ಸಿನಿಮಾ ನಟನ ಹೆಸರು ಬಳಸಿ ಸೈಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚನೆ; ದಂಪತಿ ವಿರುದ್ಧ ಎಫ್‌ಐಆರ್

ಸಿನಿಮಾ ನಟನ ಹೆಸರು ಬಳಸಿ ಸೈಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚನೆ; ದಂಪತಿ ವಿರುದ್ಧ ಎಫ್‌ಐಆರ್
Photo credit: TV09 (ಫೋಟೋ:ವಂಚಿಸಿದ ದಂಪತಿ)

ನೆಲಮಂಗಲ: ಖ್ಯಾತ ಸಿನಿಮಾ ನಟ ದುನಿಯಾ ವಿಜಯ್ ಆಪ್ತರೆಂದು ಹೇಳಿಕೊಂಡು ಸೈಟ್ ಕೊಡಿಸುವ ಭರವಸೆ ನೀಡಿ ಹಲವರಿಂದ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿರುವ ದಂಪತಿ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪೌರಕಾರ್ಮಿಕರು ಸೇರಿದಂತೆ ಸಾಮಾನ್ಯರು ಮೋಸಕ್ಕೆ ಗುರಿಯಾಗಿರುವುದು ಬೆಳಕಿಗೆ ಬಂದಿದೆ.

ದೂರುದಾರ ಗಂಗಮ್ಮ ನೀಡಿರುವ ಮಾಹಿತಿಯ ಪ್ರಕಾರ, ಚಿಕ್ಕಸಂದ್ರದ ನಿವಾಸಿ ನರಸಿಂಹ ಮತ್ತು ಪತ್ನಿ ಸುಕನ್ಯಾ ‘ಲಕ್ಷ್ಮೀ ಪ್ರಸಾದ್ ಫೈನಾನ್ಸ್’ ಹೆಸರಿನಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ನಟ ದುನಿಯಾ ವಿಜಯ್ ಜೊತೆಗಿನ ಫೋಟೋಗಳನ್ನು ತೋರಿಸಿ ಆಪ್ತ ಸಂಬಂಧವಿದೆ ಎಂದು ಜನರಿಗೆ ನಂಬಿಕೆ ಮೂಡಿಸಿದ್ದಾಗಿ ಆರೋಪಿಸಲಾಗಿದೆ.

ಮಹಿಳೆಯರ ಉಳಿತಾಯ ಗುಂಪೊಂದನ್ನು ನಡೆಸುತ್ತಿದ್ದ ಗಂಗಮ್ಮ ಹಾಗೂ ಗುಂಪಿನ ಸದಸ್ಯರಿಗೆ, ಸುಕನ್ಯಾ ಸೈಟ್ ಇನ್ವೆಸ್ಟ್‌ಮೆಂಟ್ ಮಾಡಿದರೆ ಲಾಭ ಹೆಚ್ಚು ಸಿಗುತ್ತದೆ ಎಂದು ಹೇಳಿದ್ದಾಳೆ. ಇದೇ ವೇಳೆ ನರಸಿಂಹ ದೊಡ್ಡಬಳ್ಳಾಪುರದಲ್ಲೇ ಲೇಔಟ್ ಅಭಿವೃದ್ಧಿಯಾಗಿದೆ ಎಂದು ಕಥೆ ಕಟ್ಟಿಕೊಂಡು ಹಣ ಸಂಗ್ರಹಿಸಿದ್ದಾನೆ ಎನ್ನಲಾಗಿದೆ.

ಆದರೆ ಹಣ ತೆಗೆದುಕೊಂಡ ನಂತರ ಸೈಟ್‌ಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ನೀಡದೇ ವಂಚಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಪ್ರಕರಣದ ಕುರಿತು ಸೋಲದೇವನಹಳ್ಳಿ ಪೊಲೀಸರು ದಂಪತಿ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.