ಮಂಜಿನ ನಗರಿ ಮಡಿಕೇರಿಯ ಸಮಸ್ಯೆ ಪರಿಹಾರಕ್ಕೆ ವ್ಯಕ್ತವಾದ ಸ್ಪಂದನ: ಕೊಡಗು ಪತ್ರಕತ೯ರ ಸಂಘದಿಂದ ವಿಷನ್ ಮಡಿಕೇರಿ ಸಂವಾದ

ಮಂಜಿನ ನಗರಿ ಮಡಿಕೇರಿಯ  ಸಮಸ್ಯೆ ಪರಿಹಾರಕ್ಕೆ  ವ್ಯಕ್ತವಾದ ಸ್ಪಂದನ: ಕೊಡಗು ಪತ್ರಕತ೯ರ ಸಂಘದಿಂದ ವಿಷನ್ ಮಡಿಕೇರಿ ಸಂವಾದ

ಮಡಿಕೇರಿ ಡಿ.13- ಸುಂದರ ಪರಿಸರದ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳೊಂದಿಗೆ ದಿನದಿನವೂ ಹೆಚ್ಚುತ್ತಿರುವ ವಾಹನ ದಟ್ಟಣೆ, ರಸ್ತೆಗಳ ಅವ್ಯವಸ್ಥೆ, ಸ್ವಚ್ಛತೆಯ ಪರಿಜ್ಞಾನವಿಲ್ಲದೆ ಉಂಟಾಗುತಿರುವ ಅಶುಚಿತ್ವ, ಅನಧಿಕೃತ ಹೋಂ ಸ್ಟೇಗಳಿಂದ ಉದ್ಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೊಡಗು ಪತ್ರಕರ್ತರ ಸಂಘದಿಂದ ಆಯೋಜಿತ ವಿಷನ್ ಮಡಿಕೇರಿ- ' ನಮ್ಮ ಮಡಿಕೇರಿ ನಮ್ಮ ಹೆಮ್ಮೆ- ಸಂವಾದ' ಕಾರ್ಯಕ್ರಮದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ನಗರದ ರೆಡ್ ಬ್ರ‍್ರಿಕ್ಸ್ ಸಭಾಂಗಣದ ಸತ್ಕಾರ ಭವನದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘಂದ ಅಧ್ಯಕ್ಷ ಅನಿಲ್ ಹೆಚ್.ಟಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, , 1691 ರಲ್ಲಿ ಮುದ್ದುರಾಜನಿಂದ ನಿರ್ಮಾಣವಾದ ಮಡಿಕೇರಿ 344 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ. ಈ ಪುಟ್ಟ ನಗರಿ ಬದಲಾವಣೆಗಳಿಗೆ ಮೈಯೊಡ್ಡುತ್ತಲೆ ಬಂದಿದ್ದು, ಭವಿಷ್ಯದಲ್ಲಿ ಮಡಿಕೇರಿಯನ್ನು ಸುಂದರ ನಗರವನ್ನಾಗಿ ರೂಪಿಸುವ ಮತ್ತು ಸಂರಕ್ಷಿಸುವ ಬಗ್ಗೆ ಯಾವುದೇ ಅಭಿಪ್ರಾಯ ಭೇದಗಳಿದ್ದರೂ ಬದಿಗೊತ್ತಿ, ಜಾತಿ ಮತಗಳ ಭೇದವಿಲ್ಲದೆ ನಗರದ ನಾಗರಿಕರೆಲ್ಲರು ಕೈಜೋಡಿಸಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದರು.

