ಮೆಟ್ರೋ ಸಂಚಾರಕ್ಕೆ ಅಡ್ಡಿ ಗಲಾಟೆ ಮಾಡಿದವರ ವಿರುದ್ಧ BMRCL ದೂರು
ಬೆಂಗಳೂರು, ನ. 18: ನಗರದಲ್ಲಿ ಸೋಮವಾರ ಬೆಳಗ್ಗೆ ನಮ್ಮ ಮೆಟ್ರೋ ಸಂಚಾರ ವ್ಯತ್ಯಯಗೊಂಡಿದ್ದು, ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಗುಂಪೊಂದು ರೈಲು ಹೊರಡುವುದನ್ನು ತಡೆಯಲು ಪ್ರಯತ್ನಿಸಿದ ಘಟನೆಯು ನಡೆದಿದೆ. ಈ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಜಯನಗರ ಪೊಲೀಸ್ ಠಾಣೆಗೆ BMRCL ಅಧಿಕಾರಿಗಳು ದೂರು ಸಲ್ಲಿಸಿದ್ದಾರೆ.
ತಾಂತ್ರಿಕ ಕಾರಣಗಳಿಂದಾಗಿ ಬೆಳಿಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಸಂಚಾರ 6 ಗಂಟೆಗೆ ಮುಂದೂಡಲ್ಪಟ್ಟಿತ್ತು. ವಿಳಂಬಕ್ಕೆ ಅಸಮಾಧಾನಗೊಂಡ ಸುಮಾರು 10–15 ಮಂದಿ ಪ್ರಯಾಣಿಕರು ಹಳದಿ ಮಾರ್ಗದ ರೈಲು ಪ್ಲಾಟ್‌ಫಾರ್ಮ್‌ಗೆ ಬಂದಾಗ ಬಾಗಿಲು ಮುಚ್ಚಲು ಬಿಡದೆ ತಡೆದಿದ್ದಾರೆ. ಬಾಗಿಲಿನಲ್ಲಿ ಕಾಲಿಟ್ಟು, ಸಿಬ್ಬಂದಿಗಳ ಸೂಚನೆಗೂ ಕಿವಿಗೊಡದೆ ರೈಲು ಚಲನೆಗೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಳಿಗ್ಗೆ 6 ಗಂಟೆಗೆ ಹೊರಡಬೇಕಿದ್ದ ರೈಲು ಪ್ರಯಾಣಿಕರ ಗಲಾಟೆಯ ಮಧ್ಯೆ ಸುಮಾರು 35 ನಿಮಿಷ ನಿಲ್ದಾಣದಲ್ಲೇ ನಿಂತಿತು. ಮೆಟ್ರೋ ನಿರ್ವಾಹಕ ಅಜಿತ್ ಜೆ. ಅವರು ಹಲವು ಬಾರಿ ವಿನಂತಿಸಿದರೂ ಬಾಗಿಲು ಮುಚ್ಚಲು ಬಿಡದೇ ಗಲಾಟೆ ಮುಂದುವರಿದಿದೆ. ಇದರ ಪರಿಣಾಮವಾಗಿ ಹಳದಿ ಮಾರ್ಗದ ಸಂಚಾರ 6 ಗಂಟೆಗೆ ಬದಲಾಗಿ 6.30ಕ್ಕೆ ಆರಂಭವಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಸಿಲ್ಕ್‌ಬೋರ್ಡ್–ಬೊಮ್ಮಸಂದ್ರ ಮಾರ್ಗದಲ್ಲಿ ಶಾರ್ಟ್ ಲೂಪ್ ಸೇವೆ ಜಾರಿಗೆ ತರಲಾಯಿತು.
ಪ್ಯಾಟ್ರೋಲ್ ಡ್ಯೂಟಿಯಲ್ಲಿದ್ದ ಸಿಬ್ಬಂದಿ ಬೆಳಿಗ್ಗೆ 5.30ರ ವೇಳೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಿದ್ದಾಗಲೇ ಕೆಲವು ಪ್ರಯಾಣಿಕರು ಸಮಯದ ಬಗ್ಗೆ ಏರುಸ್ವರದಲ್ಲಿ ಪ್ರಶ್ನೆ ಮಾಡುತ್ತಿದ್ದರೆಂದು ತಿಳಿಸಲಾಗಿದೆ. ಸಮಯ ಬದಲಾವಣೆಯ ಮಾಹಿತಿ ನೀಡಿದರೂ, ಗುಂಪು ಇತರೆ ಪ್ರಯಾಣಿಕರನ್ನು ಪ್ರಚೋದಿಸಿ ಕಾನೂನು ಬಾಹಿರವಾಗಿ ರೈಲು ತಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಸಂಚಾರಕ್ಕೆ ಅಡ್ಡಿಪಡಿಸಿ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಯನಗರ ಪೊಲೀಸ್ ಠಾಣೆಗೆ BMRCL ದೂರು ನೀಡಿದೆ.
