ಸೌದಿ ಅರೇಬಿಯಾ | ಮದೀನಾ ಸಮೀಪ ಬಸ್–ಟ್ಯಾಂಕರ್ ಡಿಕ್ಕಿ: 42 ಭಾರತೀಯ ಉಮ್ರಾ ಯಾತ್ರಿಕರು ಬಲಿ
ಹೈದರಾಬಾದ್, ನ.17: ಮಕ್ಕಾದಲ್ಲಿ ಉಮ್ರಾ ಮುಗಿಸಿ ಮದೀನಾಗೆ ತೆರಳುತ್ತಿದ್ದ ಯಾತ್ರಿಕರ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ದುರಂತ ಸಂಭವಿಸಿದೆ. ಮುಫ್ರಿಹತ್ ಪ್ರದೇಶದಲ್ಲಿ ಭಾರತೀಯ ಕಾಲಮಾನ ಬೆಳಗಿನ 1.30ರ ಸುಮಾರಿಗೆ ಸಂಭವಿಸಿದ ಈ ಅವಘಡದಲ್ಲಿ 42 ಮಂದಿ ಭಾರತೀಯ ಯಾತ್ರಿಕರು ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಗುರಿಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದು, ಮೃತರೆಲ್ಲರೂ ಹೈದರಾಬಾದ್ ಮೂಲದವರಾಗಿರುವ ಮಾಹಿತಿ ಲಭ್ಯವಾಗಿದೆ. ದುರಂತದ ವೇಳೆಗೆ ಬಸ್‌ನಲ್ಲಿ ಸುಮಾರು 20 ಮಹಿಳೆಯರು ಮತ್ತು 11 ಮಕ್ಕಳು ಇದ್ದರು ಎಂದು ತಿಳಿದು ಬಂದಿದೆ.
ಮಕ್ಕಾದಲ್ಲಿ ಉಮ್ರಾ ವಿಧಿವಿಧಾನಗಳನ್ನು ನೆರವೇರಿಸಿ ಮದೀನಾಕ್ಕೆ ಪ್ರಯಾಣಿಸುತ್ತಿದ್ದ ಯಾತ್ರಿಕರಲ್ಲಿ ಅನೇಕರು ನಿದ್ರೆಯಲ್ಲಿದ್ದ ವೇಳೆ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಢಿಕ್ಕಿಯ ಬಳಿಕ ಬಸ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಸ್ಥಳೀಯ ಮೂಲಗಳು ದೃಢಪಡಿಸಿವೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಜೋರಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. 42 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
