ಕಾಂಗ್ರೆಸ್ ಗ್ಯಾರಂಟಿ ಸರ್ಕಾರಕ್ಕೆ ಎರಡು ವರ್ಷ!! "ಗ್ಯಾರಂಟಿಯೊಂದಿಗೆ ಅಭಿವೃದ್ಧಿಗೂ ಬೇಕಿದೆ ಆದ್ಯತೆ!

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಕಾಂಗ್ರೆಸ್ ಸರ್ಕಾರ ಇದಕ್ಕಿಂತ ವಿಶೇಷವಾಗಿ ಗ್ಯಾರಂಟಿ ಸರ್ಕಾರ ಎಂದು ಕರೆಯೋಣ.ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿ ಇಂದಿಗೆ (ಮೇ20) ಎರಡು ವರ್ಷ ಪೂರ್ಣಗೊಂಡಿದೆ.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಗ್ಯಾರಂಟಿ ಸರ್ಕಾರದ ಎರಡನೇ ವರ್ಷದ ಸಂಭ್ರಮದಲ್ಲಿ "ನಾಡಿನ ಏಳು ಕೋಟಿ ಜನರ ಬೆಳಕು ಗ್ಯಾರಂಟಿ ಬದುಕು" ಎಂಬ ಉದ್ಘೋಷಣಯೊಂದಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಸಮಾವೇಶವನ್ನು ಹಮ್ಮಿಕೊಂಡಿದೆ.ಸರ್ಕಾರ ಸಾಧನೆಯ ಸಮರ್ಪಣೆ ಸಮಾವೇಶ ಮಾಡುವುದಕ್ಕಿಂತ ಮುನ್ನ ತನ್ನ ಎರಡು ವರ್ಷಗಳ ಅಭಿವೃದ್ಧಿ ಹಾಗೂ ಆಡಳಿತದ ಬಗ್ಗೆ ಆತ್ಮಾವಲೋಕನ ಮಾಡಬೇಕಿದೆ.ಭ್ರಷ್ಟಾಚಾರ.... ಭ್ರಷ್ಟಾಚಾರ... ಬಿಜೆಪಿ ಭ್ರಷ್ಟಾಚಾರ ಸರ್ಕಾರ ನಡೆಸುತ್ತಿದೆ ಎಂದೇಳಿ, ಬೀದಿಗಿಳಿದು ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಸರ್ಕಾರವೇನೂ ಇದೀಗ ಭ್ರಷ್ಟಾಚಾರದಿಂದ ಹೊರತಾಗಿಲ್ಲ.ಎರಡು ವರ್ಷದ ಆಡಳಿತದಲ್ಲೇ ಬಹುಕೋಟಿ ವಾಲ್ಮೀಕಿ ಹಗರಣದಲ್ಲಿ ಸಚಿವ ಬಿ.ನಾಗೇಂದ್ರ ಜೈಲು ಸೇರಿದ್ದರು.ಸಚಿವ ಸ್ಥಾನಕ್ಕೂ ಕೂಡ ರಾಜೀನಾಮೆ ನೀಡಿದ್ದಾರೆ.ಅದಲ್ಲದೇ ವಿಶೇಷವಾಗಿ ಇಡೀ ದೇಶದ ಗಮನ ಸೆಳೆದಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪರ್ಯಾಯ ನಿವೇಶನ ಹಂಚಿಕೆ ಅಕ್ರಮ ಈಗಲೂ ಕೂಡ ಸಿದ್ದರಾಮಯ್ಯ ಅವರ ಸುತ್ತಲೂ ಸುತ್ತುತ್ತಲೇ ಇವೆ.ಸ್ವತಃ ಸಚಿವರೇ ಹನಿಟ್ರ್ಯಾಪ್ ಬಗ್ಗೆ ಪ್ರಸ್ತಾಪಿಸಿರುವುದು ಸರ್ಕಾರಕ್ಕೆ ಮುಜುಗರ ತಂದಿದೆ.ಬಿಜೆಪಿ ಸರ್ಕಾರದ 40% ಕಮೀಷನ್ ಆರೋಪ, ಕೋವಿಡ್ ಹಗರಣ,ಕಾಮಗಾರಿ ಗುತ್ತಿಗೆ,ಪಿಎಸ್.ಐ ಅಕ್ರಮ, ಕೋಮುವಾದ ಈಗೆ ನಾನಾ ವಿಷಯವನ್ನು ಮುಂದಿಟ್ಟು ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿ ಎರಡು ವರ್ಷ ಪೂರ್ಣಗೊಳ್ಳುವಾಗ, ಕಾಂಗ್ರೆಸ್ ಸರ್ಕಾರ ಕೂಡ ಭ್ರಷ್ಟಾಚಾರದಿಂದಮುಕ್ತರೇನೂ ಅಲ್ಲ.ಗ್ಯಾರಂಟಿ ಕಾಂಗ್ರೆಸ್ ಸರ್ಕಾರದ ನೆಟ್ಟು-ಬೋಲ್ಟೂ...ಲೂಸ್ ಆಗೈತೆ.
