ಬೆಂಗಳೂರು: ATMಗೆ ತುಂಬಲು ಹೋಗುತ್ತಿದ್ದ ಹಣ ಸಾಗಾಟ ವಾಹನ ಅಡ್ಡಗಟ್ಟಿ 7.11 ಕೋಟಿ ರೂ. ದೋಚಿ ಗ್ಯಾಂಗ್ ಪರಾರಿ

ಬೆಂಗಳೂರು: ATMಗೆ ತುಂಬಲು ಹೋಗುತ್ತಿದ್ದ ಹಣ ಸಾಗಾಟ ವಾಹನ ಅಡ್ಡಗಟ್ಟಿ 7.11 ಕೋಟಿ ರೂ. ದೋಚಿ ಗ್ಯಾಂಗ್ ಪರಾರಿ
Photo credit: public tv

ಬೆಂಗಳೂರು, ನ. 19: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಮಧ್ಯಾಹ್ನದ ಹೊತ್ತಿನಲ್ಲಿ ಅತಿದೊಡ್ಡ ದರೋಡೆ ನಡೆದಿದೆ. ಎಟಿಎಂಗಳಿಗೆ ನಗದು ತುಂಬಲು ತೆರಳಿದ್ದ ಸಿಎಂಎಸ್ ಕಂಪೆನಿಯ ಹಣ ಸಾಗಾಟ ವಾಹನವನ್ನು ಗ್ಯಾಂಗ್‌ವೊಂದು ಅಡ್ಡಗಟ್ಟಿ, ಬರೋಬ್ಬರಿ 7.11 ಕೋಟಿ ರೂಪಾಯಿ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, GJ 01 HT 9173 ಸಂಖ್ಯೆಯ ವಾಹನ ಸೌತ್ ಎಂಡ್ ಸರ್ಕಲ್‌ ಕಡೆಗೆ ಸಾಗುತ್ತಿದ್ದ ವೇಳೆ ಜಯದೇವ ಡೇರಿ ಸರ್ಕಲ್ ಮುಂಭಾಗ ಇನ್ನೋವಾ ಕಾರಿನಲ್ಲಿ ಬಂದ ಆರೇಳು ಮಂದಿಯ ತಂಡ ಹಣ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದೆ. “ನಾವು ಆರ್‌ಬಿಐ ಅಧಿಕಾರಿಗಳು, ನೀವು ನಿಯಮ ಉಲ್ಲಂಘಿಸಿದ್ದೀರಿ” ಎಂದು ಸಿಬ್ಬಂದಿಯನ್ನು ಬೆದರಿಸಿ, ಚಾಲಕ–ಗನ್ ಮ್ಯಾನ್ ಸೇರಿ ನಾಲ್ವರನ್ನು ಕೆಳಗೆ ಇಳಿಸಿದ್ದಾರೆ.

ಬಳಿಕ ವಾಹನವನ್ನು ಡೇರಿ ಸರ್ಕಲ್ ಫ್ಲೈಓವರ್ ಕಡೆಗೆ ಕರೆದೊಯ್ದ ದರೋಡೆಕೋರರು, ಅಲ್ಲಿಯೇ ಕಾರು ನಿಲ್ಲಿಸಿ ಅದರಲ್ಲಿದ್ದ ಕೋಟಿ ಕೋಟಿ ನಗದನ್ನು ತಮ್ಮ ಇನ್ನೋವಾ ಕಾರಿಗೆ ತುಂಬಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಗೆ ದೊರೆತ ಮಾಹಿತಿಯ ಪ್ರಕಾರ, ದರೋಡೆಕೋರರ ತಂಡ ಬಳಸಿದ ಇನ್ನೋವಾ ಕಾರಿನ ಮೇಲೆ KA 03 NC 8052 ನಂಬರ್ ಪ್ಲೇಟ್ ಅಳವಡಿಸಲಾಗಿತ್ತು. ಆದರೆ, ಈ ಸಂಖ್ಯೆಯ ಮೂಲ ವಾಹನ ಮಾರುತಿ ಸುಜುಕಿ ಕಂಪೆನಿಗೆ ಸೇರಿದೆ ಎಂದು ದಾಖಲೆಗಳಿಂದ ತಿಳಿದುಬಂದಿದೆ. ಇದರಿಂದ ಗ್ಯಾಂಗ್ ಮುಂಚಿತವಾಗಿ ಪ್ಲ್ಯಾನ್ ಹಾಕಿಕೊಂಡು ದರೋಡೆ ನಡೆಸಿದ್ದರುವ ಶಂಕೆ ವ್ಯಕ್ತವಾಗಿದೆ. 

ಡೇರಿ ಸರ್ಕಲ್–ಕೋರಮಂಗಲ–ಸೋನಿ ವರ್ಲ್ಡ್–ದೊಮ್ಮಲೂರು–ಮಾರತ್ತಹಳ್ಳಿ–ವೈಟ್‌ಫೀಲ್ಡ್ ಮಾರ್ಗವಾಗಿ ತಂಡ ಹೊಸಕೋಟೆಗೆ ಪರಾರಿಯಾದ ಶಂಕೆ ವ್ಯಕ್ತವಾಗಿದೆ. ಪೊಲೀಸರ ತಂಡಗಳು ಅವರ ಪತ್ತೆ ಕಾರ್ಯ ನಡೆಸುತ್ತಿದೆ.