚ್’ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಬಣ್ಣ ಬಣ್ಣದ ಕ್ರೋಷೆ ನೂಲಿನಿಂದ ಸುತ್ತಲಾದ ಚಿನ್ನದ ಬಣ್ಣದ ಸಾಮಾನ್ಯ ಸೇಫ್ಟಿಪಿನ್ ಮೇಲೆ ಪ್ರಾಡಾದ ತ್ರಿಕೋನ ಲೋಗೊ ಅಂಟಿಸಿರುವ ಈ ಉತ್ಪನ್ನದ ಬೆಲೆ 775 ಅಮೆರಿಕನ್ ಡಾಲರ್ — ಅಂದರೆ ಸುಮಾರು ₹68,758!
ಭಾರತದಲ್ಲಿ 20–30 ಸೇಫ್ಟಿಪಿನ್‌ಗಳ ಪ್ಯಾಕ್ ಕೇವಲ ₹20ರಿಂದ ₹50ಕ್ಕೂ ಸಿಗುತ್ತದೆ. ಪ್ರತಿಯೊಬ್ಬ ಮಹಿಳೆಯ ಬ್ಯಾಗಿನಲ್ಲಿ ಅನಿವಾರ್ಯವಾಗಿ ಕಾಣುವ ಈ ಸರಳ ವಸ್ತುವಿಗೆ ಪ್ರಾಡಾ ಹಾಕಿರುವ “ಲಕ್ಷುರಿ ಬೆಲೆ” ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
‘ಬ್ಲ್ಯಾಕ್‌ಸ್ವಾನ್‌ಸೇಝಿ’ ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಸೇಫ್ಟಿಪಿನ್ ಕುರಿತು ವೀಡಿಯೊ ಹಂಚಿಕೆಯಾದ ಬಳಿಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೋಲ್‌ಗಳ ಮಳೆ ಸುರಿಯುತ್ತಿದೆ.
“775 ಡಾಲರ್ ಸೇಫ್ಟಿಪಿನ್? ಶ್ರೀಮಂತರೇ, ನಿಮ್ಮ ಹಣದೊಂದಿಗೆ ಏನು ಮಾಡುತ್ತಿದ್ದೀರಿ?” ಎಂದು ಒಬ್ಬ ಮಹಿಳೆ ಪ್ರಶ್ನಿಸಿದ್ದಾರೆ.
“ನನ್ನ ಅಜ್ಜಿ ಇದಕ್ಕಿಂತ ಚೆಂದದ ಪಿನ್ ಮಾಡುತ್ತಿದ್ದರು” ಎಂದು ಒಬ್ಬರು ಬರೆದರೆ,
“ಚಿನ್ನ ಅಥವಾ ಬೆಳ್ಳಿಯಿಂದ ಮಾಡಿಸಿದರೂ ನಾನು ಕಡಿಮೆ ಬೆಲೆಗೆ ಕೊಡುತ್ತೇನೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಐಷಾರಾಮಿ ಬ್ರ್ಯಾಂಡ್‌ಗಳಿಗೆ ಇಂತಹ ವಿವಾದಗಳು ಹೊಸದಲ್ಲ. ಮಿಲಾನ್ ಫ್ಯಾಷನ್ ವೀಕ್ ನಲ್ಲಿ ಭಾರತದ ಸಂಪ್ರದಾಯಿಕ ಕೊಲ್ಲಾಪುರಿ ಚಪ್ಪಲಿಯಂತೆಯೇ ಕಾಣುತ್ತಿದ್ದ ಪಾದರಕ್ಷೆ ಪ್ರದರ್ಶಿಸಿದ್ದಕ್ಕಾಗಿ ಪ್ರಾಡಾ ಹಿಂದೆ ಟೀಕೆಗೆ ಗುರಿಯಾಗಿತ್ತು. ಆ ಘಟನೆಯ ಬಳಿಕ ಭಾರತದಲ್ಲಿ ನಿಜವಾದ ಕೊಲ್ಲಾಪುರಿ ಚಪ್ಪಲಿಗಳ ಮಾರಾಟ ಏರಿಕೆ ಕಂಡಿತ್ತು.
