ಅರ್ಧದಲ್ಲೇ ಕಾಲೇಜು ಬಿಟ್ಟ ಯುವಕ;ತಾಯಿಯೊಂದಿಗೆ ಸೇರಿ ಮಾಡಿದ್ದ ವಂಚನೆಯೇನು ಗೊತ್ತಾ!
ಬೆಂಗಳೂರು, ಜ.15: ನಗರದಲ್ಲಿ ಸೈಬರ್ ಅಪರಾಧಗಳ ಜಾಲ ವಿಸ್ತಾರಗೊಳ್ಳುತ್ತಿರುವ ನಡುವೆ, ಕಾಲೇಜು ಶಿಕ್ಷಣವನ್ನು ಅರ್ಧದಲ್ಲೇ ಕೈಬಿಟ್ಟು ತಾಯಿ ಜತೆ ಸೇರಿ ಆನ್‌ಲೈನ್ ವಂಚನೆ ನಡೆಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಾದ ಮೊಹಮ್ಮದ್ ಉಜೈಫ್ (22) ಹಾಗೂ ಆತನ ತಾಯಿ ಸಬಾನಾ ಅಬ್ದುಲ್ ಬಾರಿಯು ಸಾವಿರಾರು ಬ್ಯಾಂಕ್ ಖಾತೆಗಳ ಮೂಲಕ ಕೋಟ್ಯಾಂತರ ರೂಪಾಯಿ ಹಣದ ವಹಿವಾಟು ನಡೆಸಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಬಿಕಾಂ ಕೋರ್ಸ್‌ನ್ನು ಮಧ್ಯದಲ್ಲಿ ಬಿಟ್ಟ ಉಜೈಫ್ ಹಣ ಸಾಗಣೆ ದಲ್ಲಾಳಿಯಾಗಿ ಸೈಬರ್ ವಂಚನೆ ಜಾಲಕ್ಕೆ ಸೇರಿಕೊಂಡಿದ್ದ. ತಾಯಿಯ ಸಹಕಾರದೊಂದಿಗೆ ಈತ ಸುಮಾರು 4,200 ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಜಾಲದ ಇತರ ಸದಸ್ಯರು ಒಟ್ಟಾರೆ 9,000ಕ್ಕೂ ಹೆಚ್ಚು ಖಾತೆಗಳನ್ನು ಬಳಸುತ್ತಿದ್ದು, ಅವುಗಳ ಮೂಲಕ ಸುಮಾರು 24 ಕೋಟಿ ರೂ. ಹಣದ ವಹಿವಾಟು ನಡೆದಿದೆ ಎಂಬುದು ಪ್ರಾಥಮಿಕ ಅಂದಾಜು.
ತನಿಖೆಯಲ್ಲಿ, ದುಬೈ ಮೂಲದ ಭಾರತೀಯ ವ್ಯಕ್ತಿ ಪ್ರೇಮ್ ತನೇಜಾ ಜತೆ ಹಣ ಸಾಗಣೆ ವ್ಯವಹಾರಗಳ ಸಂಪರ್ಕವಿದ್ದುದೂ ಪತ್ತೆಯಾಗಿದೆ. ಈತ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧಿತನಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ವಂಚನಾ ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ಉಜೈಫ್‌ನ ತಾಯಿಯೊಂದಿಗೆ ಆತ ಸಂಪರ್ಕ ಹೊಂದಿದ್ದನೆಂದು ತಿಳಿದುಬಂದಿದೆ.
ಆರೋಪಿಗಳು ಸರ್ಕಾರಿ ಆಸ್ಪತ್ರೆಗಳು ಹಾಗೂ ಕಾಲೇಜುಗಳಿಗೆ ತೆರಳಿ, ಜನರು ಮತ್ತು ವಿದ್ಯಾರ್ಥಿಗಳನ್ನು 2 ಸಾವಿರದಿಂದ 5 ಸಾವಿರ ರೂ. ಕೊಡುತ್ತೇವೆ ಎಂದು ಭರವಸೆ ನೀಡಿ ಬ್ಯಾಂಕ್ ಖಾತೆ ತೆರೆಯುವಂತೆ ಒತ್ತಾಯಿಸುತ್ತಿದ್ದರು. ಈ ವೇಳೆ ಆಧಾರ್, ಪ್ಯಾನ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದು, ದೆಹಲಿಯಲ್ಲಿರುವ ಸಹವರ್ತಿಗಳಿಗೆ ಕಳುಹಿಸಲಾಗುತ್ತಿತ್ತು. ನಂತರ ಆ ಖಾತೆಗಳನ್ನು ದುರುಪಯೋಗಪಡಿಸಿಕೊಂಡು ಹಣವನ್ನು ಕಬಳಿಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಒಂಬತ್ತು ಯುವಕರನ್ನು ಬಂಧಿಸಲಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ದಾಖಲಾಗಿರುವ 864 ಸೈಬರ್ ಅಪರಾಧ ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ದಾಳಿಯ ವೇಳೆ ನೂರಾರು ಡೆಬಿಟ್ ಕಾರ್ಡ್‌ಗಳು, ಮೊಬೈಲ್ ಫೋನ್‌ಗಳು, ಚಿನ್ನಾಭರಣ, ನಗದು, ಐಷಾರಾಮಿ ಕೈಗಡಿಯಾರಗಳು ಹಾಗೂ ಡಿಜಿಟಲ್ ಪಾವತಿ ಮತ್ತು ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಉಜೈಫ್ ಐಷಾರಾಮಿ ಜೀವನಶೈಲಿಗೆ ಮಾರು ಹೋಗಿದ್ದು, ದುಬಾರಿ ವಸ್ತುಗಳ ಖರೀದಿ ಹಾಗೂ ಜೆಪಿ ನಗರದಲ್ಲಿ ಹೆಚ್ಚಿನ ಬಾಡಿಗೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.