ಶೋಚನೀಯ ಸ್ಥಿತಿಯಲ್ಲಿ ಜಿಲ್ಲಾ ಕ್ರೀಡಾಂಗಣ- ಕ್ರೀಡಾಪಟು ಹಾಗೂ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ. ದೇವಯ್ಯ ಮಾತನಾಡಿ, ಹಲವಾರು ಅಂತರಾಷ್ಟೀಯ ಹಾಕಿ ಆಟಗಾರರನ್ನು ರಾಷ್ಟ ಮತ್ತು ಅಂತರಾಷ್ಟೀಯ ಮಟ್ಟಕ್ಕೆ ಕೊಡುಗೆಯಾಗಿ ನೀಡಿರುವ ನಗರದ ಜನರಲ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಪ್ರಸ್ತುತ, ಕನಿಷ್ಟ ಕಾಳಜಿಯೂ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿದೆ. ಬದಲಾದ ಪರಿಸ್ಥಿತಿಗಳಲ್ಲಿ ಅತ್ಯತ್ತಮ ಆಟಗಾರರಾಗಿ ರೂಪುಗೊಳ್ಳಲು ಸುಸಜ್ಜಿತ ಕ್ರೀಡಾಂಗಣ, ಅಥ್ಲೆಟಿಕ್ಸ್ ಗಳಿಗೆ ಸಿಂಥೆಟಿಕ್ ಲೈನ್‌ಗಳ ಅಗತ್ಯವಿದೆ. ಇದರತ್ತ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಾಗಲಿ ಯಾರೂ ಗಮನ ಹರಿಸುತ್ತಿಲ್ಲ ವೆಂದು ಖೇದ ವ್ಯಕ್ತಪಡಿಸಿದರು.

ಇದಕ್ಕೆ ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಪ್ರತಿಕ್ರಿಯಿಸಿ, ಜಿಲ್ಲೆಯ ಶಾಸಕರು ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿದ್ದು, 1.5 ಕೋಟಿ ರೂ. ವೆಚ್ಚದಲ್ಲಿ ಸಿಂಥೆಟಿಕ್ ಲೇನ್, 2.50 ಕೋಟಿ ವೆಚ್ಚದಲ್ಲಿ ಬಾಸ್ಕೆಟ್ ಬಾಲ್ ಕೋಟ್೯ಗಳ ನಿರ್ಮಾಣವಾಗಲಿದೆಯೆಂದು ಮಾಹಿತಿ ನೀಡಿದರು.

ಮಡಿಕೇರಿ ಸ್ಕ್ರೇರ್ ನಿರ್ಮಾಣವಾಗಲಿ- ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ.ನಂದ ಕುಮಾರ್, ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹದಾಕಾರವಾಗಿ ನಿರ್ಮಿಸಿರುವ ತಡೆಗೋಡೆಯ ಬಳಿ, ಆಕರ್ಷಕವಾದ 'ಮಡಿಕೇರಿ ಸ್ಕೆಏರ್' ನಿರ್ಮಾಣದ ಪ್ರಯತ್ನಗಳು ಇಂದಿಗೂ ಜಾರಿಗೆ ಬಂದಿಲ್ಲ. ಅದನ್ನು ಕಾರ್ಯಗತಗೊಳಿಸುವ ಪ್ರಯತ್ನ ನಡೆಯಬೇಕು, ನಗರದ ರಾಜಾಸೀಟ್ ರಸ್ತೆಯ ವಿಸ್ತರಣಾ ಕಾರ್ಯ ನಡೆಯಬೇಕೆನ್ನು ಅನಿಸಿಕೆ ವ್ಯಕ್ತಪಡಿಸಿದರು.

ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ಮಡಿಕೇರಿ ನಗರ ಕನಿಷ್ಟ ಮೂಲಭೂತ ಸೌಲಭ್ಯಗಳಿಂದ ಬಳಲುತ್ತಿದೆ. ನಗರದಲ್ಲಿ ಸಂಚರಿಸಲು ಯೋಗ್ಯ ಫುಟ್‌ಪಾತ್‌ಗಳಿಲ್ಲ, ಇರುವ ಫುಟ್ ಪಾತ್‌ಗಳು ಒತ್ತುವರಿಯಾಗಿದೆ. ಶಾಲಾ ಮಕ್ಕಳು ತೆರಳುವ ಜೂನಿಯರ್ ಕಾಲೇಜು ರಸ್ತೆ ಅತ್ಯಂತ ಕಿರಿದಾಗಿದ್ದು, ಇಲ್ಲಿ ಫುಟ್ ಪಾತ್ ಸಹಿತವಾದ ರಸ್ತೆ ನಿರ್ಮಾಣವಾಗಬೇಕೆಂದು ಸಲಹೆ ನೀಡಿದರು.

