ಇಮ್ರಾನ್ ಖಾನ್ ಜೀವಂತ; ಅಡಿಯಾಲ ಜೈಲಿನಲ್ಲಿ ಮಾಜಿ ಪ್ರಧಾನಿಯನ್ನು ಭೇಟಿಯಾದ ತಂಗಿ ಉಜ್ಮಾ

ಇಮ್ರಾನ್ ಖಾನ್ ಜೀವಂತ; ಅಡಿಯಾಲ ಜೈಲಿನಲ್ಲಿ ಮಾಜಿ ಪ್ರಧಾನಿಯನ್ನು ಭೇಟಿಯಾದ ತಂಗಿ ಉಜ್ಮಾ
Photo credit: TV09 (ಫೋಟೋ:imran khan & sister)

ಇಸ್ಲಾಮಾಬಾದ್, ಡಿ. 2: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವನ್ನಪ್ಪಿದ್ದಾರೆ ಎಂಬ ವದಂತಿ ದೇಶದೆಲ್ಲೆಡೆ ಗೊಂದಲ, ಆತಂಕ ಮತ್ತು ಪ್ರತಿಭಟನೆಗೆ ಕಾರಣವಾಗುತ್ತಿದ್ದ ನಡುವೆ, ಇಂದು ಸಂಜೆ ಅವರ ತಂಗಿ ಉಜ್ಮಾ ಖಾನ್ ಅವರಿಗೆ ಅಡಿಯಾಲ ಜೈಲಿನಲ್ಲಿ ಸಹೋದರರನ್ನು ಭೇಟಿಯಾಗಲು ಅನುಮತಿ ದೊರೆಯಿತು.

ಜೈಲು ಭೇಟಿಗೆ ಅವಕಾಶ ನೀಡದಿದ್ದರೆ ರಾವಲ್ಪಿಂಡಿಯಲ್ಲಿ ಪಕ್ಷದ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಅಧಿಕಾರಿಗಳು ಕೊನೆಗೂ ಅನುಮತಿ ನೀಡಿದರು.

ಭೇಟಿ ಬಳಿಕ ಉಜ್ಮಾ ಮಾಧ್ಯಮಗಳೊಂದಿಗೆ ಮಾತನಾಡಿ, “ಅಣ್ಣ ಚೆನ್ನಾಗಿದ್ದಾರೆ, ಫಿಟ್ ಆಗಿದ್ದಾರೆ, ಜೀವಂತವಾಗಿದ್ದಾರೆ” ಎಂದು ಸ್ಪಷ್ಟಪಡಿಸಿದರು. ಇಮ್ರಾನ್ ಖಾನ್ ಹತ್ಯೆಯ ಕುರಿತು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುಳ್ಳು ಸುದ್ದಿಗಳಿಗೆ ಇದರಿಂದ ತೆರೆ ಬಿದ್ದಂತಾಗಿದೆ.

ಆದರೂ ಜೈಲಿನಲ್ಲಿರುವ ಪರಿಸ್ಥಿತಿಯನ್ನು ಅವರು ಪ್ರಶ್ನಿಸಿದರು. “ಅವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಯಾರೊಂದಿಗೂ ಸಂವಹನ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಅವರು ನನಗೆ ಹೇಳಿದರು. ಇದರಿಂದ ಅವರು ತುಂಬಾ ಕೋಪಗೊಂಡಿದ್ದಾರೆ” ಎಂದು ಉಜ್ಮಾ ಆರೋಪಿಸಿದರು.

ಇಮ್ರಾನ್ ಖಾನ್‌ ಸಾವಿನ ವದಂತಿಗಳು ಬಲೂಚಿಸ್ತಾನದ ವಿದೇಶಾಂಗ ಸಚಿವಾಲಯ ಮಾಡಿದ್ದ ಗಂಭೀರ ಆರೋಪದ ನಂತರ ಮತ್ತಷ್ಟು ತೀವ್ರವಾಗಿದ್ದವು. ಐಎಸ್‌ಐ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜೊತೆಗೂಡಿ ಅಡಿಯಾಲ ಜೈಲಿನಲ್ಲೇ ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು.

ಉಜ್ಮಾ ಖಾನ್ ಅವರ ಭೇಟಿಯಿಂದ ಇಮ್ರಾನ್ ಖಾನ್ ಅವರ ಜೀವಿತ ಮತ್ತು ಆರೋಗ್ಯ ಸ್ಥಿತಿ ಕುರಿತು ಹರಡುತ್ತಿದ್ದ ಅನುಮಾನ, ಊಹಾಪೋಹಗಳಿಗೆ ಈಗ ಅಧಿಕೃತ ತಿರುಗೇಟು ಸಿಕ್ಕಂತಾಗಿದೆ.