ಒಂದು ಫೋನ್‌ಕಾಲ್‌ನ ನಿರ್ಲಕ್ಷ್ಯಕ್ಕೆ ಜೀವ ಬಲಿ! ಕೆಎಂಎಫ್ ಕಚೇರಿ ಬಳಿ ರಾತ್ರಿಯಿಡೀ ನರಳಿ ಪ್ರಾಣ ಬಿಟ್ಟ ವ್ಯಕ್ತಿ
ಬೆಂಗಳೂರು, ನ.9: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರು ರಾತ್ರಿಯಿಡೀ ಫುಟ್‌ಪಾತ್‌ನಲ್ಲಿ ನರಳಿ ಕೊನೆಗೆ ಪ್ರಾಣಬಿಟ್ಟ ಘಟನೆ ಬೆಂಗಳೂರಿನಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಒಂದು ಫೋನ್‌ಕಾಲ್ ಅಥವಾ ಸ್ವಲ್ಪ ಮಾನವೀಯತೆ ತೋರಿದ್ದರೆ ಆ ಜೀವವನ್ನು ಉಳಿಸಬಹುದಿತ್ತು.
ನಗರದ ಕೆಎಂಎಫ್ ಕಚೇರಿ ಎದುರು ಗೂಡ್ಸ್ ವಾಹನ ಪಲ್ಟಿಯಾದ ಪರಿಣಾಮ 30–35 ವರ್ಷದ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಸ್ಥಳಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ಯುವ ಬದಲು ಗಾಯಾಳುವನ್ನು ಫುಟ್‌ಪಾತ್‌ನಲ್ಲಿ ಕೂರಿಸಿ ತೆರಳಿದ್ದರು ಎನ್ನಲಾಗಿದೆ.
ಗಾಯದಿಂದ ನರಳುತ್ತಿದ್ದ ಆ ವ್ಯಕ್ತಿ ಕೆಲ ಹೊತ್ತಿನಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರೂ, ಸ್ಥಳೀಯರಲ್ಲಿ ಯಾರೂ ಪೊಲೀಸರಿಗೆ ಅಥವಾ ಆಂಬ್ಯುಲೆನ್ಸ್‌ಗೆ ಮಾಹಿತಿ ನೀಡಲಿಲ್ಲ. ಬಳಿಕ ಗೂಡ್ಸ್ ವಾಹನದ ಚಾಲಕ ಭಯದಿಂದ ಸ್ಥಳದಿಂದ ಪರಾರಿಯಾಗಿದ್ದಾನೆ. ಸಹಾಯವಿಲ್ಲದೆ ರಾತ್ರಿಯಿಡೀ ನರಳುತ್ತಿದ್ದ ಆ ವ್ಯಕ್ತಿ ಕೊನೆಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ ಸ್ಥಳೀಯರು ಫುಟ್‌ಪಾತ್‌ನಲ್ಲಿ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮೈಕೋ ಲೇಔಟ್ ಸಂಚಾರಿ ಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸಿ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಪೊಲೀಸರು ಗುರುತು ಪತ್ತೆಹಚ್ಚುವ ಹಾಗೂ ಅಪಘಾತಕ್ಕೆ ಕಾರಣವಾದ ಚಾಲಕನನ್ನು ಹುಡುಕುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.
“ಯಾರಾದರೂ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿದ್ದರೆ ಆ ಜೀವ ಉಳಿಯಬಹುದಾಗಿತ್ತು” ಎಂದು ಪೊಲೀಸರು ತಿಳಿಸಿದ್ದಾರೆ.