ಹಳೆಯ ಗೋರಿಗಳು ಕಾಡುಪಾಲು- ಹಿಂದೆ ರಾಜಾಸೀಟಿನಲ್ಲಿದ್ದ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಮಡಿದವರ ಗೋರಿಗಳನ್ನು ನಗರದ ಐಟಿಐ ಹಿಂಭಾಗಕ್ಕೆ ದಶಕಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ಪ್ರಸ್ತುತ ಆ ಜಾಗ ಕಾಡುಕೂಡಿ ಗೋರಿಗಳು ಕಾಡು ಪಾಲಾಗಿದೆ. ಆಪ್ರದೇಶವನ್ನು ಯೋಗ್ಯ ಉದ್ಯಾನವನವನ್ನಾಗಿ ಪರಿವರ್ತಿಸಬೇಕೆನ್ನುವ ಅಭಿಪ್ರಾಯವನ್ನು ಬೇಬಿ ಮ್ಯಾಥ್ಯು ವ್ಯಕ್ತಪಡಿಸಿದರು.

ಜಿಲ್ಲಾ ಸಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ. ಇದನ್ನು ನಿವಾರಿಸಿ. ಕಲಾಭವನವನ್ನು ಶೀಘ್ರವೇ ನಿಮಿ೯ಸಿ ಕಲಾವಿದರ ಪ್ರದಶ೯ನಕ್ಕೆ ಅವಕಾಶ ಕಲ್ಪಿಸಿ. ತ್ಯಾಜ್ಯ ಎಸೆದವರಿಗೆ ಹೆಚ್ಚಿನ ದಂಡ ವಿಧಿಸಿ ಎಂದು ಪುರಸಭೆಯ ಮಾಜಿ ಸದಸ್ಯ ಟಿ.ಎಂ.ಸತೀಶ್ ಪೈ, ಸಲಹೆ ನೀಡಿದರು.

ಜ್ಯೂಸ್ ಬಾಟಲಿಗಳನ್ನೇನು ಮಾಡುವುದು...? ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮದನ್ ಅವರು ಮಾತನಾಡಿ, ನಗರದಲ್ಲಿ ಒಂದು ಲೀಟರ್ ನೀರಿನ ಬಾಟಲ್ ಮಾರಾಟ ನಿಷೇಧಿಸಲಾಗಿದೆ. ಇದೊಂದು ಒಳ್ಳೆಯ ಕ್ರಮವಾಗಿದ್ದರೂ, ಅರ್ಧ, ಒಂದು ಲೀಟರ್‌ನಲ್ಲಿ ಬರುವ ಜ್ಯೂಸ್ ಬಾಟಲ್‌ಗಳನ್ನು ಪ್ರಸ್ತುತ ಎಲ್ಲೆಂದರಲ್ಲಿ ಬಳಸಿ ಎಸೆಯಲಾಗುತ್ತಿದೆ.ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅನಿಸಿಕೆ ವ್ಯಕ್ತಪಡಿಸಿದರಲ್ಲದೆ, ನಗರದಲ್ಲಿರುವ ಸಣ್ಣ ಪಾರ್ಕ್ಗಳನ್ನು ಅಭಿವೃದ್ಧಿ ಪಡಿಸಿ, ಮಕ್ಕಳ ಚಟುವಟಿಕೆಗಳಿಗೆ ಅಲ್ಲಿ ಅವಕಾಶ ನೀಡುವಂತೆ ಸಲಹೆ ನೀಡಿದರು.  

ನೆಹರು ಮಂಟಪ ಅಭಿವೃದ್ಧಿ ಪಡಿಸಿ- ಪ್ರಸ್ತುತ ಮಡಿಕೇರಿ ಪ್ರವಾಸಿ ಕೇಂದ್ರವಾಗಿ ಪರಿವರ್ತಿತವಾಗಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ರಾಜಾಸೀಟು ಗಿಜಿ ಗುಡುತ್ತದೆ. ಆದರೆ, ಅದರ ಪಕ್ಕದಲ್ಲೆ ಇರುವ ನೆಹರು ಮಂಟಪದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ನೆಹರು ಮಂಟಪವನ್ನು ಅಭಿವೃದ್ಧಿ ಪಡಿಸಿ ವ್ಯೂ ಪಾಯಿಂಟ್ ಆಗಿ ಪರಿವರ್ತಿಸುವಂತೆ ಮದನ್ ಸಲಹೆಯನ್ನಿತ್ತರು.

