ಗೋವಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ: ಪಿರಿಯಾಪಟ್ಟಣದ ಮೂವರು ಯುವಕರ ಬಂಧನ

ಗೋವಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ: ಪಿರಿಯಾಪಟ್ಟಣದ ಮೂವರು ಯುವಕರ ಬಂಧನ
Photo credit: TV09

ಮೈಸೂರು, ನ. 16: ಗೋವಾದ ಅರಂಬೋಲ್‌ ಬೀಚ್‌ನಲ್ಲಿ ವಿದೇಶಿ ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮೂವರು ಯುವಕರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

 ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲೇ ಪೊಲೀಸರು ಕ್ರಮಕೈಗೊಂಡಿದ್ದರು. ನಂತರ ಮೂವರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ರಾವಂದೂರು ಹೋಬಳಿಯ ಬೋಗನಹಳ್ಳಿ ಮೂಲದ ಬಿ.ಆರ್. ಕಾರ್ತಿಕ್‌ (28), ಬಿ.ಎನ್. ಸಂತೋಷ್‌ (33) ಮತ್ತು ಬಿ.ಎನ್. ರವಿ ಬಂಧಿತರಾಗಿದ್ದು, ನವೆಂಬರ್ 13ರಂದು ಅರಂಬೋಲ್‌ ಬೀಚ್‌ನಲ್ಲಿ ಘಟನೆ ನಡೆದಿತ್ತು. ವಿಡಿಯೋದಲ್ಲಿ ಯುವಕರು ವಿದೇಶಿ ಮಹಿಳೆಯರೊಂದಿಗೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಅವರ ಭುಜ ಹಾಗೂ ಸೊಂಟಕ್ಕೆ ಕೈಹಾಕಿರುವುದು ಸ್ಪಷ್ಟವಾಗಿತ್ತು.

ವೈರಲ್‌ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿದ ಗೋವಾ ಪೊಲೀಸರು, ಬೆಂಗಳೂರು ಮತ್ತು ಮೈಸೂರಿನಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 74 (ಮಹಿಳೆ ಮೇಲಿನ ಹಲ್ಲೆ ಅಥವಾ ಬಲಪ್ರಯೋಗ) ಮತ್ತು 124(2) (ಅಸಭ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.