ಗ್ಯಾರಂಟಿ ಹೊಡೆತ ಅಭಿವೃದ್ಧಿ ಕುಂಠಿತ!..
ಗ್ಯಾರಂಟಿ......ಗ್ಯಾರಂಟಿ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮನ್ನಲೆಗೆ ಬಂದ ಹೊಸ ಚುನಾವಣಾ ಗಿಮಿಕ್....ರಾಜಕೀಯ ಪಕ್ಷಗಳು ಚುನಾವಣಾ ಪೂರ್ವದಲ್ಲಿ ಭರಪೂರ ಆಶ್ವಾಸನೆಗಳು,ಪ್ರಣಾಳಿಕೆಯಲ್ಲಿ ಅಭಿವೃದ್ಧಿಯ ದೊಡ್ಡ ಪಟ್ಟಿಯನ್ನೇ ಜನರ ಮುಂದಿಡುತ್ತಾರೆ.ಆದರೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಗಿಂದೀಚಿಗೆ ದೇಶದಲ್ಲೆಡೆ ಗ್ಯಾರಂಟಿ ಸದ್ದು ಮಾಡುತ್ತಿದೆ.ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಗರು, ಉತ್ತರ ಭಾರತದ ರಾಜ್ಯಗಳಲ್ಲಿ ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಚುನಾವಣೆಯಲ್ಲಿ ಗೆಲುವಿನ ದಡ ಸೇರಿದ್ದು ಎಂಬುದು ಇಲ್ಲಿ ಸ್ಮರಿಸಬಹುದು.ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಆರ್ಥಿಕವಾಗಿ ಗ್ಯಾರಂಟಿ ಸ್ಕೀಮ್ ಗಳು ದೊಡ್ಡ ಹೊಡೆತ ಕೊಟ್ಟಿದೆ.ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ 52 ಸಾವಿರ ಕೋಟಿ ರೂ ವಿನಿಯೋಗಿಸಬೇಕಾಗಿದೆ.ರಾಜ್ಯ ಸರ್ಕಾರದ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯುವ ಒಂದು ಕೋಟಿಗೂ ಅಧಿಕ ಜನರು ಇದ್ದರೂ ಕೂಡ,ಗ್ಯಾರಂಟಿ ಯೋಜನೆಗಳು ವರ್ಷ ಕಳೆದಂತೆ ಸರ್ಕಾರಕ್ಕೆ ಆರ್ಥಿಕವಾಗಿ ದೊಡ್ಡ ಪೆಟ್ಟು ಕೊಟ್ಟಿದೆ.ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳು ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದೆ.ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬಹಿರಂಗವಾಗಿ ಕಾಂಗ್ರೆಸ್ ಶಾಸಕರು, ಸಚಿವರೇ ಒಪ್ಪಿಕೊಂಡಿದ್ದಾರೆ.ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳನ್ನು ಹೆಚ್ಚಾಗಿ ಟೀಕಿಸಲು ಕೂಡ ಬಿಜೆಪಿಗರಿಗೆ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಮತ್ತೊಂದೆಡೆ ಸೃಷ್ಟಿಯಾಗಿದೆ.ತಿಂಗಳು ಕಳೆದಂತೆ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳ ಕೈ ಸೇರಲು ತಡವಾಗುತ್ತಿದೆ.ಗ್ಯಾರಂಟಿ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಕಳೆದ ಮೂರು ತಿಂಗಳ ಹಣ ಇಂದಿಗೂ ಕೂಡ ಫಲಾನುಭವಿಗಳ ಕೈ ಸೇರಿಲ್ಲ.ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡಿದೆ.ಗ್ಯಾರಂಟಿ ಯೋಜನೆಗಳನ್ನು ಏಕಾಏಕಿ ನಿಲ್ಲಿಸಲು ಕೂಡ ಸಾಧ್ಯವಿಲ್ಲ.ಒಂದು ವೇಳೆ ಆಗೇನಾದರೂ ಮಾಡಿದಲ್ಲಿ 2028ರ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಕಬ್ಬಿಣದ ಕಡಲೆಯಾಗಲಿದೆ.ಗ್ಯಾರಂಟಿ ಯೋಜನೆಗಳಿಗೆ ಪರ್ಯಾಯ ಆದಾಯ ಹುಡುಕಬೇಕಾದ ಗ್ಯಾರಂಟಿ ಸರ್ಕಾರ ಬೆಲೆ ಏರಿಕೆ ಮಾಡಿ ಜನ ವಿರೋಧಿ ಕ್ರಮ ಅನುಸರಿದೆ.ಬಸ್ಸ್ ಪ್ರಯಾಣ ದರ,ನೀರು,ವಿವಿಧ ತೆರಿಗೆ,ಮದ್ಯದ ದರ,ವಿದ್ಯುತ್ ಬಿಲ್ ದರಗಳನ್ನು ಏರಿಕೆ ಮಾಡಿ ಜನರ ಗಾಯದ ಮೇಲೆ ಬರೆ ಎಳೆದಿದೆ.ಆರ್ಥಿಕ ಸಂಪನ್ಮೂಲಗಳಿಗೆ ಪರ್ಯಾಯ ಮಾರ್ಗ ಹುಡುಕಬೇಕಾದ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಮೇಲೆ ಸವಾರಿ ಮಾಡುತ್ತಿರುವುದು ಗ್ಯಾರಂಟಿ ಸರ್ಕಾರ ಜನ ವಿರೋಧಿ ಗ್ಯಾರಂಟಿಯಾಗಿದೆ.ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕುಂಟುತ್ತಾ ಸಾಗಿದೆ.ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಸರ್ಕಾರ ತನ್ನ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ,ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಬೇಕಿದೆ.
ಜವಬ್ದಾರಿ ಮರೆತ ಬಿಜೆಪಿ....
