ಕರ್ನಾಟಕದಲ್ಲಿ ಈ ವರೆಗೆ ₹5,474 ಕೋಟಿ ಮೌಲ್ಯದ ಸೈಬರ್ ಕ್ರೈಂ ವಂಚನೆ! : ವಿಧಾನಸಭೆಯಲ್ಲಿ ಗಂಭೀರ ಚರ್ಚೆ; ಆತಂಕಕಾರಿ ಅಂಕಿಅಂಶ ಬಿಚ್ಚಿಟ್ಟ ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಳಗಾವಿ, ಡಿ. 10: ರಾಜ್ಯದಲ್ಲಿ ದಿನೇದಿನೇ ಏರಿಕೆಯಾಗುತ್ತಿರುವ ಸೈಬರ್ ಅಪರಾಧಗಳು ಮಂಗಳವಾರ ವಿಧಾನಸಭೆ ಅಧಿವೇಶನದಲ್ಲೂ ಪ್ರತಿಧ್ವನಿಸುತ್ತಿದ್ದವು. ಬಿಜೆಪಿ ಶಾಸಕ ಸಿಮೆಂಟ್ ಮಂಜು ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸೈಬರ್ ಕ್ರೈಂ ರಾಜ್ಯದ ಪ್ರಮುಖ ಕಳವಳಗಳಲ್ಲಿ ಒಂದಾಗಿ ಪರಿಣಮಿಸಿದೆ ಎಂದು ಸ್ಪಷ್ಟಪಡಿಸಿದರು.
ಸಚಿವರ ಪ್ರಕಾರ, 2023ರ ನವೆಂಬರ್ 15ರಿಂದ ಇವರೆಗೆ ಒಟ್ಟು 57,733 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಸುಮಾರು ₹5,474 ಕೋಟಿ ಮೌಲ್ಯದ ವಂಚನೆ ನಡೆದಿದೆ. ದಾಖಲಾಗಿದ ಪ್ರಕರಣಗಳಲ್ಲಿ 10,717 ಪ್ರಕರಣಗಳನ್ನು ಪತ್ತೆ ಹಚ್ಚಿ ₹627 ಕೋಟಿ ಮೊತ್ತವನ್ನು ವಸೂಲಿ ಮಾಡಲಾಗಿದೆ. ಕಳ್ಳತನ, ದರೋಡೆ, ಸುಲಿಗೆ ಸೇರಿದಂತೆ ಸಾಮಾನ್ಯ ಅಪರಾಧಗಳಿಗಿಂತಲೂ ಸೈಬರ್ ಕ್ರೈಂ ಪ್ರಮಾಣವೇ ಈಗ ಹೆಚ್ಚಿನದು ಎಂದು ಪರಮೇಶ್ವರ್ ಸೂಚಿಸಿದರು.
ಆನ್‌ಲೈನ್ ಗೇಮಿಂಗ್ ನಿಯಂತ್ರಣಕ್ಕಾಗಿ ಪೊಲೀಸ್ ಕಾಯ್ದೆಯಲ್ಲಿ ತಾಂತ್ರಿಕ ತಿದ್ದುಪಡಿ ಮಾಡಲಾಗಿದ್ದರೂ, ಇಂಡಿಯನ್ ಗೇಮಿಂಗ್ ಫೆಡರೇಷನ್ ಹೈಕೋರ್ಟ್ ಮೊರೆ ಹೋಗಿ ಸರ್ಕಾರದ ಆದೇಶವನ್ನು ರದ್ದುಪಡಿಸಿಕೊಂಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಪೀಲ್ ಮಾಡಿದ್ದು, ವಿಚಾರಣೆ ಡಿಸೆಂಬರ್ 19ಕ್ಕೆ ನಿಗದಿಯಾಗಿದೆ.
ಸೈಬರ್ ಅಪರಾಧ ತಡೆಗೆ ಗೃಹ ಇಲಾಖೆಯಿಂದಲೇ ತುರ್ತು ಸಹಾಯವಾಣಿ ಆರಂಭಿಸಬೇಕೆಂಬ ಶಾಸಕರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಡಿಜಿಪಿ ಹುದ್ದೆಯ ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ಪ್ರತ್ಯೇಕ ಸೈಬರ್ ಅಪರಾಧ ವಿಭಾಗವನ್ನು ರಚಿಸಿರುವುದು ದೇಶದಲ್ಲೇ ಪ್ರಥಮವೆಂದು ಹೇಳಿದರು. ರಾಜ್ಯಾದ್ಯಂತ 43 ಸೈಬರ್ ಅಪರಾಧ ತನಿಖಾ ಠಾಣೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ವಿವರಿಸಿದರು.
ಇಂದಿನ ಯುಗದಲ್ಲಿ ಮೊಬೈಲ್ ಇಲ್ಲದ ಜೀವನ ಅಸಾಧ್ಯ. ವ್ಯಾಪಾರ, ವಹಿವಾಟು, ಹಣಕಾಸು ವ್ಯವಹಾರಗಳೆಲ್ಲಾ ಆನ್‌ಲೈನ್ ಮುಖಾಂತರವೇ ನಡೆಯುತ್ತಿರುವ ಸಂದರ್ಭದಲ್ಲಿ ಸೈಬರ್ ಅಪರಾಧಗಳು ನಾಗರಿಕರನ್ನು ತೀವ್ರವಾಗಿ ಕಾಡುತ್ತಿವೆ. ಈ ಪೆಡಂಭೂತವನ್ನು ಮಟ್ಟಹಾಕಲು ಸರ್ಕಾರ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಅಭಿಪ್ರಾಯ ವಿಧಾನಸಭೆಯಲ್ಲಿ ವ್ಯಕ್ತವಾಯಿತು.
