ಹಾಡಿಯ ಕತ್ತಲ ಜೀವನಕ್ಕೆ ಮುಕ್ತಿ: ದಶಕಗಳ ನಂತರ ಬೆಳಕಿನ ಭಾಗ್ಯ ಕಂಡ ಆದಿವಾಸಿಗಳು
ಸಿದ್ದಾಪುರ: ಸ್ವಾತಂತ್ರ್ಯ ಸಿಕ್ಕಿ ಏಳು ದಶಕ ಕಳೆದರೂ ಕೂಡ ಮೂಲ ಸೌಕರ್ಯ ವಂಚಿತರಾಗಿ ಕತ್ತಲ ಜೀವನ ನಡೆಸುತ್ತಿದ್ದ ಆದಿವಾಸಿ ಕುಟುಂಬಗಳಿಗೆ ಅಂತೂ ಇಂತೂ ಬೆಳಕಿನ ಭಾಗ್ಯ ಬಂತು ಎಂಬ ಖುಷಿಯಲ್ಲಿದ್ದಾರೆ.ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಳ್ಳಿ ಹಾಡಿಯಲ್ಲಿ ಸುಮಾರು 50ಕ್ಕೊ ಹೆಚ್ಚು ಕುಟುಂಬಗಳು ವಾಸವಾಗಿದ್ದು ಮೂಲಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿದ್ದರು. ಈ ಹಿಂದೆ ಚುನಾವಣೆ ಬಂದ ಸಂದರ್ಭದಲ್ಲಿ ಮೂಲಸೌಕರ್ಯ ಕಲ್ಪಿಸಿ ಎಂಬ ಬೇಡಿಕೆಯೊಂದಿಗೆ ಬಹಿಷ್ಕಾರಕ್ಕೆ ಮುಂದಾಗುತ್ತಿದ್ದರು.ಈ ಹಿಂದಿನ ಅಧಿಕಾರಿಗಳು, ಜನಪ್ರತಿನಿಧಿಗಳ ಭರವಸೆಯಿಂದಲೇ ಮತದಾನ ಮಾಡುತ್ತಿದ್ದರು.ಮತದಾನದ ಹಕ್ಕು ಬಿಟ್ಟರೆ ಯಾವ ಸೌಲಭ್ಯವು ಈ ಹಾಡಿಯ ಜನರಿಗೆ ಇರಲಿಲ್ಲ.ದಿಡಳ್ಳಿ ಹೋರಾಟ ಸಂದರ್ಭ ಈ ಹಾಡಿ ಮುಂದೆ ಹೋಗುವ ರಾಜ್ಯದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಡಿಯಲ್ಲಿರುವ ಸ್ಥಿತಿಗತಿಯ ಬಗ್ಗೆ ಗಮನಹರಿಸುತ್ತಿರಲಿಲ್ಲ.ಮೂಲಸೌಕರ್ಯ ಕಲ್ಪಿಸಿ ಎಂಬ ಬೇಡಿಕೆಯನ್ನು ಮುಂದಿಟ್ಟು ತಾಲೂಕು, ಜಿಲ್ಲಾ ಮಟ್ಟದಲ್ಲೂ ಹೋರಾಟ ಮಾಡಲಾಗಿತ್ತು.
ಹಲವು ಹೋರಾಟಗಳ ನಂತರ ಗ್ರಾಮ ಪಂಚಾಯಿತಿಯಿಂದ ತಾತ್ಕಾಲಿಕ ನೀರನ್ನು ವ್ಯವಸ್ಥೆ ಮಾಡಲಾಗಿತ್ತಾದರೂ ವಿದ್ಯುತ್ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ವಿಧಾನಸಭಾ ಚುನಾವಣೆಗೂ ಮುನ್ನ ಹಾಡಿಗೆ ಭೇಟಿ ನೀಡಿದ ಎ ಎಸ್ ಪೊನ್ನಣ್ಣ ಆದಿವಾಸಿ ಕುಟುಂಬಗಳ ಸಮಸ್ಯೆಗಳನ್ನು ಕೇಳಿ ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಇದೀಗ ನುಡಿದಂತೆ ನಡೆದುಕೊಂಡು ಒಂದು ವರ್ಷದ ಅವಧಿಯಲ್ಲಿ ಹಾಡಿಗೆ ವಿದ್ಯುತ್ ಬೆಳಕಿನ ಭಾಗ್ಯವನ್ನು ನೀಡಿ ಹಾಡಿಯ ಸಮಸ್ಯೆಗಳಿಗೆ ಸ್ಪಂದಿಸಿ ಕತ್ತಲ ಜೀವನದಿಂದ ಬೆಳಕಿನೆಡೆಗೆ ತರಲು ಮುಂದಾಗಿರುವ ಶಾಸಕ ಪೊನ್ನಣ್ಣ ಅವರ ಸೇವಾ ಕಾರ್ಯಕ್ಕೆ ಆದಿವಾಸಿ ಮುಖಂಡ ಶಂಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಟಿಡಿಪಿ ಮೂಲಕ ಈಗಾಗಲೇ ಮನೆಗಳ ನಿರ್ಮಾಣ ಕಾರ್ಯವು ಮುಂದುವರೆದಿದ್ದು ಗಂಗಾ ಕಲ್ಯಾಣ ಯೋಜನೆಯ ಕಾಮಗಾರಿಯನ್ನ ಪೂರ್ಣಗೊಳಿಸಿದ್ದಲ್ಲಿ ಕೃಷಿಯೊಂದಿಗೆ ಜೀವನ ನಡೆಸಲು ಸಾಧ್ಯವಾಗಲಿದೆ.ರಸ್ತೆ ಸೇರಿದಂತೆ ಇತರ ಸೌಲಭ್ಯಗಳನ್ನು ಆದಷ್ಟು ಬೇಗ ಮಾಡಿಕೊಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ . ಈ ಸಂದರ್ಭಹಾಡಿ ನಿವಾಸಿಗಳು ಹಾಜರಿದ್ದರು.