ಬೆಂಗಳೂರು: ಚೀಟಿ ವ್ಯವಹಾರದಲ್ಲಿ ನಷ್ಟ; ಟ್ರಾವೆಲ್ಸ್ ಮಾಲೀಕ ಆತ್ಮಹತ್ಯೆ
ಬೆಂಗಳೂರು: ಚೀಟಿ ವ್ಯವಹಾರದಲ್ಲಿ ಭಾರೀ ನಷ್ಟಕ್ಕೆ ಒಳಗಾಗಿ ಸಾಲದ ಒತ್ತಡ ತಾಳಲಾರದೆ ಟ್ರಾವೆಲ್ಸ್ ಕಂಪನಿ ಮಾಲೀಕ ವೆಂಕಟೇಶ್ (51) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಕೋದಂಡರಾಮಪುರದ ನಿವಾಸಿಯಾಗಿರುವ ವೆಂಕಟೇಶ್ ಅವರು ವಿನಾಯಕ ವೃತ್ತದ ಬಳಿ ಟ್ರಾವೆಲ್ಸ್ ಸಂಸ್ಥೆ ನಡೆಸುತ್ತಿದ್ದರು. ಅವರ ಕಚೇರಿಯಿಂದ ದುರ್ವಾಸನೆ ಹರಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಬುಧವಾರ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಕಚೇರಿಯ ಬಾಗಿಲು ತೆರೆದು ನೋಡಿದಾಗ ವೆಂಕಟೇಶ್ ಅವರು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಯಿತು.
ವೆಂಕಟೇಶ್ ಅವರು ಬಿಜೆಪಿ ಕಾರ್ಯಕರ್ತರಾಗಿದ್ದರು. ಆರು ಮಂದಿ ಸ್ನೇಹಿತರೊಂದಿಗೆ ಚೀಟಿ ವ್ಯವಹಾರ ನಡೆಸುತ್ತಿದ್ದ ಅವರು, ಕೆಲವರು ಪಡೆದ ಹಣವನ್ನು ವಾಪಸ್ ಮಾಡದೇ ಹೋಗಿದ್ದರಿಂದ ದೊಡ್ಡ ಮಟ್ಟದ ನಷ್ಟ ಉಂಟಾಗಿತ್ತು. ಸುಮಾರು 70 ಲಕ್ಷ ರೂಪಾಯಿ ಸಾಲ ತೀರಿಸಲು ಸಾಧ್ಯವಾಗದೆ ನೊಂದ ಅವರು ಆತ್ಮಹತ್ಯೆಗೆ ಶರಣಾಗಿರುವುದಾಗಿ ಮೂಲಗಳು ತಿಳಿಸಿವೆ.
ನ. 9ರಂದು ಕಚೇರಿಗೆ ಬಂದಿದ್ದ ವೆಂಕಟೇಶ್ ಅವರು ಆತ್ಮಹತ್ಯೆಗಿಂತ ಕೆಲವೇ ಕ್ಷಣಗಳ ಮೊದಲು ವಿಡಿಯೋ ಚಿತ್ರೀಕರಿಸಿದ್ದರು. “ಚೀಟಿ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಿ. ಸಂಕಷ್ಟ ಬಂದ್ರೆ ಯಾರೂ ಬರುವುದಿಲ್ಲ; ಅದರಲ್ಲೂ ಹಣ ಕೊಡಬೇಕೆಂದರೆ ಯಾರೂ ಸಹಾಯ ಮಾಡುವುದಿಲ್ಲ” ಎಂದು ಅವರು ವಿಡಿಯೋದಲ್ಲಿ ವಿಷಾದ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.
ಈ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
