ಸಿದ್ದಾಪುರ: ಸುತ್ತ ಮುತ್ತ ಗ್ರಾಮಗಳಲ್ಲಿ ಹೆಚ್ಚುತ್ತಿದೆ ಆನೆ-ಮಾನವ ನಡುವಿನ ಸಂಘರ್ಷ

May 15, 2025 - 23:40
 0  34
ಸಿದ್ದಾಪುರ: ಸುತ್ತ ಮುತ್ತ ಗ್ರಾಮಗಳಲ್ಲಿ ಹೆಚ್ಚುತ್ತಿದೆ ಆನೆ-ಮಾನವ ನಡುವಿನ ಸಂಘರ್ಷ
ಸಿದ್ದಾಪುರ: ಸುತ್ತ ಮುತ್ತ ಗ್ರಾಮಗಳಲ್ಲಿ ಹೆಚ್ಚುತ್ತಿದೆ ಆನೆ-ಮಾನವ ನಡುವಿನ ಸಂಘರ್ಷ

ಸಿದ್ದಾಪುರ:ಕಾಡು ನಾಶವಾಗುತ್ತಿರುವ ಪರಿಣಾಮ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದು, ಮಾನವನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವಂತೆ ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದು ಜನರ ಮೇಲೆ ದಾಳಿ ಮಾಡಲಾರಂಭಿಸಿವೆ. ಜಿಲ್ಲೆಯ ಹಲವೆಡೆ ಆಗಾಗ್ಗೆ ಕಾಡು ಪ್ರಾಣಿಗಳು ನಾಡಿನಲ್ಲಿ ಕಾಣಿಸಿಕೊಂಡು ದಾಳಿ ನಡೆಸಿ ಭಯ ಹುಟ್ಟಿಸುತ್ತಿವೆ.

ಏಪ್ರಿಲ್ 24 ರಂದು ಪಾಲಿಬೆಟ್ಟ ಗ್ರಾಮದ ಎಮ್ಮೆಗುಂಡಿ ಕಾಫಿ ತೋಟದ ಕಾರ್ಮಿಕನಾಗಿ ವಾಸವಾಗಿದ್ದ ಸೆಲ್ವಂ (55)ಮನೆಯಿಂದ ಬೆಳ್ಳಂಬೆಳಗ್ಗೆ ವಾಕಿಂಗ್ ತೆರಳಿದ ಸಂದರ್ಭ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.ಹಾಗೂ ಏಪ್ರಿಲ್ 25ರಂದು ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅವರೆಗುಂದ ಹಾಡಿಯಲ್ಲಿ ಮಧ್ಯರಾತ್ರಿ ವೇಳೆಯಲ್ಲಿ ಮನೆಯ ಸಮೀಪವೆ ಬಂದ ಕಾಡಾನೆಯ ಶಬ್ದ ಕೇಳಿ ಹೊರಗೆ ಬಂದ ಸಂದರ್ಭ ಕಾಡಾನೆ ಏಕಾಏಕಿ ದಾಳಿ ಮಾಡಿದ ಪರಿಣಾಮ ರೈತ ಚಿನ್ನಪ್ಪ (76) ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಮಾನವ-ಕಾಡುಪ್ರಾಣಿಗಳು ಸಂಘರ್ಷ ತಡೆಯುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು.

ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಅಪಾರ ಪ್ರಮಾಣದ ಕೃಷಿ ಫಸಲು ನಾಶ ಮಾಡುತ್ತಿವೆ.ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು ಮತ್ತು ಬೆಳೆಗಾರರರು ಕಂಗಾಲಾಗಿದ್ದು, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ದಿನಗಳಿಂದ ಹಾಡಹಗಲೆ ಮಾಲ್ತಾರೆ, ಕರಡಿಗೋಡು, ಮೈಲಾಪುರ, ಶಿಲ್ಪಿ, ಮಟ್ಟಂ, ಬಜೆ ಗೊಲ್ಲಿ, ಹುಂಡಿ, ಅಮ್ಮತಿ, ಪಾಲಿಬೆಟ್ಟ, ಸಿದ್ದಾಪುರ ಸೇರಿದಂತೆ ಹಲವೆಡೆ ಕಾಫಿ ತೋಟಗಳಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು ನಿತ್ಯ ಕಾಣಿಸಿಕೊಳ್ಳುತ್ತಿವೆ. ಕಾಡಾನೆಗಳು ಕಾಫಿ ತೋಟಗಳಲ್ಲಿ ಮರಿಯಾನೆಗಳೊಂದಿಗೆ ಬೀಡು ಬಿಟ್ಟಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಹೊಟ್ಟೆಪಾಡಿಗಾಗಿ ತೋಟದ ಕೆಲಸಕ್ಕೆ ತೆರಳುವ ಕಾರ್ಮಿಕರು ಕಾಡು ಪ್ರಾಣಿಗಳ ಭಯದ ನಡುವೆ ಕೆಲಸ ನಿರ್ವಹಿಸಬೇಕಾಗಿದೆ. ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಿನೊಳಗೆ ನೀರು ಮತ್ತು ಆಹಾರ ಕೊರತೆಯಿಂದಾಗಿ ಆನೆಗಳು ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಇಲ್ಲಿ ಸಾಕಷ್ಟು ಆಹಾರ, ನೀರು ಸಿಗುವುದರಿಂದ ವಾಸಸ್ಥಾನವನ್ನಾಗಿ ಮಾಡಿಕೊಂಡಿವೆ.

ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೂ ಮತ್ತೆ ನಾಡಿಗೆ ವಾಪಸ್ ಬರುತ್ತಿವೆ. ಕೆಲವು ಆನೆಗಳು ಎಸ್ಟೇಟ್‌ನಲ್ಲಿ ಮರಿಗಳಿಗೆ ಜನ್ಮ ನೀಡಿ ಅಲ್ಲೇ ಬೀಡು ಬಿಟ್ಟಿವೆ. ಇತ್ತೀಚೆಗೆ ಅರಣ್ಯ ಇಲಾಖೆ ಸೆರೆಹಿಡಿದ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿ ದೂರದ ಕಾಡಿಗ ಮಾಡಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಮರಳಿ ಬಂದಿದೆ. ಕಾಡಾನೆಗಳು ಕೃಷಿ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುವುದನ್ನು ತಡೆಯಲು ಅರಣ್ಯ ಇಲಾಖೆ ಹಲವು ಪ್ರಾಯೋಗಿಕ ಕ್ರಮಗಳನ್ನು ಅನುಸರಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಅರಣ್ಯದಂಚಿನಲ್ಲಿ ಯಾವುದೇ ತಡೆಯಿಲ್ಲದೆ ಆನೆಗಳು ಬಂದು ಹೋಗುತ್ತಿವೆ. ಬಹುತೇಕ ಕಡೆಗಳಲ್ಲಿ ಸೋಲಾರ್, ರೈಲ್ವೆ ಕಂಬಿ, ಕಂದಕ ನಿರ್ಮಾಣ ಮಾಡದ ಕಾರಣ ಸಮಸ್ಯೆ ಹೆಚ್ಚಾಗಿದೆ.

ಸೆರೆ ಹಿಡಿಯುವಂತೆ ಒತ್ತಾಯ:

ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಕಳೆದ ಒಂದು ವರ್ಷದಲ್ಲಿ ತಾಲೂಕಿನಲ್ಲಿ ಹಲವು ಮಂದಿ ಆನೆ ದಾಳಿಗೆ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದರು ಕೂಡ ಮರಳಿ ತೋಟಗಳತ್ತ ಬರುತ್ತಿದೆ. ಜತೆಗೆ ಕಾಡಾನೆಗಳ ಹಿಂಡಿನ ಪೈಕಿ ಜನರಿಗೆ ಉಪಟಳ ನೀಡುವ ಕಾಡಾನೆಯನ್ನು ಹಿಡಿದು ಲಕ್ಷಾಂತರ ರೂ. ಖರ್ಚು ಮಾಡಿ ಸ್ಥಳಾಂತರ ಮಾಡಿದರೂ ಒಂದೇ ವಾರದಲ್ಲಿ ಪುನಃ ತಮ್ಮ ವಾಸ ಸ್ಥಳಕ್ಕೆ ಮರಳಿ ಬರುತ್ತಿವೆ. ಹೀಗಾಗಿ ಆನೆ ಹಿಡಿದು ಕಾಡಿಗೆ ಬಿಡುವ ಅರಣ್ಯ ಇಲಾಖೆಯ ಕಾರ್ಯವೈಖರಿಗೆ ರೈತರು ಕಿಡಿಕಾರಿದ್ದಾರೆ. ಕೊಡಲೇ ಈ ಭಾಗದಲ್ಲಿ ಬಲಿ ಪಡೆಯುವ ಆನೆಯನ್ನು ಸೆರೆ ಹಿಡಿದು ಪಳಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಬ್ಯಾರಿಕೇಡ್ ನಿರ್ಮಾಣ :-

