ಮಾಲೂರು ವಿಧಾನಸಭಾ ಫಲಿತಾಂಶ ರದ್ದು; ನಾಲ್ಕು ವಾರಗಳಲ್ಲಿ ಮರು ಮತ ಎಣಿಕೆ ನಡೆಸಲು ಹೈಕೋರ್ಟ್ ನಿರ್ದೇಶನ ಕಾಂಗ್ರೆಸ್‌ನ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆ ಅನೂರ್ಜಿತ

ಮಾಲೂರು ವಿಧಾನಸಭಾ ಫಲಿತಾಂಶ ರದ್ದು; ನಾಲ್ಕು ವಾರಗಳಲ್ಲಿ ಮರು ಮತ ಎಣಿಕೆ ನಡೆಸಲು ಹೈಕೋರ್ಟ್ ನಿರ್ದೇಶನ    ಕಾಂಗ್ರೆಸ್‌ನ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆ ಅನೂರ್ಜಿತ
Photo credit; votesmart (MLA ನಂಜೇಗೌಡ)

ಬೆಂಗಳೂರು: ಕೋಲಾರದ ಮಾಲೂರು ವಿಧಾನಸಭಾ ಕ್ಷೇತ್ರದ ಕಳೆದ ಚುನಾವಣಾ ಫಲಿತಾಂಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು, ಕಾಂಗ್ರೆಸ್‌ನ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆ ಅನೂರ್ಜಿತವಾಗಿದೆ. ಮುಂದಿನ ನಾಲ್ಕು ವಾರಗಳಲ್ಲಿ ಮರು ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚಿಸಿದೆ.

 ನ್ಯಾಯಮೂರ್ತಿ ಆರ್. ದೇವದಾಸ್ ನೇತೃತ್ವದ ಏಕಸದಸ್ಯ ಪೀಠವು, ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ ಅವರು ಸಲ್ಲಿಸಿದ್ದ ಚುನಾವಣಾ ರಿಟ್ ಅರ್ಜಿಯನ್ನು ಅಂಗೀಕರಿಸಿ ಈ ಮಹತ್ವದ ತೀರ್ಪು ನೀಡಿದೆ.

ಮಾಲೂರು ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅನೇಕ ಲೋಪದೋಷಗಳಾಗಿವೆ ಎಂಬ ಆರೋಪದ ಮೇರೆಗೆ ಪರಾಜಿತ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ನಂಜೇಗೌಡ ಅವರ ಗೆಲುವು ಅನೂರ್ಜಿತ ಎಂದು ಘೋಷಿಸಬೇಕೆಂದು ಅವರು ತಮ್ಮ ಅರ್ಜಿಯಲ್ಲಿ ಅವರು ವಾದಿಸಿದ್ದರು.

ಮತ ಎಣಿಕೆಯ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಶೇಖರಿಸಿರುವ ಹಾರ್ಡ್‌ಡಿಸ್ಕ್‌ನ್ನು ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಆಗಿನ ಕೋಲಾರ ಜಿಲ್ಲಾ ಚುನಾವಣಾಧಿಕಾರಿ ವೆಂಕಟರಾಜು ಅವರು ಪ್ರಮಾಣಪತ್ರದ ಮೂಲಕ ನ್ಯಾಯಾಲಯಕ್ಕೆ ವಿವರ ನೀಡಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.

ತೀರ್ಪಿನ ಕುರಿತು, ತಕ್ಷಣ ನಂಜೇಗೌಡ ಪರ ವಕೀಲರು ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಘೋಷಿಸಿದರು. ಜೊತೆಗೆ, ಹೈಕೋರ್ಟ್ ಆದೇಶಕ್ಕೆ ತಾತ್ಕಾಲಿಕ ತಡೆ ನೀಡುವಂತೆ ಮನವಿ ಮಾಡಿದರು. ಈ ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ತನ್ನ ಆದೇಶ ಜಾರಿಗೆ 30 ದಿನಗಳ ಕಾಲ ತಡೆಯಾಜ್ಞೆ ನೀಡಿದೆ.