ನೇಪಾಳ ಸೇನಾ ಪ್ರಧಾನ ಕಚೇರಿಯ ಹೊರಗೆ ‘ಜೆನ್ ಝಡ್’ ಬಣಗಳ ಘರ್ಷಣೆ: ಮಧ್ಯಂತರ ಸರ್ಕಾರದ ನಾಯಕತ್ವದ ಕುರಿತು ತೀವ್ರ ವಾದ ವಿವಾದ

ಕಠ್ಮಂಡು: ನೇಪಾಳದಲ್ಲಿ ನಡೆದ ದಶಕಗಳಲ್ಲಿಯೇ ಅತಿದೊಡ್ಡ ಯುವಜನರ ಚಳವಳಿಯು ತೀವ್ರ ಘಟ್ಟವನ್ನು ತಲುಪಿದ್ದು, ಮಧ್ಯಂತರ ಸರ್ಕಾರವನ್ನು ಯಾರು ಮುನ್ನಡೆಸಬೇಕು ಎಂಬ ವಿಷಯದಲ್ಲಿ ‘ಜೆನ್ ಝಡ್’ ಬಣಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಗುರುವಾರ ಸೇನಾ ಪ್ರಧಾನ ಕಚೇರಿಯ ಹೊರಗೆ ಎರಡು ಬಣಗಳ ನಡುವೆ ನಡೆದ ವಾದ ಘರ್ಷಣೆಗೆ ತಿರುಗಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆಯ ನಂತರ ದೇಶದಲ್ಲಿ ಮಧ್ಯಂತರ ನಾಯಕತ್ವದ ಕುರಿತ ಚರ್ಚೆ ಆರಂಭವಾಗಿದ್ದು, ಒಂದು ಬಣ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಬೆಂಬಲಿಸುತ್ತಿದೆ. ಆದರೆ ಮತ್ತೊಂದು ಬಣ ಸಂವಿಧಾನಾತ್ಮಕ ಅಸಂಗತತೆಯನ್ನು ಉಲ್ಲೇಖಿಸಿ ಅವರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿ, ಜನಪ್ರಿಯ ಎಂಜಿನಿಯರ್ ಹಾಗೂ ವಿದ್ಯುತ್ ಪ್ರಾಧಿಕಾರದ ಮಾಜಿ ಮುಖ್ಯಸ್ಥ ಕುಲ್ಮಾನ್ ಘಿಸಿಂಗ್ ಅವರನ್ನು ಪರಿಗಣಿಸಲು ಒತ್ತಾಯಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸೇನಾ ಪ್ರಧಾನ ಕಚೇರಿಯೊಳಗೆ ಅಧ್ಯಕ್ಷ ರಾಮಚಂದ್ರ ಪೌಡೆಲ್, ಸೇನಾ ಮುಖ್ಯಸ್ಥ ಅಶೋಕ್ ರಾಜ್ ಸಿಗ್ಡೆಲ್ ಮತ್ತು ಪ್ರತಿಭಟನಾಕಾರರ ಪ್ರತಿನಿಧಿಗಳ ನಡುವೆ ಮಾತುಕತೆಗಳು ನಡೆದವು. “ಪ್ರಸ್ತುತ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಹಿಡಿಯುವತ್ತ ಹಾಗೂ ದೇಶದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವತ್ತ ನಮ್ಮ ಆದ್ಯತೆ” ಎಂದು ಸೇನಾ ವಕ್ತಾರರು ಸ್ಪಷ್ಟಪಡಿಸಿದರು.
ಸೋಮವಾರದಿಂದ ಆರಂಭವಾದ ಈ ಚಳವಳಿ, ಫೇಸ್‌ಬುಕ್, ಎಕ್ಸ್, ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಸರ್ಕಾರ ಹೇರಿದ ನಿರ್ಬಂಧದಿಂದ ಹುಟ್ಟಿಕೊಂಡಿದೆ. ವಾಕ್ - ಸ್ವಾತಂತ್ರ್ಯದ ಮೇಲಿನ ದಾಳಿಯೆಂದು ಖಂಡಿಸಿ ನಡೆದ ಈ ಪ್ರತಿಭಟನೆಯು ಯುವಜನರನ್ನು ಬೀದಿಗಿಳಿಯುವಂತೆ ಮಾಡಿತು. ಹಿಂಸಾತ್ಮಕ ಘರ್ಷಣೆಗಳಲ್ಲಿ ಇದುವರೆಗೆ ಕನಿಷ್ಠ 34 ಮಂದಿ ಸಾವನ್ನಪ್ಪಿದ್ದು, 1,000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸರ್ಕಾರಿ ಕಟ್ಟಡಗಳು, ಮಂತ್ರಿಗಳ ನಿವಾಸಗಳು ಹಾಗೂ ಐಷಾರಾಮಿ ಹೋಟೆಲ್ ಗಳಿಗೂ ಬೆಂಕಿ ಹಚ್ಚಲಾಗಿದೆ. ಸದ್ಯ ಕಠ್ಮಂಡು ಮತ್ತು ಇತರ ನಗರಗಳಲ್ಲಿ ಕಠಿಣ ಭದ್ರತಾ ಕ್ರಮ ಜಾರಿಯಲ್ಲಿದ್ದು, ಶಾಲೆಗಳು, ಕಾಲೇಜುಗಳು ಹಾಗೂ ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಅಂತರರಾಷ್ಟ್ರೀಯ ವಿಮಾನ ಸೇವೆಗಳು ಮಾತ್ರ ಮುಂದುವರಿಯುತ್ತಿವೆ. ಮಧ್ಯಂತರ ನಾಯಕತ್ವಕ್ಕೆ ಸುಶೀಲಾ ಕರ್ಕಿ, ಕುಲ್ಮಾನ್ ಘಿಸಿಂಗ್ ಹಾಗೂ ರಾಜಪ್ರಭುತ್ವ ಪರ ಮುಖಂಡ ದುರ್ಗಾ ಪ್ರಸಾಯಿ ಸೇರಿದಂತೆ ಹಲವರ ಹೆಸರುಗಳು ಚರ್ಚೆಗೆ ಬಂದಿದ್ದು, ಪ್ರತಿಭಟನಾಕಾರರೊಳಗಿನ ಭಿನ್ನಾಭಿಪ್ರಾಯಗಳು ಒಗ್ಗಟ್ಟಿನ ಭವಿಷ್ಯದ ಬಗ್ಗೆ ಗಂಭೀರ ಅನುಮಾನಗಳನ್ನು ಎಬ್ಬಿಸಿವೆ.