  ಕಾಂಗ್ರೆಸ್ ನಗರಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ನಗರದ ಕೈಗಾರಿಕಾ ಬಡಾವಣೆ ರಸ್ತೆಯಲ್ಲಿ ವಾಹನಗಳ ಏಕ ಮುಖ ಸಂಚಾರ ವ್ಯವಸ್ಥೆ ಸರಿಯಲ್ಲ. ಇದರಿಂದ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಇದನ್ನು ಬದಲಾಯಿಸಬೇಕಾಗಿದೆಯೆಂದರು.

ನಗರಸಭಾ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ನಗರದ ಅನೇಕ ಅಂಗಡಿಗಳಲ್ಲಿ ಸ್ತಳೀಯದಲ್ಲದ ಸ್ಪೆಸಸ್ ತಂದು ಮಾರಾಟಮಾಡಲಾಗುತ್ತಿದೆ. ಈ ಬಗ್ಗೆ ನಗರಸಭೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದರು.

ಪ್ರವಾಸೋದ್ಯಮ ಸ್ವರೂಪ ಬದಲಾಗಲಿ-ನಗರಸಭಾ ಸದಸ್ಯ ಅಪ್ಪಣ್ಣ ಮಾತನಾಡಿ, ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರಸ್ತುತ ನಗರದಲ್ಲಿ ಕೆಲವೇ ಕೆಲವು ಪ್ರದೇಶಗಳಿವೆ. ಇದನ್ನು ಮಿರಿ ಸಾಂಸ್ಕೃತಿಕ, ಸಾಹಸ ಮತ್ತು ಕೃಷಿ ಪ್ರಧಾನವಾದ ಪ್ರವಾಸೋದ್ಯಮದತ್ತ ಚಿಂತನೆ ಹರಿಸುವ ಅಗತ್ಯತೆ ಇದೆ. ಪ್ರಸ್ತುತ ಪ್ರವಾಸೋದ್ಯಮದ ಹೆಸರಿನಲ್ಲಿ ನಗರದಲ್ಲಿ ಹೊರ ಪ್ರದೇಶದವರು ಬಾಡಿಗೆಗೆ ಮನೆಗಳನ್ನು ಪಡೆದು ಅನಧಿಕೃತವಾಗಿ ಹೋಂ ಸ್ಟೇಗಳನ್ನು ನಡೆಸುತ್ತಿದ್ದಾರೆ. ಇದರಿಂದ ನಗರಸಭೆಗೆ ಯಾವುದೇ ಲಾಭವಿಲ್ಲ. ಹೋಂಸ್ಟೇಗಳನ್ನು ನಡೆಸುವುದಿದ್ದಲ್ಲಿ ಅದನ್ನು ಅದರ ಮಾಲೀಕರು ಮಾತ್ರ ನಡೆಸಲಿ, ಇಲ್ಲದಿದ್ದರೆ ಅಂತಹ ಹೋಂ ಸ್ಟೇಗಳನ್ನು ಸ್ಥಗಿತಗೊಳಿಸಬೇಕೆಂದು ಒತ್ತಿ ಹೇಳಿದರು.

ನಗರಸಭಾ ಸದಸ್ಯ ಎಸ್.ಸಿ. ಸತೀಶ್ ಮಾತನಾಡಿ, ಮಡಿಕೇರಿ ಪ್ರವಾಸಿ ಕೇಂದ್ರವಾಗಿದ್ದು. ಇಲ್ಲಿನ ಪ್ರವಾಸಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡುವ ರೂಟ್ ಮ್ಯಾಪ್‌ಗಳ ಬೋಡ್೯ಗಳನ್ನು ಅಳವಡಿಸುವುದು ಅವಶ್ಯವೆಂದು ಸಲಹೆಯನ್ನಿತ್ತು, ಅನಧಿಕೃತ ಹೋಂ ಸ್ಟೇಗಳ ಬಗ್ಗೆ ನಗರಸಭೆ ಮತ್ತು ಪೊಲೀಸ್ ಜಂಟಿಯಾಗಿ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದರು.

