ಪ್ರೀತಿ ನಿರಾಕರಿಸಿದ್ದಕ್ಕೆ ಸೇಡು ತೀರಿಸಲು ಯುವತಿ ಮಾಡಿದ್ದೇನು ಗೊತ್ತಾ!

ಪ್ರೀತಿ ನಿರಾಕರಿಸಿದ್ದಕ್ಕೆ ಸೇಡು ತೀರಿಸಲು ಯುವತಿ ಮಾಡಿದ್ದೇನು ಗೊತ್ತಾ!
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಹಲವು ಶಾಲೆ–ಕಾಲೇಜುಗಳಿಗೆ ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಕಳುಹಿಸಿ ಭೀತಿಯ ವಾತಾವರಣ ಸೃಷ್ಟಿಸಿದ್ದ 30 ವರ್ಷದ ಯುವತಿ ರೆನೆ ಜೊಶಿಲ್ಲಾಳನ್ನು ಬಂಧಿಸಲಾಗಿದೆ. ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣಾ ಪೊಲೀಸರು ತಾಂತ್ರಿಕ ತನಿಖೆಯ ಆಧಾರದ ಮೇಲೆ ಆಕೆಯನ್ನು ಪತ್ತೆಹಚ್ಚಿದ್ದಾರೆ.

ಗುಜರಾತ್‌ನ ಅಹಮದಾಬಾದ್ ಕೇಂದ್ರ ಕಾರಾಗೃಹದಲ್ಲಿದ್ದ ರೆನೆ ಜೊಶಿಲ್ಲಾಳನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹುಸಿ ಬಾಂಬ್ ಸಂದೇಶ ಕಳುಹಿಸಿರುವುದನ್ನು ಆಕೆ ಬಾಯ್ದಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಮೂಲದ ರೆನೆ ಬಿಇ ಪದವೀಧರೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ ವೃತ್ತಿಯಿಂದ ರೋಬೊಟಿಕ್ ಇಂಜಿನಿಯರ್ ಆಗಿದ್ದಾಳೆ. ಕಳೆದ ಜೂನ್ 14ರಂದು ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಬಳಿಕ ನಗರದ ಅನೇಕ ಶಾಲೆ–ಕಾಲೇಜುಗಳಿಗೆ ಇದೇ ರೀತಿಯ ಸಂದೇಶಗಳು ಬಂದಿದ್ದವು.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನಿರ್ದೇಶನದ ಮೇರೆಗೆ ಪ್ರಕರಣವನ್ನು ಸೈಬರ್ ಕ್ರೈಂ ಠಾಣೆಗೆ ವರ್ಗಾಯಿಸಲಾಗಿತ್ತು. ತಾಂತ್ರಿಕ ತನಿಖೆಯಲ್ಲಿ ಆಕೆ ವಿಪಿಎನ್ ಮೂಲಕ ಲಾಗಿನ್ ಆಗಿ, ಗೇಟ್‌ಕೋಡ್ ಅಪ್ಲಿಕೇಶನ್ ಬಳಸಿ ವರ್ಚುವಲ್ ನಂಬರ್ ಪಡೆದು 6–7 ವಾಟ್ಸಾಪ್ ಖಾತೆಗಳನ್ನು ನಿರ್ವಹಿಸುತ್ತಿದ್ದಳು ಎಂಬುದು ಬೆಳಕಿಗೆ ಬಂದಿದೆ.

ರೆನೆ ಜೊಶಿಲ್ಲಾ ಬೆಂಗಳೂರಿನ ಪ್ರಭಾಕರ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಆಕೆಯ ಪ್ರೀತಿಯನ್ನು ನಿರಾಕರಿಸಿ, ಕಳೆದ ಫೆಬ್ರವರಿಯಲ್ಲಿ ಮತ್ತೊಬ್ಬಳನ್ನು ವಿವಾಹವಾಗಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಆಕೆ ಪ್ರಭಾಕರ್‌ನ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿಯ ಹುಸಿ ಬಾಂಬ್ ಸಂದೇಶ ಕಳುಹಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆ ಪ್ರಿಯಕರನ ಹೆಸರಿನಲ್ಲಿ ನಕಲಿ ಇಮೇಲ್ ಖಾತೆ ತೆರೆದು, ದೇಶದ ವಿವಿಧ ಶಾಲೆ–ಕಾಲೇಜುಗಳಿಗೆ “ಗುಜರಾತ್ ನರೇಂದ್ರ ಮೋದಿ ಮೈದಾನ ಅಥವಾ ಏರ್ ಇಂಡಿಯಾ ವಿಮಾನ ದುರಂತದಂತೆಯೇ ಸ್ಫೋಟ ಮಾಡುತ್ತೇನೆ” ಎಂಬ ಶೈಲಿಯಲ್ಲಿ ಸಂದೇಶ ಕಳುಹಿಸುತ್ತಿದ್ದಳು.

ಆಕೆಯ ವಿರುದ್ಧ ಬೆಂಗಳೂರಿನಲ್ಲಿ 7 ಪ್ರಕರಣಗಳು ಹಾಗೂ ಇತರೆ ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೆಲವು ತಿಂಗಳ ಹಿಂದೆ ಅಹಮದಾಬಾದ್ ಪೊಲೀಸರು ಬಂಧಿಸಿದ ಆಕೆಯನ್ನು ಇದೀಗ ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

“ಆರೋಪಿ ರೆನೆ ಜೊಶಿಲ್ಲಾ ವಿರುದ್ಧ ಬೆಂಗಳೂರಿನ 7 ಪ್ರಕರಣಗಳು ದಾಖಲಾಗಿವೆ. ಇತರೆ ರಾಜ್ಯಗಳಲ್ಲಿಯೂ 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆಕೆಯ ಸಂಪರ್ಕ ಪತ್ತೆಯಾಗಿದೆ. ತನಿಖೆ ಮುಂದುವರಿಯುತ್ತಿದೆ", ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.