ಆಡಳಿತ ರೂಢ ಪಕ್ಷವನ್ನು ಸದಾ ಎಚ್ಚರಿಸಲು ಬಲಿಷ್ಠ ವಿರೋಧ ಪಕ್ಷ ಇದ್ದಲ್ಲಿ ಮಾತ್ರ ಅಭಿವೃದ್ಧಿ ಮತ್ತು ಆಡಳಿತವು ಸರಿಯಾದ ದಿಸೆಯಲ್ಲಿ ಸಾಗಲು ಸಾಧ್ಯ.ಆದರೆ ರಾಜ್ಯ ಬಿಜೆಪಿಯ ಕಥೆಯೇ ಒಂಥರ ವಿಚಿತ್ರ.ಸದನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುವಾಗ ಬಿಜೆಪಿ ಶಾಸಕರಲ್ಲೇ ಒಗ್ಗಟ್ಟಿನ ಕೊರತೆ ಪದೇ ಪದೇ ಸಾಬೀತಾಗಿದೆ.ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಮ್ಮ ಜವಾಬ್ದಾರಿಯುತ ಸ್ಥಾನವನ್ನು ಸಮರ್ಥವಾಗಿ ಕೊಂಡೊಯ್ಯಲು ವಿಫಲರಾಗಿದ್ದಾರೆ.ಸದನದಲ್ಲಿ ಗಟ್ಟಿ ಧ್ವನಿಯಲ್ಲಿ ಸಾಕ್ಷ್ಯಧಾರವನ್ನು ಇಟ್ಟು ಮಾತನಾಡಬೇಕಾದ ವಿರೋಧ ಪಕ್ಷದ ನಾಯಕನ ಮಾತಿಗೆ ಬಿಜೆಪಿ ಶಾಸಕರು ಧ್ವನಿಗೂಡಿಸದೆ,ಪರಸ್ಪರ ಪಕ್ಷದೊಳಗೆ ವಾಗ್ವಾದ ನಡೆಸಿದ ಘಟನೆಗಳು ಕೂಡ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಮ್ಮ ತಂದೆ ಬಿ.ಎಸ್ ಯಡಿಯೂರಪ್ಪ ಅವರ ಕೃಪಕಟಾಕ್ಷದಿಂದ ಅಧ್ಯಕ್ಷ ಸ್ಥಾನಕ್ಕೇರಿದವರು.ಸರ್ಕಾರದ ವೈಫಲ್ಯಗಳ ಬಗ್ಗೆ ಹೋರಾಟ ಮಾಡಬೇಕಾದ ಬಿಜೆಪಿ ರಾಜ್ಯಾಧ್ಯಕ್ಷನಿಗೆ ತಮ್ಮ ಅಧ್ಯಕ್ಷ ಸ್ಥಾನದ ಕುರ್ಚಿಯನ್ನು ಭದ್ರಗೊಳಿಸುವುದರಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ.ಮತ್ತೊಂದೆಡೆ ಬಿಜೆಪಿಯಲ್ಲಿ ಬಿ.ಎಸ್.ವೈ ಹಾಗೂ ತಮ್ಮ ವಿರುದ್ಧ ಮಾತನಾಡುವವರನ್ನ ಒಂದಂದಾಗಿ ಸೈಡ್ ಲೈನ್ ಮಾಡುತ್ತಾ ತಂದೆ-ಮಗ ರಾಜ್ಯ ಬಿಜೆಪಿಯನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ.ಆದರೂ ಕೂಡ ಬಿಜೆಪಿ ಪಕ್ಷದಲ್ಲಿ ಬಣಗಳ ಸಂಖ್ಯೆಗೆ ಕಡಿಮೆಯೇನೂ ಇಲ್ಲ.2019ರಿಂದ 2023ರವರೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ನವರು ಯಶಸ್ವಿಯಾಗಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ನಿಭಾಯಿಸಿದ್ದರು.ವಿರೋಧ ಪಕ್ಷದ ನಾಯಕ ಸ್ಥಾನವನ್ನು ಹೇಗೆ ನಿಭಾಯಿಸಬೇಕೆಂದು ಆರ್.ಅಶೋಕ್ ಸಿದ್ದರಾಮಯ್ಯ ಅವರಿಂದ ನೋಡಿ ಕಲಿಯಬೇಕು ಎಂದರೆ ತಪ್ಪಾಗಲಾರದು.ಬಣಗಳ ಗುದ್ದಾಟ ಬಿಟ್ಟು ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಬಿಜೆಪಿ ಹೋರಾಟ ಮಾಡಬೇಕಿದೆ.ಕರ್ನಾಟಕದಲ್ಲಿ ಎಲ್ಲಾ ಜಾತಿ,ಧರ್ಮದವರನ್ನ ಒಂದುಗೂಡಿಸಿದಲ್ಲಿ ಮಾತ್ರ ಅಧಿಕಾರದ ಚುಕ್ಕಾಣಿ ಸಾಧ್ಯ ಎಂಬ,ಕರ್ನಾಟದ ಸಾಮಾಜಿಕ ಸಮೀಕರಣದ ರಾಜಕೀಯವನ್ನು ಕೂಡ ಬಿಜೆಪಿ ಅರಿಯಬೇಕಾಗಿದೆ.