ಇದೇ ಸಂದರ್ಭ ಮಾಜಿ ನಗರಸಭಾ ಸದಸ್ಯೆ ವೀಣಾಕ್ಷಿ ,, ನಗರದಲ್ಲಿ ಸ್ವಚ್ಛತೆಯ ನಾಮಫಲಕಗಳ ಅಳವಡಿಕೆ ಮಾಡಬೇಕು. ಪ್ರಸ್ತುತ ಪ್ರವಾಸಿಗರು ಕಸವನ್ನು ನಗರದ ಖಾಲಿ ಇರುವ ಸ್ಥಳಗಳಲ್ಲಿ ಎಸೆದು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಟಾಸ್ಕ್ ಫೋರ್ಸ್ ರಚನೆಯಾಗಲಿ- ಭಾರತೀಯ ವಿದ್ಯಾ ಭವನದ ಪ್ರಮಖರಾದ ಬಾಲಾಜಿ ಕಾಶ್ಯಪ್ ಮಾತನಾಡಿ, ಪ್ರಸ್ತುತ ಪ್ರವಾಸೋದ್ಯಮ ಜನ ಕೇಂದ್ರಿತವಾಗಿ ಮಾತ್ರ ಮುನ್ನಡೆಯುತ್ತಿದೆ. ಇದನ್ನು ಮೀರಿ ಗುಣಮಟ್ಟದ ಸುಂದರ ಪ್ರವಾಸೋದ್ಯಮವಾಗಿ ಸಾಗಬೇಕಾದರೆ, ಭವಿಷ್ಯದಲ್ಲಿ ಪ್ರವಾಸೋದ್ಯಮ ಹೇಗಿರಬೇಕೆನ್ನುವ ಚಿಂತನೆಗಳ ರೂಪುರೇಷೆಗಳನ್ನು ಕಂಡುಕೊಳ್ಳಲು ಎಲ್ಲರನ್ನೂ ಒಳಗೊಂಡ 'ಟಾಸ್ಕ್ ಪೋರ್ಸ್' ರಚನೆಯಾಗಬೇಕೆನ್ನುವ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು.

ಮೇರೆ ಮೀರುತ್ತಿರುವ ಮಧ್ಯವರ್ತಿಗಳ ಹಾವಳಿ- ಮಡಿಕೆೇರಿಯಲ್ಲಿ ಹೋಂಸ್ಟೇ ಗಳಿಗೆ ಪ್ರವಾಸೋದ್ಯಮಿಗಳನ್ನು ಸೆಳೆಯುವಲ್ಲಿ ಮಧ್ಯವರ್ತಿಗಳ ಹಾವಳಿ ಮಿರಿ ಮೀರಿರುವುದನ್ನು ತಿಳಿಸಿದ ಪ್ರವಾಸೋದ್ಯಮಿ ಮೋಹನ್ ದಾಸ್, ಇದನ್ನು ಪರಿಶೀಲಿಸಬೇಕಾದ ಇಲಾಖೆಗಳಲ್ಲಿ ಸಿಬ್ಬಂದಿಗಳೇ ಇಲ್ಲದೆ ಸ್ಥಿತಿ ಇರುವುದರಿಂದ ಹೇಳುವವರು ಇಲ್ಲ ಕೇಳುವವರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಮಡಿಕೇರಿ ಎನ್ನುವುದು 'ಗಾರ್ಡನ್ ಸಿಟಿ'ಯಾಗಿ ಪರಿವರ್ತನೆಗೊಳ್ಳಬೇಕೆ ಹೊರತು ಈ ರೀತಿಯಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರಠಾಣಾ ಎಸ್‌ಐ ಶ್ರೀಧರ್ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಮುಂದಿನ ಹದಿನೈದು ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಡಿವಾಣ ಹಾಕುವುದಾಗಿ ದೃಢವಾಗಿ ನುಡಿದರು.

ಕೊಡಗು ಹೋಟೇಲ್ ರೆಸಾಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಜಿರ್ ಮಾತನಾಡಿ, ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಹತ್ತಾರು ವರ್ಷಗಳಿಂದ ಪ್ರಯತ್ನಿಸಿ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿ, ನಗರದಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲಿ ನಿಷೇಧವಾಗಿದೆಯಾದರು, ನಗರ ಬಿಟ್ಟು ಎರಡು ಕಿಲೋ ಮೀಟರ್ ಆಚೆ ಅದೇ ನಿರಿನ ಬಾಟಲ್‌ಗಳು ದೊರಕುತ್ತಿದೆ. ಜಿಲ್ಲೆಯಾದ್ಯಂತ ನೀರಿನ ಪ್ಲಾಸ್ಟ್ಟಿಕ್ ಬಾಟಲಿ ನಿಷೇಧ ಆಗಬೇಕಾಗಿದೆಯೆಂದು ಒತ್ತಾಯಿಸಿದರು.

