ಸ್ಕರ್ಟ್ ಧರಿಸಿದ್ದಕ್ಕೆ ಆಟೋ ಚಾಲಕನಿಂದ ಮಹಿಳೆಗೆ ಅತ್ಯಾಚಾರದ ಬೆದರಿಕೆ: ಇಂದಿರಾನಗರದಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಬೆಂಗಳೂರು, ನ. 9: ರಾಜಧಾನಿಯಲ್ಲಿ ಮಹಿಳೆಯೊಬ್ಬರು ಎದುರಿಸಿದ ಅಹಿತಕರ ಘಟನೆ ನಗರದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆ ಎಬ್ಬಿಸಿದೆ. ಸ್ಕರ್ಟ್ ಧರಿಸಿದ್ದಕ್ಕೆ ಕೋಪಗೊಂಡ ಆಟೋ ಚಾಲಕನೊಬ್ಬ ಯುವತಿಗೆ ಅತ್ಯಾಚಾರ ಮಾಡುವುದಾಗಿ ಬೆದರಿಸಿದ ಘಟನೆ ಇಂದಿರಾನಗರದಲ್ಲಿ ನಡೆದಿದೆ.
ತಾನು ಅನುಭವಿಸಿದ ಭಯಾನಕ ಘಟನೆಯನ್ನು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ ರೆಡ್ಡಿಟ್ (Reddit) ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮಹಿಳೆಯ ಹೇಳಿಕೆಯ ಪ್ರಕಾರ, ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ತಾನು ಹಾಗೂ ತನ್ನ ಗೆಳೆಯ ಇಂದಿರಾನಗರ ಪ್ರದೇಶದಲ್ಲಿ ಇದ್ದಾಗ ಆಟೋ ಚಾಲಕನೊಬ್ಬ ಏನೋ ಕೂಗಲು ಪ್ರಾರಂಭಿಸಿದ್ದಾನೆ. ಆರಂಭದಲ್ಲಿ ಇಬ್ಬರೂ ಅದನ್ನು ನಿರ್ಲಕ್ಷಿಸಿ ಹೊರಟರೂ, ಕೆಲವೇ ಕ್ಷಣಗಳಲ್ಲಿ ಆ ವ್ಯಕ್ತಿ ಮತ್ತೆ ಬಂದು ಮಹಿಳೆಯ ಉಡುಪಿನ ಕುರಿತು ನಿಂದನೆ ಪ್ರಾರಂಭಿಸಿದ್ದಾನೆ.
“ನೀನು ಇಷ್ಟು ಸಣ್ಣ ಸ್ಕರ್ಟ್ ಹಾಕಿಕೊಂಡು ಓಡಾಡ್ತೀಯೇಕೆ? ಇಂತಹ ಬಟ್ಟೆ ಹಾಕಿದ್ರೆ ಯಾರಾದರೂ ಅತ್ಯಾಚಾರ ಮಾಡ್ತಾರೆ, ನಾನು ಕೂಡ ಮಾಡ್ತೇನೆ” ಎಂದು ಆತನ ಅಸಭ್ಯ ಮಾತುಗಳಿಂದ ಬೆದರಿಕೆ ಹಾಕಿದನೆಂದು ಯುವತಿ ವಿವರಿಸಿದ್ದಾರೆ.
ಮಹಿಳೆಯ ಗೆಳೆಯ, “ಅವಳಿಗೆ ಹೇಗೆ ಬೇಕೋ ಹಾಗೆ ಬಟ್ಟೆ ಹಾಕಿಕೊಳ್ಳಬಹುದು, ನಿಮಗೇನು ತೊಂದರೆ?” ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಕೋಪಗೊಂಡ ಆಟೋ ಚಾಲಕ ಮತ್ತಷ್ಟು ಅಸಭ್ಯವಾಗಿ ವರ್ತಿಸಿದ್ದು, ಅಲ್ಲಿದ್ದ ಜನರು ಮಧ್ಯಪ್ರವೇಶಿಸಿದ ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
“ಆಟೋ ನಂಬರ್ ಅಥವಾ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆತ ವಯೋವೃದ್ಧ, ಬೋಳು ತಲೆಯುಳ್ಳ, ಬಿಳಿ ಕೂದಲಿನವನಾಗಿದ್ದ. ನೋಡಲು ಸಾದಾ ವ್ಯಕ್ತಿಯಂತೆ ಕಂಡರೂ ವರ್ತನೆ ತುಂಬಾ ಕೆಟ್ಟದ್ದಾಗಿತ್ತು. ನನ್ನ ಗೆಳೆಯ ಇದ್ದ ಕಾರಣ ತೊಂದರೆಯಾಗಲಿಲ್ಲ. ಆದರೆ ನಾನು ಒಬ್ಬಳೇ ಇದ್ದರೆ ಪರಿಸ್ಥಿತಿ ಹೇಗಾಗುತ್ತಿತ್ತೋ ಅನ್ನುವುದೇ ಭಯಾನಕ,” ಎಂದು ಮಹಿಳೆ ಬರೆದಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬೆಂಗಳೂರು ಮಹಿಳೆಯರಿಗೆ ಸುರಕ್ಷತೆ ಅನ್ನೋದೇ ಇಲ್ಲ,” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, “ಆಟೋ ನಂಬರ್ ಪತ್ತೆಹಚ್ಚಲು ಹತ್ತಿರದ ಕಫೆ ಅಥವಾ ಮನೆಗಳ ಸಿಸಿಟಿವಿ ದೃಶ್ಯ ಪರಿಶೀಲಿಸಿ ಪೊಲೀಸರ ಗಮನಕ್ಕೆ ತರಬೇಕು” ಎಂದು ಸಲಹೆ ನೀಡಿದ್ದಾರೆ.