ಬದಲಾಗುತ್ತಾ ಮುಖ್ಯಮಂತ್ರಿ!!!!
ಕಾಂಗ್ರೆಸ್ ಸರ್ಕಾರ 2023ರ ಮೇ20ರಂದು ಸರ್ಕಾರ ರಚಿಸಿದ ದಿನಗಳಿಂದಲೇ ಅಧಿಕಾರ ಹಸ್ತಾಂತರದ ಗುಮ್ಮ ಕಾಂಗ್ರೆಸ್ ನೊಳಗೆ ಕಾಡುತ್ತಿದೆ.ಎರಡುವರೆ ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬದಲಾಗುತ್ತಾರೆ ಎಂಬ ಗುಮಾನಿ ಕಾಡುತ್ತಿದ್ದರು ಕೂಡ ಸಿಎಂ ಕುರ್ಚಿ ಬಿಟ್ಟುಕೊಡಲು ಸಿದ್ದರಾಮಯ್ಯನವರು ಸಿದ್ಧರಿಲ್ಲ.ರಾತ್ರಿ ಬೆಳಗಾಗುವುದರೊತ್ತಿಗೆ ಸಿದ್ದರಾಮಯ್ಯ ನವರನ್ನು ಸಿ.ಎಂ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ ಎಂಬುದು ಕಾಂಗ್ರೆಸ್ ಹೈಕಮಾಂಡ್ ಚನ್ನಾಗಿ ಬಲ್ಲರು.ಇಡೀ ದೇಶದಲ್ಲಿ ಕಾಂಗ್ರೆಸ್ ಗೆ ದೊಡ್ಡ ಶಕ್ತಿ ಕರ್ನಾಟಕ.ಸಿದ್ದರಾಮಯ್ಯ ನವರು ಏಕಾಏಕಿ ಬದಲಾಯಿಸಿ ಕೈ ಸುಟ್ಟುಕೊಳ್ಳಲು ಹೈಕಮಾಂಡ್ ಸದ್ಯಕ್ಕಂತೂ ಸಿದ್ಧರಿಲ್ಲ.ಪೂರ್ಣಾವಧಿ ಸಿ.ಎಂ ಸಿದ್ದರಾಮಯ್ಯ ನವರೇ ಎಂದು ಪದೇ ಪದೇ ಸಿಎಂ ಆಪ್ತ ಸಚಿವರುಗಳು ಮಾತು.ಆದರೆ ಶತಾಗತಾಯವಾಗಿ ಸಿ.ಎಂ ಕುರ್ಚಿ ಪಡೆಯಲು ಡಿಸಿಎಂ ಡಿಕೆ ಶಿವಕುಮಾರ್ ಪ್ರಯತ್ನಿಸುತ್ತಿದ್ದರು ಕೂಡ ಶಾಸಕರ ಬೆಂಬಲದ ಕೊರತೆ ಡಿಕೆಗೆ ಕಾಂಗ್ರೆಸ್ ಪಕ್ಷದಲ್ಲಿ ಕಾಡುತ್ತಿದೆ.ಅಧಿಕಾರದ ಹಸ್ತಾಂತರದ ಬಗ್ಗೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಲ್ಕು ಗೋಡೆಯೊಳಗೆ ಏನ್ ತೀರ್ಮಾನಿಸಿದ್ದಾರೆ ಎಂಬುದೇ ಗೌಪ್ಯದ ಮಾಹಿತಿ.ಈ ಅಕ್ಟೋಬರ್ ನಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂಬ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ಇದ್ದರೂ ಕೂಡ ಡಿಕೆ ಸಿ.ಎಂ ಸ್ಥಾನ ತಪ್ಪಿಸಲು ಸಿದ್ದರಾಮಯ್ಯ ಗ್ಯಾಂಗ್ ಸದಾ ಅಲರ್ಟ್ ಆಗಿದ್ದಾರೆ.ಅಧಿಕಾರ ಹಸ್ತಾಂತರ ಕೂಡ ರಾಜ್ಯದ ಅಭಿವೃದ್ಧಿಗೆ ದೊಡ್ಡ ಪೆಟ್ಟು ಕೊಡುವುದಲ್ಲಿ ಅನುಮಾನವೇ ಇಲ್ಲ.2018ರಿಂದ 2023ರವರೆಗೆ ರಾಜ್ಯವು ಮೂವರು ಮುಖ್ಯಮಂತ್ರಿಗಳನ್ನ ಕಂಡಿದೆ.