ಕೊಡಗು ಮೂಲದ ಸ್ಯಾಂಡಲ್‌ವುಡ್ ನಟಿಗೆ ಲೈಂಗಿಕ ಕಿರುಕುಳ: ರಿಯಲ್ ಎಸ್ಟೇಟ್ ಉದ್ಯಮಿ ಬಂಧನ
ಬೆಂಗಳೂರು: ಕೊಡಗ ಮೂಲದ ಸ್ಯಾಂಡಲ್‌ವುಡ್ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಎವಿಆರ್ ಗ್ರೂಪ್ ಸಂಸ್ಥಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಅವರನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಟಿಯ ಭಾವಚಿತ್ರ ಮತ್ತು ವಿಡಿಯೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆರೋಪವೂ ಅವರ ಮೇಲಿದೆ.
ದೂರು ಆಧರಿಸಿ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಅ.17ರಂದು ಪ್ರಕರಣ ದಾಖಲಿಸಲಾಗಿತ್ತು. ನಂತರ ಪ್ರಕರಣವನ್ನು ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಹಾಗೂ ಗೋವಿಂದರಾಜನಗರ ಠಾಣೆಯ ಇನ್ಸ್‌ಪೆಕ್ಟರ್ ಸುಬ್ರಮಣ್ಯ ಅವರ ನೇತೃತ್ವದ ತಂಡಕ್ಕೆ ಹಸ್ತಾಂತರಿಸಲಾಗಿತ್ತು. ಪೊಲೀಸರು ಪಡೆದ ಮಾಹಿತಿಯ ಮೇರೆಗೆ ಶ್ರೀಲಂಕಾದಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ ಅರವಿಂದ್ ಅವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನಂತರ 46ನೇ ಎಸಿಎಂಎಂ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಿದೆ.
ಕೊಡಗು ಮೂಲದ ಈ ನಟಿ 2015ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಒಂಭತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2021ರಲ್ಲಿ ಶ್ರೀಲಂಕಾದಲ್ಲಿ ನಡೆದ ಲಾರ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಅತಿಥಿಯಾಗಿ ಹಾಜರಾಗುವ ವೇಳೆ ಆರೋಪಿ ಅರವಿಂದ್ ಜೊತೆ ಪರಿಚಯ ಬೆಳೆದಿತ್ತು. ನಂತರ ಸ್ನೇಹ ಆತ್ಮೀಯತೆಗೆ ತಿರುಗಿದರೂ, ಕಾಲಕ್ರಮೇಣ ಆರೋಪಿ ವರ್ತನೆಯಲ್ಲಿ ವ್ಯತ್ಯಾಸ ಕಂಡ ನಟಿ ಅಂತರ ಕಾಯ್ದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ನಟಿಯ ಇನ್‌ಸ್ಟಾಗ್ರಾಮ್‌ನಲ್ಲಿ ಇದ್ದ ಭಾವಚಿತ್ರಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಪೋಸ್ಟ್ ಮಾಡುತ್ತಿದ್ದ ಎನ್ನುವ ಆರೋಪವಿದೆ. ಅಲ್ಲದೆ, ನಟಿಯ ಮನೆಗೆ ಹುಡುಗರನ್ನು ಕಳುಹಿಸಿ ಪೋಷಕರಿಗೆ ಬೆದರಿಕೆ ಹಾಕಿದ್ದ, ತಮ್ಮನನ್ನು ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದ ಎನ್ನಲಾಗಿದೆ. ನಿರಂತರ ಕಿರುಕುಳದಿಂದ ಬೇಸತ್ತು ನಟಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಆರೋಪಿಯೇ ಬಂದು ಹಲ್ಲೆ ನಡೆಸಿದ ಘಟನೆಯೂ ನಡೆದಿತ್ತು ಎಂದು ತಿಳಿದು ಬಂದಿದೆ.
ಕಿರುಕುಳದ ಹಿನ್ನೆಲೆಯಲ್ಲಿ ನಟಿ ಬನಶಂಕರಿ ಮಹಿಳಾ ಠಾಣೆ ಹಾಗೂ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪಿ ಮುಂದೆ ನಿಮಗೆ ತೊಂದರೆ ನೀಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದ. ಆದರೂ ಒಂದು ವರ್ಷದ ಬಳಿಕ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದ ಎನ್ನಲಾಗಿದೆ. ನಟಿಯ ಮನೆಯ ಮಾಲೀಕರಿಗೆ ಪತ್ರ ಕಳುಹಿಸಿ ‘ವೇಶ್ಯಾವಾಟಿಕೆ’ ಆರೋಪ ಮಾಡಿದ್ದರಿಂದ ಮಾನಹಾನಿಯಾಗಿದೆ ಎಂದು ನಟಿ ಆರೋಪಿಸಿದ್ದಾರೆ.
ಶ್ರೀಲಂಕಾದಲ್ಲಿ ರೆಸಾರ್ಟ್ ಮಾಲೀಕನಾಗಿರುವ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಅರವಿಂದ್, ಮಹಾರಾಜ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಮಾಲೀಕನಾಗಿಯೂ ಆಗಿದ್ದಾರೆ. ಬಂಧನದ ಭೀತಿಯಿಂದ ವಿದೇಶದಲ್ಲೇ ತಂಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದರು.
ಪೊಲೀಸರ ವಿಚಾರಣೆಯಲ್ಲಿ ಆರೋಪಿ ತನ್ನ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದು, “ಸೈಟ್, ಮನೆ, ದುಬಾರಿ ಕಾರಿಗೆ ಕೋಟ್ಯಂತರ ರೂ. ಖರ್ಚು ಮಾಡಿ ಕೊಡಿಸಿದ್ದೆ. ನಟಿಪ ನನಗೆ ಮೋಸ ಮಾಡಿದ್ದಾಳೆ. ನಾನು ಯಾವುದೇ ರೀತಿಯಲ್ಲಿ ಕಿರುಕುಳ ನೀಡಿಲ್ಲ,” ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