 ನಾವು ಕೈ ಜೋಡಿಸುತ್ತೇವೆ...ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗನೇಶ್ ಮಾತನಾಡಿ, ಹೋಂ ಸ್ಟೇಯ ಮೂಲ ಉದ್ದೇಶದಿಂದ ಹೊರ ಬಂದು ಇಂದು ಹೋಂ ಸ್ಟೇಗಳನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ. ಪ್ರವಾಸಿಗರು ಬಳಸುವ ಪ್ಲಾಸ್ಟಿಕ್ ಬಾಟಲಿಗಳನ್ನು ವ್ಯವಸ್ಥಿತವಾಗಿ ಒಂದೆಡೆ ಹಾಕುವುದಕ್ಕೆ ' ಬಾಟಲ್ ಡ್ರಾಪಿಂಗ್ ಪ್ಲೇಸ್' ಮಾಡಲು ನಮ್ಮ ಸಂಘ ಸಿದ್ಧವಿರುವುದಾಗಿ ತಿಳಿಸಿದರು.

ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಮಾತನಾಡಿ, ಪ್ರವಾಸಿ ತಾಣಗಳ ಮಾಹಿತಿ ಒದಗಿಸುವ ಕೇಂದ್ರವನ್ನು ಮಡಿಕೇರಿಯಲ್ಲಿ ತೆರೆಯಬೇಕು, ರಾಜಾಸೀಟು ಬಳಿಯಲ್ಲಿ ಪಾಳು ಬೀಳುತ್ತಿರುವ ಕೂರ್ಗ್ ವಿಲೇಜ್ , ನೆಹರು ಮಂಟಪದ ಸಮರ್ಪಕ ಬಳಕೆಯಾಗಬೇಕಾಗಿದೆಯೆಂದು ತಿಳಿಸಿದರು.

ಮಡಿಕೇರಿ ನಗರ ಚೇಂಬರ್ ನಿರ್ದೇಶಕ ಎಂ. ಧನಂಜಯ್ ಮಾತನಾಡಿ, ಕಾನೂನು ಪಾಲನೆ ಆಗದಿದ್ದಲ್ಲಿ ಸಮಸ್ಯೆ ಉಂಟಾಗುತ್ತದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೂರಕವಾಗಿ ಆಸಕ್ತರಿಗೆ ಪ್ರವಾಸೋದ್ಯಮ ಇಲಾಖೆ ತರಬೇತಿ ನೀಡಿದಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬಹುದೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯರಿಗೆ ನಗರಕಯಾತನೆ- ಕೊಡಗು ಪತ್ರ೯ಕರ್ತರ ಸಂಘದ ಗೌರವ ಸಲಹೆಗಾರರಾದ ಟಿ.ಪಿ.ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಡಿಕೇರಿ ಕಿಷ್ಕಿಂದೆಯಂತೆ ಮಾರ್ಪಾಡಾಗಿದೆ. ನಗರ ಪ್ರವೇಶಿಸುವ ವಾಹನಗಳಿಗೆ ನಿಲುಗಡೆ ಮಾಡಲು ಸೂಕ್ತ ಜಾಗವಿಲ್ಲದೆ ಚಾಲಕರು ಒದ್ದಾಡುವಂತಾಗಿದೆ. ಮಡಿಕೇರಿನಗರ ಯಾವುದೇ ಕ್ರಮಬದ್ಧವಾದ ಯೋಜನೆಗಳಿಲ್ಲದೆ ಬೆಳೆದಿದೆ. ಇದರಿಂದ ಸಮರ್ಪಕವಾದ ರಸ್ತೆ , ಫುಟ್ ಪಾತ್‌ಗಳು ಇಲ್ಲದೆ ಸ್ಥಳೀಯರು ನರಕಯಾತನೆ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ 25 ವರ್ಷಗಳ ದೂರದೃಷ್ಟಿಯ ಯೋಜನಗಳ ನೀಲಿ ನಕಾಶೆಯನ್ನು ನಗರಸಭೆ ಮತ್ತು ಮುಡಾ ರೂಪಿಸಿ, ಆ ನಿಟ್ಟಿನಲ್ಲಿ ಮುಂದಡಿಯಿಡಬೇಕಾದ ಅಗತ್ಯವಿರುವುದಾಗಿ ಸಲಹೆ ನೀಡಿದರು.

ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಸಲಹೆ ನೀಡಿ, ಮಂಗಳೂರು ರಸ್ತೆಯಲ್ಲಿರುವ ಸಕಾ೯ರಿ ಐ.ಬಿ. ಜಾಗದಲ್ಲಿಯೇ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಿದ್ದಲ್ಲಿ ವಾಹನ ಸಂಚಾರ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದರು. ಈ ನಿಟ್ಟಿನಲ್ಲಿ ಸಾವ೯ಜನಿಕರ ಸಹಿ ಸಂಗ್ರಹಿಸಿ ಸಕಾ೯ರದ ಮಟ್ಟದಲ್ಲಿ ವ್ಯವಹರಿಸುವುದಾಗಿ ಚೇಂಬರ್ ನಿದೇ೯ಶಕಿ ಮೋಂತಿಗಣೇಶ್ ಭರವಸೆ ನೀಡಿದರು.

ಪತ್ರಕತ೯ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ನಗರದಲ್ಲಿ ರಸ್ತೆ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕಿ ವ್ಯಾಪಾರಸ್ಥರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಬೇಕೆಂದು ಸಲಹೆ ನೀಡಿದರು. ಇದರಿಂದ ಪಾದಾಚಾರಿಗಳಿಗೆ ರಸ್ತೆ ಬದಿ ವ್ಯಾಪಾರಿಗಳಿಂದ ಆಗುತ್ತಿರುವ ಸಮಸ್ಯೆಗೆ ಕಡಿವಾಣ ಹಾಕಿದಂತಾಗುತ್ತದೆ ಎಂದೂ ಅವರು ನುಡಿದರು.

ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಆರ್ ಎಂ. ಸಿ ಯಾಡ್೯ ಮತ್ತು ಅಬ್ಬಿಫಾಲ್ಸ್ ರಸ್ತೆಯಲ್ಲಿ ದೊಡ್ಡ ವಾಹನಗಳ ನಿಲುಗಡೆಗೆ ಅವಕಾಶ ನೀಡಿ ಅಲ್ಲಿಂದ ಸಣ್ಣ ವಾಹನಗಳಲ್ಲಿ ಪ್ರವಾಸಿಗರನ್ನು ನಗರದೊಳಕ್ಕೆ ಕರೆತರುವಂತಾಗಬೇಕೆಂದರು ,

ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ಪ್ರವಾಸೋದ್ಯಮಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದರು.