ಬಿ.ಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಬದಲಾಯಿಸಿದ ನಂತರ ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಬಳಿಕ ಇಡೀ ರಾಜ್ಯದ ಆಡಳಿತ ವ್ಯವಸ್ಥೆಯ ಹಳಿ ತಪ್ಪಿತ್ತು.ಒಂದು ಅವಧಿಯಲ್ಲಿ ಮೂರ್ನಾಲ್ಕು ಮುಖ್ಯಮಂತ್ರಿಗಳು ಅಧಿಕಾರ ಚಲಾಯಿಸುವುದು ಕಾರ್ಯಾಂಗದ ಮೇಲೆ ದೊಡ್ಡ ಹೊಡೆತ ಬೀಳುತ್ತದೆ.ಕಾಂಗ್ರೆಸ್ ಸರ್ಕಾರದಲ್ಲಿ ಐದಾರು ಮಂದಿ ಸಚಿವರು ಮಾತ್ರ ಆ್ಯಕ್ಟೀವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಉಳಿದ ಬಹುತೇಕ ಸಚಿವರ ಕಾರ್ಯವೈಖರಿ ಅಷ್ಟಕಷ್ಟೇ.ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದಿನ ಬಿಜೆಪಿ ಸರ್ಕಾರ ನಿರ್ಲಕ್ಷ್ಯಿಸಿದಾಗೆ, ಕೊಡಗು ಜಿಲ್ಲೆಯನ್ನು ಕಡೆಗಣಿಸದೆ,ಕೊಡಗು ಜಿಲ್ಲೆಯ ಬಗ್ಗೆ ವಿಶೇಷ ಕಾಳಹಿ ವಹಿಸಿ ಅನುದಾನ ನೀಡುತ್ತಿರುವುದು ಶ್ಲಾಘನೀಯ ವಿಚಾರ, ಇದಕ್ಕೆ ಕೊಡಗಿನ ಶಾಸಕದ್ವಯರ ಒತ್ತಡವೂ ಇದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೆಲಸ ಮಾಡದ ಸಚಿವರಿಗೆ ಕೊಕ್ ಕೊಟ್ಟು,ಉತ್ಸಾಹಿ ಯುವ ಶಾಸಕರಿಗೆ ಮಂತ್ರಿ ಸ್ಥಾನ ನೀಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕಾಗಿದೆ.ರಾಜ್ಯದಲ್ಲಿ ಕೋಮುಗಲಭೆ,ಗುಂಪು ಹತ್ಯೆ,ಹಾಡಹಗಲೇ ಅಪ್ರಾಪ್ತ ಹೆಣ್ಣು ಮಕ್ಕಳ ಅತ್ಯಾಚಾರ,ಕೋಮುವಾದ,ಈಗೇ ನಾನಾ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.ಎಲ್ಲದಕ್ಕೂ ಸರ್ಕಾರ ಬಿಗಿಯಾದ ಕ್ರಮಕೈಗೊಳ್ಳಬೇಕು.ಇಲ್ಲದಿದ್ದರೆ ಮತದಾರರೇ ರಾಜ್ಯ ಕಾಂಗ್ರೆಸ್ ಸರ್ಕಾರದ ನೆಟ್ಟು-ಬೋಲ್ಟೂ ಬಿಗಿ ಮಾಡಿ ಬಿಡ್ತಾರೆ.....
What's Your Reaction?