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಲ್ದಾರೆ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ 22 ಕೋಟಿ ರೂ. ಬಿಡುಗಡೆಗೆ ಮಂಜೂರಾತಿ ನೀಡಿದ್ದು, ಆ ನಿಟ್ಟಿನಲ್ಲಿ ಮಾಲ್ದಾರೆ, ಘಟ್ಟತಾಳ ವಿವಿಧ ಪ್ರದೇಶದ 8 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಕಂಬಿ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಇತ್ತೀಚೆಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಈ ಭಾಗದಲ್ಲಿ ಚಾಲನೆ ನೀಡಿದ್ದಾರೆ.ಅರಣ್ಯ ಇಲಾಖೆ ಹಲವು ಕಡೆ ಕಾಡಂಚಿನಲ್ಲಿ ಆನೆ ಕಂದಕ ನಿರ್ಮಿಸಬೇಕಾಗಿದೆ . ಆದಷ್ಟು ಬೇಗ ಈ ಭಾಗದಲ್ಲಿ ರೈಲ್ವೆ ಕಂಬಿ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಸಮಸ್ಯೆಗೆ ಮೂಲ ಕಾರಣ ಅರಣ್ಯ ಇಲಾಖೆ. ಕಾಡಿನಲ್ಲಿ ಆನೆಗಳಿಗೆ ಸರಿಯಾಗಿ ಮೇವು ಸಿಗದ ಕಾರಣ ರೈತರ ತೋಟ-ಗದ್ದೆಗಳಿಗೆ ದಾಳಿ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಆನೆಗಳ ಸಂಖ್ಯೆಯೂ ವೃದ್ಧಿಸುತ್ತಿದೆ.ಬಲಿ ಪಡೆಯುವ ಆನೆಯನ್ನು ಸೆರೆ ಹಿಡಿದು ಪಳಗಿಸಬೇಕು 

ಅರಣ್ಯ ಇಲಾಖೆ, ಸರ್ಕಾರ ಸೂಕ್ತ ರೀತಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಿ

- ರಘು ಕರುಂಬಯ್ಯ ,ಮಾಲ್ದಾರೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ 

ಕಾಫಿ ತೋಟಗಳಲ್ಲಿ ನಿತ್ಯ ಕಾಡಾನೆಗಳು ಮರಿಯಾನೆ ಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ. ಇವು ಒಟ್ಟಿಗೆ ಓಡಾಡುವು ದರಿಂದ ಅಪಾರ ಪ್ರಮಾಣದ ಕೃಷಿ ಫಸಲು ನಾಶವಾಗಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ಪರಿಹಾರ ಕೋರಿ ಮನವಿ ನೀಡಲಾಗಿದ್ದರೂ ಇದುವರೆಗೂ ಯಾವುದೇ ಪರಿಹಾರ ಲಭಿಸಿಲ್ಲ. ಆದಷ್ಟು ಬೇಗ ಪರಿಹಾರ ಒದಗಿಸಿ ಕೊಡಬೇಕು. ಆನೆಗಳನ್ನು ಕಾಡಿಗೆ ಸ್ಥಳಾಂತರಿಸಬೇಕಾಗಿದೆ

-ಕುಕ್ಕುನೂರು ಸೂರಜ್

ಕರಡಿಗೋಡು ಗ್ರಾಮ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0