“ಸಾವಿರದ ವಾಚೂ ಕಟ್ಟುತ್ತೇನೆ, 10 ಲಕ್ಷದ ವಾಚೂ ಕಟ್ಟುತ್ತೇನೆ”: ಡಿಸಿಎಂ ಡಿ.ಕೆ. ಶಿವಕುಮಾರ್

“ಸಾವಿರದ ವಾಚೂ ಕಟ್ಟುತ್ತೇನೆ, 10 ಲಕ್ಷದ ವಾಚೂ ಕಟ್ಟುತ್ತೇನೆ”: ಡಿಸಿಎಂ ಡಿ.ಕೆ. ಶಿವಕುಮಾರ್
DK ಶಿವಕುಮಾರ್

ಹಾಸನ, ಡಿ.06: ರಾಜ್ಯ ರಾಜಕೀಯದಲ್ಲಿ ಕೈಗಡಿಯಾರದ ವಿವಾದ ತೀವ್ರವಾಗಿರುವ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮಗೇ ಎದುರಾಗಿರುವ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ವಾಚ್ ಧರಿಸುವುದು ವೈಯಕ್ತಿಕ ಆಯ್ಕೆಯಾಗಿದ್ದು, ಅದನ್ನು ರಾಜಕೀಯಕ್ಕೆ ತರುವುದು ಅಸಂಗತ ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್,

“ನಾನು ಸಾವಿರ ರೂಪಾಯಿಯ ವಾಚೂ ಕಟ್ಟುತ್ತೇನೆ, 10 ಲಕ್ಷ ರೂಪಾಯಿಯ ವಾಚೂ ಕಟ್ಟುತ್ತೇನೆ. ಅದು ನನ್ನ ಪರಿಶ್ರಮದಿಂದ ಗಳಿಸಿದ ಆಸ್ತಿ. ನನ್ನ ಬದುಕು, ನನ್ನ ವ್ಯವಹಾರ ಯಾವುದು ಎಂಬುದು ಬಿಜೆಪಿ ನಾಯಕರಿಗೂ ಗೊತ್ತಿದೆ,” ಎಂದು ಹೇಳಿದ್ದಾರೆ.

“ಯಾರು ಪ್ಯಾಂಟ್ ಹಾಕಿದ್ರು, ವಾಚ್ ಕಟ್ಟಿದ್ರು, ಕನ್ನಡಕ ಹಾಕಿದ್ರೂ ಅದು ಅವರ ವೈಯಕ್ತಿಕ ವಿಷಯ. ಕೆಲವರು ಸಾವಿರ ರೂಪಾಯಿಯ ಶೂ ಹಾಕುತ್ತಾರೆ, ಇನ್ನಿಷ್ಟು ಮಂದಿ ಲಕ್ಷ ರೂಪಾಯಿಯ ಶೂ ಹಾಕುತ್ತಾರೆ. ಇದೊಬ್ಬರ ಖಾಸಗಿ ಆಯ್ಕೆ,” ಎಂದು ಹೇಳಿದ್ದಾರೆ.

ಇಡಿ ನೋಟಿಸ್ ಕುರಿತು ಸ್ಪಷ್ಟನೆ:

ಇಡಿದಿಂದ ನೀಡಿರುವ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಅವರು,“ನೋಟಿಸ್ ಓದಿದ್ದೇನೆ. ವಕೀಲರೊಂದಿಗೆ ಚರ್ಚಿಸಿ ವಿಚಾರಣೆಗೆ ಹಾಜರಾಗುವೆ. ಪಕ್ಷಕ್ಕೆ ಹಣ ಕೊಡದೆ ಇನ್ನಾರಿಗೋ ಕೊಡಬೇಕೇ?” ಎಂದು ಪ್ರಶ್ನಿಸಿದರು.

“ಭೂಮಿ ಗ್ಯಾರಂಟಿ ನಮ್ಮ ಸರ್ಕಾರದ ಆರನೇ ಗ್ಯಾರಂಟಿ”

ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಜೀವನ ಸುಧಾರಣೆಗೆ ಕಾರಣವಾಗಿವೆ ಎಂದು ಹೇಳಿದ ಡಿಕೆ ಶಿವಕುಮಾರ್,“ಮಾನವನ ಬದುಕು ಶಾಶ್ವತವಲ್ಲ; ಆದರೆ ಕೆಲಸ ಶಾಶ್ವತ. ಮಾತಿಗಿಂತ ಕಾಯಕ ಪ್ರಧಾನ. ಕೃಷ್ಣ ಭೈರೇಗೌಡರ ಕೆಲಸವೇ ನಮ್ಮ ಸರ್ಕಾರದ ಆರನೇ ಗ್ಯಾರಂಟಿ—ಭೂಮಿ ಗ್ಯಾರಂಟಿ. ಐದು ಗ್ಯಾರಂಟಿಗಳ ಮೂಲಕ ಈಗಾಗಲೇ 1 ಲಕ್ಷ ಕೋಟಿ ರೂಪಾಯಿ ಜನರ ಖಾತೆಗೆ ಜಮೆ ಮಾಡಲಾಗಿದೆ,” ಎಂದು ಹೇಳಿದರು.

ಮೇಕೆದಾಟು ಯೋಜನೆ ಜಾರಿಗೆ ಒತ್ತು

ಮೇಕೆದಾಟು ಯೋಜನೆ ಜಾರಿಯಾದರೆ ಕಾವೇರಿ ಕಣಿವೆಯ ಜನರಿಗೆ ನೀರಿನ ಭದ್ರತೆ ಸಾಧ್ಯವಾಗಲಿದೆ ಎಂದು ಹೇಳಿದರು.

“ದೇವರು ವರ–ಶಾಪ ಕೊಡೋದಿಲ್ಲ; ಅವಕಾಶ ಕೊಡುತ್ತಾನೆ. ಆ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಅನ್ನೋದೇ ಮುಖ್ಯ. ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ ಪರಿಹಾರವಾಗಿವೆ. ನಮ್ಮದು ಅಭಿವೃದ್ಧಿ ಮತ್ತು ಭರವಸೆಯ ಸರ್ಕಾರ,” ಎಂದು ಅವರು ಅಭಿಪ್ರಾಯಪಟ್ಟರು.