ವಿದೇಶಿಗರೊಬ್ಬರ ವೀಡಿಯೊ ವೈರಲ್ | ಎಚ್ಚೆತ್ತುಕೊಂಡ ಅಧಿಕಾರಿಗಳು; ಬೆಂಗಳೂರಿನ ಪಾದಚಾರಿ ಮಾರ್ಗ ಸ್ವಚ್ಛ ನಮ್ಮ ಸಮಸ್ಯೆ ಪರಿಹಾರಕ್ಕೆ ವಿದೇಶಿಗರೇ ಬರಬೇಕೇ ಎಂದ ಜನರು

ವಿದೇಶಿಗರೊಬ್ಬರ ವೀಡಿಯೊ ವೈರಲ್ | ಎಚ್ಚೆತ್ತುಕೊಂಡ ಅಧಿಕಾರಿಗಳು; ಬೆಂಗಳೂರಿನ ಪಾದಚಾರಿ ಮಾರ್ಗ ಸ್ವಚ್ಛ    ನಮ್ಮ ಸಮಸ್ಯೆ ಪರಿಹಾರಕ್ಕೆ ವಿದೇಶಿಗರೇ ಬರಬೇಕೇ ಎಂದ ಜನರು
Photo credit: NDTV

ಬೆಂಗಳೂರು: ಕೆನಡಾದ ಪ್ರಜೆ ಕ್ಯಾಲೆಬ್ ಫ್ರೈಸೆನ್ ಅವರು ನಗರದ ಪಾದಚಾರಿ ಮಾರ್ಗಗಳ ದುಸ್ಥಿತಿಯನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ಕೆಲವೇ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹತ್ತಿರದ ಸ್ಟಾರ್‌ಬಕ್ಸ್‌ವರೆಗೆ 2.4 ಕಿ.ಮೀ ನಡಿಗೆಯ ವೇಳೆ ತೆರೆದ ಚರಂಡಿಗಳು, ಮುಳ್ಳುತಂತಿ ಹಾಗೂ ಅಸಮರ್ಪಕ ಮಾರ್ಗಗಳನ್ನು ಅವರು ವಿಡಿಯೋದಲ್ಲಿ ಸೆರೆಹಿಡಿದಿದ್ದರು.

 ವೀಡಿಯೊ ವೈರಲ್ ಆದ ನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸ್ವಚ್ಛತಾ ಅಭಿಯಾನ ನಡೆಸಿ ಪಾದಚಾರಿಗಳಿಗೆ ಸುರಕ್ಷಿತ ಮಾರ್ಗ ಒದಗಿಸಿದೆ. “ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿ ಹಾಗೂ ಸುರಕ್ಷಿತವಾಗಿ ಉಳಿಸುವುದು ನಮ್ಮ ಆದ್ಯತೆ” ಎಂದು ಪ್ರಾಧಿಕಾರವು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

 ತ್ವರಿತ ಕ್ರಮಕ್ಕೆ ಪ್ರತಿಕ್ರಿಯಿಸಿದ ಫ್ರೈಸೆನ್, “ ಕ್ರಮ ಕೈಗೊಂಡಿದ್ದಕ್ಕಾಗಿ ಧನ್ಯವಾದಗಳು @GBAoffic. ಈಗ ಪಾದಚಾರಿ ಮಾರ್ಗದಲ್ಲಿ ಮುಳ್ಳುತಂತಿ ಅಥವಾ ಪಾರ್ಕಿಂಗ್ ಇಲ್ಲ” ಎಂದು ಹೇಳಿದ್ದಾರೆ. ಅವರು ಮೊದಲು ಮತ್ತು ನಂತರದ ಚಿತ್ರಗಳನ್ನೂ ಪೋಸ್ಟ್ ಜೊತೆ ಹಂಚಿಕೊಂಡಿದ್ದಾರೆ.

ಈ ಬೆಳವಣಿಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅಧಿಕಾರಿಗಳ ಕ್ರಮವನ್ನು ಶ್ಲಾಘಿಸಿದರೆ, ಇತರರು “ಪ್ರತಿ ಬಾರಿ ವಿದೇಶಿಯೊಬ್ಬರು ಸಮಸ್ಯೆ ಎತ್ತಿಹಿಡಿದಾಗ ಮಾತ್ರ ಕ್ರಮ ಕೈಗೊಳ್ಳಬೇಕೇ?” ಎಂದು ಪ್ರಶ್ನಿಸಿದ್ದಾರೆ. “ಇದು ಕೇವಲ ಒಂದು ಬಾರಿಯ ಕ್ರಮ ಮಾತ್ರವೇ ಆಗದೆ ನಿಯಮಿತವಾಗಿ ನಡೆಯಬೇಕು” ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

 ಕ್ಯಾಲೆಬ್ ಫ್ರೈಸೆನ್ ಈಗಾಗಲೇ ಹಲವು ಬಾರಿ ಬೆಂಗಳೂರಿನ ಅಸಮರ್ಪಕತೆಗಳ ಬಗ್ಗೆ ವೀಡಿಯೊ ಹಂಚಿಕೊಂಡಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಅವರು ಹಂಚಿದ “ಸಭ್ಯ ಭಾರತದ ಸವಾಲು” ವೀಡಿಯೊ ಚರ್ಚೆಗೆ ಕಾರಣವಾಗಿತ್ತು. ದಿನನಿತ್ಯದ ಸಂವಹನಗಳಲ್ಲಿ ಭಾರತೀಯರು ಮೂಲಭೂತ ಸಭ್ಯತೆಯನ್ನು ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದ್ದರು.