ಪೌರಾಯುಕ್ತ ರಮೇಶ್ ಅವರು ಮಾತನಾಡಿ, ನಗರಸಭಾ ಕಛೇರಿ ಪಕ್ಕದ ಹಳೆಯ ಕಾವೇರಿ ಕಲಾಕ್ಷೇತ್ರವಿರುವ ಜಾಗದಲ್ಲಿ 9.50 ಕೋಟಿ ವೆಚ್ಚದ 'ಕಲಾ ಭವನ' ನಿರ್ಮಾಣಕ್ಕೆ ಟೆಂಡರ್ ಅನುಮೋದನೆಯಾಗಿ ಕ್ರಿಯಾ ಯೋಜನೆ ಸಿದ್ಧವಾಗುತ್ತಿದ್ದು, ಆದಷ್ಟು ಶೀಘ್ರ ಕಾಮಗಾರಿ ನಡೆಯಲಿದೆಯೆನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ 1200 ಬೀದಿ ನಾಯಿ- ಮಡಿಕೇರಿ ನಗರದಲ್ಲಿ ಅಂದಾಜು 1250 ಬೀದಿ ನಾಯಿಗಳು ಇರುವುದನ್ನು ಈಗಾಗಲೇ ಗುರುತಿಸಲಾಗಿದೆಯೆಂದು ತಿಳಿಸಿದ ಪೌರಾಯುಕ್ತ ರಮೇಶ್, ಸುಪ್ರೀಂ ಕೊರ್ಟ್ ಆದೇಶದಂತೆ ಇವುಗಳಿಗೆ ಆಹಾರ ಒದಗಿಸಲು ನಗರದ 9 ಸ್ಥಳಗಳನ್ನು ಗುರುತಿಸಲಾಗಿದೆ. ಇದರೊಂದಿಗೆ ಇವುಗಳನ್ನು ಒಂದು ಪ್ರದೇಶದಲ್ಲಿರಿಸುವ ಸಲುವಾಗಿ ಕರ್ಣಂಗೇರಿ ಬಳಿಯಲ್ಲಿ ಜಾಗವನ್ನು ಗುರುತಿಸಲಾಗಿದೆ. ಅಲ್ಲಿ 222*122 ಅಡಿ ವಿಸ್ತೀರ್ಣದಲ್ಲಿ 6 ಅಡಿ ಕಾಂಪೌಂಡ್ ವಾಲ್ ನಿರ್ಮಿಸಿ ಅದರಲ್ಲಿ ನಾಯಿಗಳನ್ನು ಬಿಡಲಾಗುತ್ತದೆ ಎಂದು ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಸದಸ್ಯರಾದ ಡಾ. ಎಂ.ಜಿ. ಪಾಟ್ಕರ್ ,ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ, ಖಜಾಂಚಿ ಟಿ.ಕೆ. ಸಂತೋಷ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ಕೊಡಗು ಅಭಿವೖದ್ದಿ ಸಮಿತಿಯ ಪ್ರಸನ್ನ ಭಟ್, ರೋಟರಿ ವುಡ್ಸ್ ಕಾಯ೯ದಶಿ೯ ಪ್ರಮೀಳಾ ಶೆಟ್ಟಿ ,ನಗರಸಭಾ ಮಾಜಿ ಅಧ್ಯಕ್ಷೆ ಜುಲೈಕಾಬಿ, ಸದಸ್ಯರಾದ ಶ್ವೇತಾ ಪ್ರಶಾಂತ್, ಮೇರಿ ವೇಗಸ್, ಶಾರದಾ ನಾಗರಾಜ್, ಚಿತ್ರಾವತಿ, ಮಿನಾಜ್ ಪ್ರವೀಣ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ. ರವಿ ಕುಮಾರ್ ವಂದಿಸಿದರು. ಹಿರಿಯ ಪತ್ರಕತ೯ ಜಿ. ಚಿದ್ವಿಲಾಸ್ ಅನೇಕ ಸಲಹೆಗಳೊಂದಿಗೆ ಸಂವಾದ ನಿರೂಪಿಸಿದರು. ನಿತ್ಯಾ ಪ್ರವೀಣ್ ಪ್ರಾಥಿ೯ಸಿದರು.

ಪೋಸ್ಟರ್ ಲೋಕಾಪ೯ಣೆ

ಕೊಡಗು ಪತ್ರಕತ೯ರ ಸಂಘದಿಂದ ಹೊರತರಲಾದ ನಮ್ಮ ಮಡಿಕೇರಿ - ನಮ್ಮ ಹೆಮ್ಮೆ ಎಂಬ ಪ್ರವಾಸಿಗರು ಮಡಿಕೇರಿಯಲ್ಲಿ ಅನುಸರಿಸಬೇಕಾದ ನಿಯಮಗಳ ಮಾಹಿತ ಪೋಸ್ಟರ್ ನ್ನು ಗಣ್ಯರು ಲೋಕಾಪ೯ಣೆಗೊಳಿಸಿದರು.

ಪ್ರತಿ ವಾರ್ಡ್ ಸಮಿತಿ ರಚನೆ  

  ಸಂವಾದ ಕಾಯ೯ಕ್ರಮ ನಿರ್ವಹಿಸಿದ ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಅನಧಿಕೖತ ಹೋಂಸ್ಟೇಗಳಿಗೆ ಕಡಿವಾಣದ ಬಗ್ಗೆ ಸಲಹೆ ನೀಡಿ, ಪ್ರತಿ ವಾಡ್೯ಗಳಲ್ಲಿ ಅಲ್ಲಿನ ನಗರಸಭಾ ಸದಸ್ಯರನ್ನು ಒಳಗೊಂಡಂತೆ ಸಮಿತಿಯೊಂದನ್ನು ರಚಿಸಿದಲ್ಲಿ, ಆ ವಿಭಾಗದ ಅನಧಿಕೃತ ಹೋಂ ಸ್ಟೇಗಳ ಮಾಹಿತಿ ದೊರಕಲಿದೆ ಎಂದರು. ಈ ಬಗ್ಗೆ ಗಮನ ನೀಡುವುದಾಗಿ ನಗರಸಭಾಧ್ಯಕ್ಷೆ ಕಲಾವತಿ ಭರವಸೆ ನೀಡಿದರು.