ಕೊಡಗು ವಿದ್ಯಾಲಯದಲ್ಲಿ ಬಾಲವಾಟಿಕ ಮಕ್ಕಳ “ಆರೋಹಣ ಸಮಾರಂಭ
ಮಡಿಕೇರಿ, ಮಾರ್ಚ್ 16: ಕೊಡಗು ವಿದ್ಯಾಲಯದ ಬಾಲವಾಟಿಕ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ “ಆರೋಹಣ ಸಮಾರಂಭ” ಪದವಿ ಪ್ರದಾನ ಕಾರ್ಯಕ್ರಮವು ಮಡಿಕೇರಿಯ ಕೊಡಗು ವಿದ್ಯಾಲಯದ ಬಿ.ಕೆ. ಸುಬ್ಬಯ್ಯ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದ ಆರಂಭದಲ್ಲಿ ಪುಟ್ಟ ಮಕ್ಕಳು ದೀಪಗಳೊಂದಿಗೆ ವೇದಿಕೆಗೆ ಆಗಮಿಸಿದರು. ಬಳಿಕ ಮುಖ್ಯ ಅತಿಥಿ ಆಗ್ನೆಸ್ ಮುತ್ತಣ್ಣ, ಶಾಲೆಯ ಪ್ರಾಶುಪಾಲರು ಸುಮಿತ್ರ ಕೆ.ಎಸ್. ಹಾಗೂ ಆಡಳಿತ ವ್ಯವಸ್ಥಾಪಕ ರವಿ ಪಿ. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲೆಯ ನಿವೃತ್ತ ಉಪ ಪ್ರಾಂಶಪಾಲರಾದ ಆಗ್ನೆಸ್ ಮುತ್ತಣ್ಣ ಮಾತನಾಡಿ ಎಲ್ಲರೂ ಪರಸ್ಪರ ಸಹಾಯ ಮತ್ತು ಸಹಕಾರದ ಮನೋಭಾವವನ್ನು ಹೊಂದಿರಬೇಕು ಎಂದು ತಿಳಿಸಿದರು. ಮಕ್ಕಳು ಮತ್ತು ಶಿಕ್ಷಕರ ನಡುವಿನ ಭಾಂದವ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಮಕ್ಕಳಿಗೆ ಶಿಕ್ಷಕರ ಮಾತು ವೇದವಾಕ್ಯದಂತೆ ಇದ್ದು, ಶಿಕ್ಷಕರ ಮಾರ್ಗದರ್ಶನವು ಅವರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದೂ ಅವರು ಹೇಳಿದರು.
ಮಕ್ಕಳು ತಮ್ಮ ಸಮಯದ ಹೆಚ್ಚಿನ ಭಾಗವನ್ನು ಶಿಕ್ಷಕರ ಜೊತೆಗೆ ಕಳೆಯುವುದರಿಂದ ಪೋಷಕರು ಸಹ ತಮ್ಮ ಕರ್ತವ್ಯವನ್ನು ಅರಿತು ಮಕ್ಕಳ ಶಿಕ್ಷಣದಲ್ಲಿ ಸಹಕರಿಸಬೇಕು ಎಂದು ಸಲಹೆ ನೀಡಿದರು. ಮಕ್ಕಳು ಸಹಪಾಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ನೆಸ್ ಮುತ್ತಣ್ಣ ಹೇಳಿದರು.
ಶಾಲಾ ಪ್ರಾಶುಪಾಲರಾದ ಸುಮಿತ್ರ ಕೆ.ಎಸ್ ಮಾತನಾಡಿ, ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಸಲಹೆ ನೀಡಿದರು. ಮಕ್ಕಳು ಓದಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದ ಅವರು ಪೋಷಕರು ಮಕ್ಕಳ ಮುಂದೆ ಮಾತನಾಡುವಾಗ ಎಚ್ಚರ ವಹಿಸಬೇಕು ಹಾಗೂ ಮಕ್ಕಳಿಗೆ ಅನವಶ್ಯಕವಾಗಿ ಮೊಬೈಲ್ ಫೋನ್ ನೀಡುವುದನ್ನು ತಪ್ಪಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪೋಷಕರು ಕೊಡಗು ವಿದ್ಯಾಲಯದ ಶಿಕ್ಷಕರ ತಾಳ್ಮೆ, ಸಹಕಾರ ಹಾಗೂ ಅವರ ಉತ್ತಮ ಬೋಧನಾ ಶೈಲಿಯನ್ನು ಪ್ರಶಂಶಿಸಿದರು. ಶಿಕ್ಷಕರು ಮಕ್ಕಳನ್ನು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ಮಾರ್ಗದರ್ಶನ ಮಾಡುತ್ತಿರುವುದಾಗಿ ಪೋಷಕರು ಶ್ಲಾಘಿಸಿದರು. ಬಾಲವಾಟಿಕೆ–2 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜಾನಪದ ನೃತ್ಯ, ಭರತನಾಟ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಮನಗೆದ್ದರು.
ಸಂಯೋಜಕಿ ಭಾರತಿ ಕೆ.ಕೆ. ಮಕ್ಕಳಿಗೆ ಕೆಲವು ಹಿತನುಡಿಗಳನ್ನು ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸೋನಾ ಮುತ್ತಮ್ಮನಿರ್ವಹಿಸಿ,.
ಅತಿಥಿ ಪರಿಚಯವನ್ನು ಬೊಳ್ಳಮ್ಮ ಎಂ.ಪಿ. ನಿರ್ವಹಿಸಿ, ರಮ್ಯಾ ಟಿ.ಪಿ.ವಂದಿಸಿದರು. ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.