ಆಭರಣ ವ್ಯಾಪಾರಿಗೆ ವಂಚನೆ: ತಂದೆ–ಮಗ ಬಂಧನ : ₹1.60 ಕೋಟಿ ಮೌಲ್ಯದ ಚಿನ್ನದ ಗಟ್ಟಿ ವಶ
ಬೆಂಗಳೂರು: ಚಿನ್ನಾಭರಣ ವ್ಯಾಪಾರಿಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಪಡೆದು ವಂಚನೆ ನಡೆಸಿದ ಆರೋಪದ ಮೇಲೆ ತಂದೆ–ಮಗ ಜೋಡಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಮನೆಯಿಂದ ₹1.60 ಕೋಟಿ ಮೌಲ್ಯದ ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ನೆಹರೂನಗರದ ನಿವಾಸಿಗಳಾದ ರಾಜೇಂದ್ರ ಕುಮಾರ್ (63) ಮತ್ತು ಅವರ ಮಗ ಜೀವನ್ ಸಕಾರಿಯಾ (33) ಎಂದು ಗುರುತಿಸಲಾಗಿದೆ.
ನಗರ್ತಪೇಟೆಯ ಚಿನ್ನಾಭರಣ ವ್ಯಾಪಾರಿ ಹರ್ಷಿತ್ ಅವರಿಂದ ಹಂತ ಹಂತವಾಗಿ ಚಿನ್ನಾಭರಣಗಳನ್ನು ಪಡೆದು, ಮಾರಾಟ ಮಾಡಿ ಹಣ ನೀಡುವುದಾಗಿ ನಂಬಿಸಿ ಬಳಿಕ ಹಣ ನೀಡದೆ ವಂಚನೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಷಿತ್ ಅವರಿಗೆ ಆರೋಪಿಗಳು ಹಲವು ವರ್ಷಗಳಿಂದ ಪರಿಚಿತರಾಗಿದ್ದರಿಂದ ಯಾವುದೇ ದಾಖಲೆಗಳಿಲ್ಲದೆ ಆಭರಣಗಳನ್ನು ನೀಡಲಾಗಿತ್ತು. ಆದರೆ ಚಿನ್ನದ ದರ ಏರಿದ ಬಳಿಕ ಆರೋಪಿಗಳು ಹಣ ನೀಡದೆ, ಆಭರಣಗಳನ್ನೂ ಹಿಂದಿರುಗಿಸದೇ ಮೋಸ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಆರೋಪಿಗಳ ಮನೆಯಲ್ಲಿ ನಡೆಸಿದ ಶೋಧದಲ್ಲಿ 1 ಕೆ.ಜಿ. 300 ಗ್ರಾಂ ತೂಕದ ಚಿನ್ನದ ಗಟ್ಟಿ ಪತ್ತೆಯಾಗಿದೆ. ಆರೋಪಿಗಳು ಆಭರಣಗಳನ್ನು ಕರಗಿಸಿ ಗಟ್ಟಿ ರೂಪದಲ್ಲಿ ಬಚ್ಚಿಟ್ಟಿದ್ದರು.
ವಿಚಾರಣೆಯಲ್ಲಿ ಇದೇ ರೀತಿಯಲ್ಲಿ ಇತರ ವ್ಯಾಪಾರಿಗಳಿಗೂ ವಂಚನೆ ನಡೆಸಿರುವುದು ಬಹಿರಂಗವಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ವಂಚನೆಗೆ ಒಳಗಾದವರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
