ಎಟಿಎಂ ಹಣ ದರೋಡೆ ಪ್ರಕರಣ: 8 ಮಂದಿಯ ಬಂಧನ 5.30 ಕೋಟಿ ರೂ. ವಶಪಡಿಸಿಕೊಂಡ ಬೆಂಗಳೂರು ಪೊಲೀಸರು

ಎಟಿಎಂ ಹಣ ದರೋಡೆ ಪ್ರಕರಣ: 8 ಮಂದಿಯ ಬಂಧನ   5.30 ಕೋಟಿ ರೂ. ವಶಪಡಿಸಿಕೊಂಡ ಬೆಂಗಳೂರು ಪೊಲೀಸರು
Photo credit: public tv

ಬೆಂಗಳೂರು: ನಗರದ ರೂ. 7.11 ಕೋಟಿ ಎಟಿಎಂ ಹಣ ದರೋಡೆ ಪ್ರಕರಣದ ತನಿಖೆಗೆ ಚುರುಕು ನೀಡಿದ ಬೆಂಗಳೂರು ಪೊಲೀಸರು ಆಂಧ್ರಪ್ರದೇಶದ ಚಿತ್ತೂರು, ತಿರುಪತಿ ಮತ್ತು ನಗರದ ಹಲವೆಡೆ ನಡೆಸಿದ ದಾಳಿಯಲ್ಲಿ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ.ದರೋಡೆಗೀಡಾದ ಮೊತ್ತದಲ್ಲಿ ರೂ. 5.30 ಕೋಟಿ ನಗದು ವಶವಾಗಿದೆ.

 ಬಂಧಿತರಲ್ಲಿ ಸಿಎಂಎಸ್ ಏಜೆನ್ಸಿಯ ನಾಲ್ವರು ಸಿಬ್ಬಂದಿ, ಪ್ರಕರಣದ ಸೂತ್ರಧಾರನೆಂದು ಗುರ್ತಿಸಲ್ಪಟ್ಟ ಗೋವಿಂದಪುರ ಠಾಣೆಯ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯ್ಕ್, ಮಾಜಿ ಸಿಬ್ಬಂದಿ ಝೇವಿಯರ್ ಹಾಗೂ ದರೋಡೆಗೆ ಬಳಸಿದ ಕಾರನ್ನು ಒದಗಿಸಿದ್ದ ಕಲ್ಯಾಣನಗರದ ಇಬ್ಬರು ಯುವಕರು ಸೇರಿದ್ದಾರೆ. ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

 ‘ಕಾನ್‌ಸ್ಟೇಬಲ್ ಅಣ್ಣಪ್ಪ ನಾಯ್ಕ್’ ಎಂಬ ಹೆಸರು ಹೊರಬಿದ್ದಂತೆ ಪೊಲೀಸರು ನಗರದಲ್ಲಿ ಅಣ್ಣಪ್ಪನನ್ನೂ ಬಂಧಿಸಿದರು. ಒಂದು ವರ್ಷದ ಹಿಂದೆ ಸಿಎಂಎಸ್ ಸಂಸ್ಥೆಯಿಂದ ಕೆಲಸ ಬಿಟ್ಟಿದ್ದ ಝೇವಿಯರ್ ಹಣ ಸಾಗಾಟದ ಆಂತರಿಕ ಮಾಹಿತಿಯನ್ನು ಅಣ್ಣಪ್ಪನೊಂದಿಗೆ ಹಂಚಿಕೊಂಡಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ, ಖಾಲಿ ಸಮಯದಲ್ಲಿ ಝೇವಿಯರ್‌ನೊಂದಿಗೆಗೂಡಿ ಸಿಎಂಎಸ್ ಹಣ ಸಾಗಾಟದ ಕ್ರಮ, ವಾಹನಗಳ ಚಲನವಲನ, ಸಿಬ್ಬಂದಿ ನಿಯೋಜನೆಗಳ ಕುರಿತು ಮಾಹಿತಿ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರೂ ಸೇರಿ ದರೋಡೆ ಸಂಚು ರೂಪಿಸಿದ್ದರು.

 ದರೋಡೆ ನಡೆದ ಸ್ಥಳದಲ್ಲಿ ಅಣ್ಣಪ್ಪ ಮತ್ತು ಝೇವಿಯರ್ ಹಾಜರಾಗಿರಲಿಲ್ಲ. ಬದಲಾಗಿ ಕಮ್ಮನಹಳ್ಳಿ ಮತ್ತು ಕಲ್ಯಾಣನಗರದ ಯುವಕರ ತಂಡವನ್ನು ಸಂಘಟಿಸಿ ಕಾರ್ಯಾಚರಣೆಗೆ ‘ತರಬೇತಿ’ ನೀಡಿದ್ದರು ಎಂದು ತನಿಖೆ ತಿಳಿಸಿದೆ. ಪೊಲೀಸರ ಕಾರ್ಯಪದ್ದತಿ, ತಪಾಸಣೆ ತಪ್ಪಿಸಿಕೊಳ್ಳುವ ಮಾರ್ಗ, ದಾಳಿಯ ನಂತರ ವಾಹನ ಬದಲಾವಣೆ—ಎಲ್ಲವನ್ನೂ ಅಣ್ಣಪ್ಪ ಸೂಚನೆ ನೀಡಿದ್ದನೆಂದು ಆರೋಪಿಗಳು ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

 ಮೊದಲು ಬಂಧಿತರಾದ ಮೂವರು ಆರೋಪಿಗಳು ದರೋಡೆ ನಂತರ ‘ಎಲ್ಲಿ ಮರೆಮಾಡಬೇಕು, ಹಣವನ್ನು ಹೇಗೆ ಸಾಗಿಸಬೇಕು’ ಎಂಬುದನ್ನೆಲ್ಲ ಅಣ್ಣಪ್ಪನೇ ಸೂಚಿಸಿದ್ದ ಎಂದು ತಿಳಿಸಿದ್ದಾರೆ. ಇದಾದ ಬಳಿಕವೇ ಪೊಲೀಸರು ಅಣ್ಣಪ್ಪನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

 “ಪ್ರಕರಣಕ್ಕೆ ಸಂಬಂಧಿಸಿದ ಕೆಲವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವಿವರಗಳನ್ನು ಈಗ ಬಹಿರಂಗಪಡಿಸುವುದಿಲ್ಲ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಬಿಟ್ಟುಕೊಡುವುದು ಇಲ್ಲ,” ಎಂದು ಗೃಹ ಸಚಿವ ಡಿ.ಜಿ. ಪರಮೇಶ್ವರ್ ಹೇಳಿದರು.